ಶಿವಮೊಗ್ಗ: ''ಕಳೆದ ಚುನಾವಣೆಗಿಂತ ಈ ಚುನಾವಣೆಯಲ್ಲಿ ನಮಗೆ ಪಾಸಿಟಿವ್ ವಾತಾವರಣವಿದೆ. ಚುನಾವಣೆ ಎಂಬುದು ಮೈಂಡ್ ಸ್ಟ್ರಾಟಜಿ ಅಲ್ಲ, ಹಾರ್ಟ್ ಸ್ಟ್ರಾಟಜಿ. ಎಲ್ಲವೂ ಹೃದಯದಿಂದಲೇ ನಡೆಯೋದು'' ಎಂದು ನಟ ಶಿವರಾಜ್ಕುಮಾರ್ ಹೇಳಿದ್ರು.
ಇಂದಿನಿಂದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ಕುಮಾರ್ ತಮ್ಮ ಪ್ರಚಾರವನ್ನು ಅಧಿಕೃತವಾಗಿ ಪ್ರಾರಂಭಿಸಿದ್ದಾರೆ. ಬೆಳಗ್ಗೆ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಪತಿ, ನಟ ಶಿವರಾಜ್ಕುಮಾರ್, ಕಳೆದ ವಾರ ಎರಡು ದಿನ ಪ್ರವಾಸ ಮಾಡಿದ್ದೆವು. ನಮಗೆ ಭದ್ರಾವತಿಯಲ್ಲಿ ಒಳ್ಳೆಯ ಸ್ವಾಗತ ಸಿಕ್ಕಿತ್ತು. ಈ ಬಾರಿ ಹೊಸತನವಿದೆ, ಆತ್ಮವಿಶ್ವಾಸವಿದೆ. ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಇಲ್ಲಿ ಎಷ್ಟು ಜನ ಸೇರುತ್ತಾರೆ ಅನ್ನೋದಕ್ಕಿಂತ, ಚುನಾವಣೆಯನ್ನು ಹೇಗೆ ನೋಡುತ್ತಾರೆ ಅನ್ನೋದು ಮುಖ್ಯ. ಎಲ್ಲಾರಿಗೂ ಬದಲಾವಣೆ ಬೇಕು ಎಂದು ನನಗನಿಸುತ್ತಿದೆ ಎಂದರು.
ಜನರಿಗೆ ನಮ್ಮ ಕೆಸಲದ ಕುರಿತು ನಂಬಿಕೆ ಬರಬೇಕು. ಬೇರೆಯವರಂತೆ ನಾವು ತಿರುಚಿ ಮಾತನಾಡುವವರಲ್ಲ. ನಮ್ಮದು ನೇರ ಮಾತನಾಡುವ ಕುಟುಂಬ. ಬಹಳ ನಿಯತ್ತಿನಲ್ಲಿ ಇರುವಂತಹವರು ನಾವು. ಹೃದಯಕ್ಕೆ ಏನನಿಸುತ್ತದೆಯೋ, ಅದೇ ಬಾಯಲ್ಲೂ ಬರುತ್ತದೆ. ಗೀತಾ ಒಂದು ಪಕ್ಷದಿಂದ ಬಂದವರು. ಆ ಪಕ್ಷವನ್ನು ಫಾಲೋ ಮಾಡಿ, ಜನರಿಗೆ ಏನು ಬೇಕೋ ಅದನ್ನು ಕೊಡಬೇಕು. ನಾನು ಈಗಾಗಲೇ ಗೀತಾ ಅವರ ಬಳಿ ಮಾತನಾಡಿದ್ದೇನೆ. ಇಲ್ಲಿನ ಸಮಸ್ಯೆ ಏನೆಂಬುದನ್ನು ಅರಿತು, ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಕರ್ನಾಟಕ ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ ಕಡಿಮೆ ಇದೆ. ಮಹಿಳೆಯರಿಗೆ ಅವಕಾಶ ಸಿಗಬೇಕೆಂದರು.
ನಮ್ಮದು ಮೈಂಡ್ ಸ್ಟ್ರಾಟಜಿ ಅಲ್ಲ, ನಮ್ಮದು ಹಾರ್ಟ್ ಸ್ಟ್ರಾಟಜಿ. ಮಾಧ್ಯಮದವರಿಗೆ ಇಲ್ಲಿನ ಸಮಸ್ಯೆ ಮತ್ತು ಜನರಿಗೆ ಏನು ಬೇಕು ಎಂಬುದು ನಿಮಗೆ ತಿಳಿದಿರುತ್ತದೆ. ಅದನ್ನು ನಮಗೆ ತಿಳಿಸಿ ಎಂದರು. ಇನ್ನು, ನನಗೆ 62 ವರ್ಷ. ನಾನು ವೋಟ್ ಮಾಡಲು ಶುರು ಮಾಡಿ 40 ವರ್ಷ ಆಯಿತು. ನನಗೆ ಸ್ವಲ್ಪ ಸ್ವಲ್ಪ ರಾಜಕೀಯ ಅರ್ಥವಾಗುತ್ತಿದೆ. ನಾನೇ ರಾಜಕೀಯಕ್ಕೆ ಬರಬೇಕು ಎಂದೇನಿಲ್ಲ. ಗೀತಾ ಅವರು ರಾಜಕೀಯಕ್ಕೆ ಬಂದಿದ್ದಾರೆ. ನಾನು ಅವರಿಗೆ ಬೆಂಬಲ ನೀಡುತ್ತಿದ್ದೇನೆ ಎಂದು ತಿಳಿಸಿದರು.