ಕರ್ನಾಟಕ

karnataka

ETV Bharat / state

ಬಯಲುಸೀಮೆಯಲ್ಲಿ ಹಸಿರು ಸಸ್ಯೋದ್ಯಾನ; ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಸಾಲುಮರದ ತಿಮ್ಮಕ್ಕ ಪಾರ್ಕ್​ - SALUMARADA TIMMAKKA PARK

ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ಹಸಿರಿನಿಂದ ಪ್ರವಾಸಿಗರು ಮತ್ತು ಮಕ್ಕಳನ್ನು ಆಕರ್ಷಿಸುತ್ತಿದೆ. ಬಸ್​ ನಿಲ್ದಾಣ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದರೆ ಇನ್ನಷ್ಟು ಪ್ರವಾಸಿಗರು ಭೇಟಿ ನೀಡಿ ಶುದ್ಧ ಗಾಳಿ ಜೊತೆ ಸುಂದರ ಪರಿಸರವನ್ನು ಸವಿಯಬಹುದು.

SALUMARADA TIMMAKKA PARK
ಸಾಲುಮರದ ತಿಮ್ಮಕ್ಕ ಪಾರ್ಕ್​ (ETV Bharat)

By ETV Bharat Karnataka Team

Published : Dec 24, 2024, 5:33 PM IST

ಹಾವೇರಿ: ತಾಲೂಕಿನ ಕರ್ಜಗಿ ಬಳಿ ನಿರ್ಮಾಣಗೊಂಡಿರುವ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಅರಣ್ಯ ಇಲಾಖೆ ಮೊದಲಿದ್ದ ಕುರುಚಲು ಕಾಡನ್ನು ಸ್ವಚ್ಛಗೊಳಿಸಿ ಸಾಲುಮರದ ತಿಮ್ಮಕ್ಕ ಪಾರ್ಕ್​ ನಿರ್ಮಿಸಿದೆ.

ಸುಮಾರು 20 ಎಕರೆ ವಿಸ್ತೀರ್ಣದಲ್ಲಿರುವ ಸಸ್ಯೋದ್ಯಾನದಲ್ಲಿ ವಿವಿಧ ಬಗೆಯ ಸಾವಿರಾರು ಗಿಡಗಳನ್ನು ಬೆಳೆಸಲಾಗಿದೆ. ಗಿಡಗಳು ಹಸಿರಿನಿಂದ ಕಂಗೊಳಿಸುತ್ತಿದ್ದು, ಮನಸ್ಸಿಗೆ ಮುದ ನೀಡುತ್ತವೆ. ಅಲಂಕಾರಿಕ ಸಸ್ಯೆಗಳು ಸೇರಿದಂತೆ ವಿವಿಧ ಬಗೆಯ ಮರಗಳು ಪರಿಸರ ಪ್ರೇಮಿಗಳನ್ನು ಆಕರ್ಷಿಸುತ್ತಿವೆ. ಇನ್ನು ಸಿಮೆಂಟ್‌ನಲ್ಲಿ ನಿರ್ಮಿಸಿರುವ ನವಿಲು, ಜಿಂಕೆ ಸೇರಿದಂತೆ ವಿವಿಧ ಪ್ರಾಣಿಗಳು ಪ್ರವಾಸಿಗರಿಗೆ ಕಾಡಿನ ಅನುಭವ ನೀಡುತ್ತಿವೆ. ವೀಕ್ಷಣಾ ಗೋಪುರ, ಗುಂಪಾಗಿ ಕುಳಿತುಕೊಳ್ಳಲು ಮಾಡಿರುವ ಕಾಟೇಜ್‌ಗಳು ಸುಂದರವಾಗಿವೆ.

ಬಯಲುಸೀಮೆಯಲ್ಲಿ ಹಸಿರು ಸಸ್ಯೋದ್ಯಾನ; ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಸಾಲುಮರದ ತಿಮ್ಮಕ್ಕ ಪಾರ್ಕ್​ (ETV Bharat)

ಚಿಣ್ಣರನ್ನು ಸೆಳೆಯುತ್ತಿರುವ ಆಟೋಪಕರಣಗಳು; ಈ ಉದ್ಯಾನವನದಲ್ಲಿ ಮಕ್ಕಳಿಗೆ ಆಟ ಆಡಲು ಇರುವ ವಿವಿಧ ಆಟೋಪಕರಣಗಳನ್ನೂ ಸಹ ಇಲ್ಲಿ ಸ್ಥಾಪಿಸಲಾಗಿದ್ದು, ಚಿಣ್ಣರನ್ನು ಸೆಳೆಯುತ್ತಿವೆ. ಜೋಕಾಲಿ, ಜಾರುಬಂಡಿ, ತಿರುಗುಣಿ, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಆಟೋಪಕರಣಗಳು ಚಿಣ್ಣರನ್ನು ಆಕರ್ಷಿಸುತ್ತಿವೆ.

ಕಾಡು ಪ್ರಾಣಿ-ಪಕ್ಷಿಗಳ ಕುರಿತು ವಿವರಣೆ; ಸಸ್ಯೋದ್ಯಾನದ ಪ್ರತಿ ದಾರಿಯಲ್ಲಿ ಅರಣ್ಯಪ್ರೇಮ ಸಾರುವ ಫಲಕಗಳನ್ನು ಹಾಕಲಾಗಿದೆ. ದಾರಿಗಳ ಇಕ್ಕೆಲಗಳಲ್ಲಿ ಕಾಡುಪ್ರಾಣಿ ಮತ್ತು ಪಕ್ಷಿಗಳ ಚಿತ್ರಗಳು ಸಹ ಇಲ್ಲಿವೆ. ಅಲ್ಲದೆ ಪ್ರಾಣಿಪಕ್ಷಿಗಳ ಕುರಿತ ವಿವರಣೆಯನ್ನು ಸಹ ಬರೆಯಲಾಗಿದೆ.

ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ಆಟ ಆಡ್ತಿರುವ ಮಕ್ಕಳು (ETV Bharat)

ಗಿಡಮರಗಳ ವೈಜ್ಞಾನಿಕ ಹೆಸರು ಮತ್ತು ಮಾಹಿತಿ: ಕೆಲವೊಂದು ಗಿಡಗಳ ವೈಜ್ಞಾನಿಕ ಹೆಸರು ಮತ್ತು ಅವುಗಳ ಮಹತ್ವವನ್ನು ಸಾರುವ ಫಲಕಗಳು ಪ್ರವಾಸಿಗರಲ್ಲಿ ಪರಿಸರಪ್ರೇಮ ಬೆಳೆಸುತ್ತವೆ.

ರಜಾ ದಿನಗಳು ಮತ್ತು ವೀಕೆಂಡ್​​ನಲ್ಲಿ ಕುಟುಂಬ ಸಮೇತ ಆಗಮಿಸುವ ಜನ; ವಾರಾಂತ್ಯದ ದಿನಗಳು ಸೇರಿದಂತೆ ರಜಾ ದಿನಗಳಲ್ಲಿ ಇಲ್ಲಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈ ಹಸಿರು ವಾತಾವರಣದಲ್ಲಿ ಅಲೆದಾಡಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಪ್ರವಾಸಿಗರು ಸಂಭ್ರಮಿಸುತ್ತಾರೆ. ಇನ್ನೂ ಕೆಲವರು ರೀಲ್ಸ್‌ಗಾಗಿ ವಿಡಿಯೋಗಳನ್ನು ಸೆರೆಹಿಡಿದು ಸಂಭ್ರಮಿಸುತ್ತಾರೆ. ಮನೆಯ ಸದಸ್ಯರೆಲ್ಲಾ ಬಂದು ಪರಿಸರದ ಸೌಂದರ್ಯ ಸವೆದು ಗುಂಪು ಭೋಜನ ಸವಿಯುತ್ತಾರೆ.

ಸಸ್ಯೋದ್ಯಾನ ನೋಡಿ ಪ್ರವಾಸಿಗರ ಸಂತಸ (ETV Bharat)

ದಿನನಿತ್ಯದ ಜಂಜಾಟ ಒತ್ತಡದ ಬದುಕಿನಲ್ಲಿ ರಿಲ್ಯಾಕ್ಸ್​ ಪಡೆಯಲು ಈ ಸ್ಥಳ ಹೇಳಿ ಮಾಡಿಸಿದಂತಿದೆ. ಈ ರೀತಿಯ ತಾಣಗಳಿಗೆ ಭೇಟಿ ನೀಡಿ ಪರಿಸರ ಸೌಂದರ್ಯ ಸವಿಯುವದು. ಕೆಲಕಾಲ ಒತ್ತಡ ಮರೆತು ಜೀವನಕ್ಕೆ ಮತ್ತೆ ಉತ್ಸಾಹ ತುಂಬುತ್ತದೆ ಎನ್ನುತ್ತಾರೆ ಪ್ರವಾಸಿಗರು. ಇಲ್ಲಿಯ ವಾತಾವರಣ ಕೆಲವರಿಗಂತೂ ಅಚ್ಚುಮೆಚ್ಚಾಗಿದ್ದು ಪ್ರತಿವಾರಕ್ಕೆ ಒಮ್ಮೆಯಾದರು ಈ ತಾಣಕ್ಕೆ ಭೇಟಿ ನೀಡುವುದಾಗಿ ತಿಳಿಸುತ್ತಾರೆ.

ಬೇಕಿದೆ ಬಸ್​ ನಿಲ್ದಾಣ, ಕುಡಿಯುವ ನೀರಿನ ವ್ಯವಸ್ಥೆ; ಈ ಉದ್ಯಾನವನಕ್ಕೆ ಬಸ್ ನಿಲ್ದಾಣವಿಲ್ಲಾ ಇಲ್ಲಿ ಸಾರಿಗೆ ಬಸ್‌ಗಳು ನಿಲುಗಡೆ ಇಲ್ಲಾ ಎಂದು ಪ್ರವಾಸಿಗರು ಬೇಸರ ವ್ಯಕ್ತಪಡಿಸುತ್ತಾರೆ. ಹಾವೇರಿಯಿಂದ ಕರ್ಜಗಿ ಮಾರ್ಗವಾಗಿ ಸಂಚರಿಸುವ ಸಾರಿಗೆ ಬಸ್‌ಗಳು ಇಲ್ಲಿ ನಿಲುಗಡೆಯಾದರೆ ಪ್ರವಾಸಿಗರ ಸಂಖ್ಯೆ ಅಧಿಕವಾಗಲಿದೆ. ಇನ್ನು ಉದ್ಯಾನವದಲ್ಲಿ ಪ್ರವಾಸಿಗರಿಗೆ ಕುಡಿಯುವ ನೀರಿನ ಸೌಲಭ್ಯವಿಲ್ಲಾ. ಈ ಕೆಲವು ಇಲ್ಲಗಳನ್ನು ನಿವಾರಣೆ ಮಾಡಿಕೊಂಡರೆ ಕರ್ಜಗಿಯ ಸಾಲುಮರದ ತಿಮ್ಮಕ್ಕ ಉದ್ಯಾನವನ ಇನ್ನೂ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲಾ ಎನ್ನುತ್ತಾರೆ ಪರಿಸರಪ್ರೇಮಿಗಳು.

ಇದನ್ನೂ ಓದಿ:ಬನವಾಸಿಯಲ್ಲಿ ಅರಣ್ಯ ಇಲಾಖೆಯಿಂದ ಉದ್ಯಾನವನಕ್ಕೆ ಡಿಜಿಟಲ್ ಸ್ಪರ್ಶ: ಕ್ಯೂಆರ್​ ಸ್ಕ್ಯಾನ್ ಮಾಡಿದಲ್ಲಿ ಸಿಗಲಿದೆ ಕದಂಬರ ಇತಿಹಾಸ

ABOUT THE AUTHOR

...view details