ಕರ್ನಾಟಕ

karnataka

ETV Bharat / state

'ಸ್ವಾಭಿಮಾನದೆದುರು ಪಕ್ಷ ಕಟ್ಟಿಕೊಂಡು ಏನು ಮಾಡಲಿ?': ಪುಟ್ಟಣ್ಣ ಪರ ಪ್ರಚಾರಕ್ಕೆ ಸೋಮಶೇಖರ್ ಸಮರ್ಥನೆ

ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅವರು ಪುಟ್ಟಣ್ಣ ಪರ ಪ್ರಚಾರ ನಡೆಸುತ್ತಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.

ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್
ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್

By ETV Bharat Karnataka Team

Published : Feb 13, 2024, 9:55 PM IST

ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿಕೆ

ಬೆಂಗಳೂರು:ನಾನೂ ಬಿಜೆಪಿಯ ಶಾಸಕ. ಎರಡು ಸಲ ನನ್ನ ಕ್ಷೇತ್ರಕ್ಕೆ ಎ.ಪಿ.ರಂಗನಾಥ ಬಂದಿದ್ದಾನೆ. ಕೃಪೆಗಾಗಿಯೂ ಅವರು ನನ್ನ ಕರೆಯಲಿಲ್ಲ. ಆದರೆ ಪುಟ್ಟಣ್ಣ ಬಂದು ಕರೆದರು. ಹಾಗಾಗಿ ಪ್ರಚಾರ ಮಾಡಿದೆ. ಅಷ್ಟಕ್ಕೂ ರಂಗನಾಥ್ ಬಿಜೆಪಿ ಅಭ್ಯರ್ಥಿ ಅಲ್ಲ. ಜೆಡಿಎಸ್ ಅಭ್ಯರ್ಥಿ. ನನ್ನ ವರ್ತನೆಯನ್ನು ನೀವು ಪಕ್ಷ ವಿರೋಧಿ ಚಟುವಟಿಕೆ ಅಂತೀರಾ?. ನನಗೂ ಸ್ವಾಭಿಮಾನ ಇಲ್ವಾ? ಎಂದು ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಮೈತ್ರಿ ಅಭ್ಯರ್ಥಿ ವಿರುದ್ಧ ಕಿಡಿಕಾರಿದ್ದು, ಪುಟ್ಟಣ್ಣ ಪರ ಪ್ರಚಾರ ನಡೆಸುತ್ತಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ನನ್ನ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದೆ. ಆಗ ಪುಟ್ಟಣ್ಣ ಫೋನ್ ಮಾಡಿ ಬರ್ಲಾ ಅಂದರು. ಬಾ ಅಂದೆ. ಅಲ್ಲಿ ಸಭೆಯಲ್ಲಿ ನನ್ನ ಪರ ಅಪ್ರೋಚ್ ಮಾಡು ಅಂದರು. ನಾನು ಸಭೆಗೆ ಬಂದಿದ್ದವರ ಜತೆ ಮತ ಹಾಕಲು ಹೇಳಿದೆ. ಬಿಜೆಪಿಯವರು ನನ್ನ ಕ್ಷೇತ್ರದಲ್ಲಿ ಪ್ರಚಾರ ಮಾಡಿದರೂ ನನ್ನನ್ನು ಕರೆದಿಲ್ಲ. ಪುಟ್ಟಣ್ಣ ಬಂದು ಕೋರಿಕೊಂಡರು. ಹಾಗಾಗಿ ನಾನು ಪುಟ್ಟಣ್ಣ ಪರ ಮತ ಹಾಕಲು ಕೇಳಿಕೊಂಡೆ. ತಪ್ಪೇನು? ಎಂದರು.

ನನ್ನ ಕ್ಷೇತ್ರದಲ್ಲಿ ಎಲ್ಲ ಬಿಜೆಪಿ ನಾಯಕರು ಪ್ರಚಾರ ಮಾಡಿದ್ದಾರೆ. ಆದರೆ ನನಗೆ ಮಾಹಿತಿಯೇ ಇಲ್ಲ. 24 ಗಂಟೆ ನಮ್ಮ ವಿರುದ್ದ ಅಪಪ್ರಚಾರ ಮಾಡಿದವರ ಬಗ್ಗೆ ನಾವು ಕ್ಯಾಂಪೇನ್ ಮಾಡಬೇಕಾ? ಪಾರ್ಟಿ ಕಟ್ಟಿಕೊಂಡು ಏನಾಗಬೇಕ್ರಿ? ನಾನೇ ನಾನಾಗಿ ಪುಟ್ಟಣ್ಣಗೆ ಬನ್ನಿ ಅಂತ ಕರೆಯಲಿಲ್ಲ. ಅವರೇ ಬಂದರು. ಪ್ರಚಾರ ಮಾಡಿ ಹೋದರು. ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಮಾಡಿ ಅಂತ ಬಿಜೆಪಿ ನಾಯಕರು ಯಾರೂ ಕೇಳಿಲ್ಲ. ನಮಗೂ ಸ್ವಾಭಿಮಾನ ಇಲ್ವಾ? ಎಂದು ಬಿಜೆಪಿ ನಡೆಯನ್ನೇ ಟೀಕಿಸಿದರು.

ರಂಗನಾಥ್ ನನ್ನ ವಿರುದ್ಧ ಯಡಿಯೂರಪ್ಪ ವಿರುದ್ಧ, ವಿಜಯೇಂದ್ರ ವಿರುದ್ಧ ಮಾತಾಡಿದ್ದಾನೆ. ಆತ ಬಿಜೆಪಿ ಅಭ್ಯರ್ಥಿ ಆಗಿದ್ದಿದ್ದರೆ ನಾನು ಯಾರ ಬಳಿಯೂ ಹೇಳಿಸಿಕೊಳ್ಳದೆ ಪ್ರಚಾರ ಮಾಡ್ತಿದ್ದೆ. ಆದರೆ ರಂಗನಾಥ್ ಜೆಡಿಎಸ್ ಅಭ್ಯರ್ಥಿ. ನನ್ನ ವಿರುದ್ಧ ಮಾತಾಡಿ ಡ್ಯಾಮೇಜ್ ಮಾಡಿದವನು ರಂಗನಾಥ್. ನಾನು ಏಕೆ ಇಂಥವನ ಪರ ಪ್ರಚಾರ ಮಾಡಲಿ. ನನಗೆ ಸ್ವಾಭಿಮಾನ ಇಲ್ವಾ? ಸ್ವಾಭಿಮಾನ ಎದುರು ಪಕ್ಷ ಕಟ್ಟಿಕೊಂಡು ಏನು ಮಾಡಲಿ? ಇದನ್ನು ಯಾರ ಬಳಿಯೂ ಹೇಳಬಲ್ಲೆ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.

ಇದೇ ವೇಳೆ ತಮ್ಮ ವಿರುದ್ಧ ಮತ್ತು ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ರಂಗನಾಥ್ ಮಾತಾಡಿದ ವಿಡಿಯೋವನ್ನು ಮೊಬೈಲ್​ನಲ್ಲಿ ಪ್ಲೇ ಮಾಡಿ ತೋರಿಸಿದ ಸೋಮಶೇಖರ್, ಇಂತ ವ್ಯಕ್ತಿಯ ಪರ ನಾನು ಪ್ರಚಾರ ಮಾಡಬೇಕಾ? ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ:ಬಿಜೆಪಿ ಕಾರ್ಯಕಾರಿಣಿ: ಶೆಟ್ಟರ್ ಹಾಜರು, ಯತ್ನಾಳ್ ಚಕ್ಕರ್, ಸೋಮಣ್ಣ ಮತ್ತೆ ಅಸಮಾಧಾನ

ABOUT THE AUTHOR

...view details