ಕರ್ನಾಟಕ

karnataka

ETV Bharat / state

ಭ್ರೂಣ ಲಿಂಗ ಪತ್ತೆ ಬಗ್ಗೆ ಮಾಹಿತಿ ನೀಡಿದವರಿಗೆ ₹1 ಲಕ್ಷ ಬಹುಮಾನ - Prenatal Sex Determination Racket

ಭ್ರೂಣ ಲಿಂಗ ಪತ್ತೆ ಕುರಿತು ಮಾಹಿತಿ ನೀಡಿದವರಿಗೆ ನೀಡುವ ಬಹುಮಾನದ ಮೊತ್ತವನ್ನು ಏರಿಸಲಾಗಿದೆ.

ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಸಭೆ
ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಸಭೆ (ETV Bharat)

By ETV Bharat Karnataka Team

Published : Jun 20, 2024, 10:46 PM IST

ಬೆಂಗಳೂರು: ಭ್ರೂಣ ಲಿಂಗ ಪತ್ತೆ ಬಗ್ಗೆ ಮಾಹಿತಿ ನೀಡಿದವರಿಗೆ ನೀಡುವ ಬಹುಮಾನವನ್ನು 50 ಸಾವಿರದಿಂದ 1 ಲಕ್ಷ ರೂ.ಗೆ ಹೆಚ್ಚಿಸಿ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಗರ್ಭಪೂರ್ವ ಹಾಗೂ ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಕಾಯ್ದೆ (ಪಿಸಿಪಿಎನ್‌ಡಿಟಿ) ಅನುಷ್ಠಾನಕ್ಕೆ ಸಂಬಂಧಿಸಿದಂತೆ ಯಶಸ್ವಿಗೊಂಡ ಗುಪ್ತ ಕಾರ್ಯಾಚರಣೆಯಲ್ಲಿ ಮಾಹಿತಿ ನೀಡಿದವರಿಗೆ ಈ ಬಹುಮಾನ ನೀಡಲಾಗುತ್ತದೆ. ಈ ಬಹುಮಾನದ ಮೊತ್ತದಲ್ಲಿ 50 ಸಾವಿರ ರೂ.ಗಳನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದ ಮತ್ತು ಇನ್ನುಳಿದ 50 ಸಾವಿರ ರೂ. ಮೊತ್ತವನ್ನು ಆಯಾ ಜಿಲ್ಲೆಗಳಲ್ಲಿ ಸಂಗ್ರಹವಾಗಿರುವ ಪಿಸಿಪಿಎನ್‌ಡಿಟಿ ಶುಲ್ಕದಿಂದ ಭರಿಸಬೇಕು ಎಂದು ತಿಳಿಸಲಾಗಿದೆ.

ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರ ಅಧ್ಯಕ್ಷತೆಯಲ್ಲಿ ಕಳೆದ ವರ್ಷ ಡಿಸೆಂಬರ್​​ನಲ್ಲಿ ನಡೆದ ರಾಜ್ಯ ಮೇಲ್ವಿಚರಣಾ ಮಂಡಳಿ ಸಭೆಯಲ್ಲಿ ಬಹುಮಾನದ ಮೊತ್ತವನ್ನು ಏರಿಕೆ ಮಾಡುವ ಬಗ್ಗೆ ನಿರ್ಧರಿಸಲಾಗಿತ್ತು ಎಂದು ಹೇಳಲಾಗುತ್ತಿದೆ.

ಆರೋಗ್ಯ ಸೇವೆಗಳು ಸಮರ್ಪಕವಾಗಿ ಜನರಿಗೆ ಸಲ್ಲದಿದ್ದರೆ ಸಹಿಸಲ್ಲ: ಅಧಿಕಾರಿಗಳ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ಅಸಮಾಧಾನ

ಗುಣಮಟ್ಟದ ಆರೋಗ್ಯ ಸೇವೆಗಳು ಜನರಿಗೆ ತಲುಪಿಸುವಲ್ಲಿ ಹೆಚ್ಚಿನ ಗಮನ ಹರಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಇಲಾಖೆಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಇಂದು ಆರೋಗ್ಯ ಇಲಾಖೆಯ ಉಪನಿರ್ದೇಶಕರು ಹಾಗೂ ಕಾರ್ಯಕ್ರಮ ಅಧಿಕಾರಿಗಳೊಂದಿಗೆ ವಿಸ್ತೃತವಾಗಿ ಸಭೆ ನಡೆಸಿದ ಸಚಿವರು, ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ರಾಷ್ಟ್ರೀಯ ಆರೋಗ್ಯ ಯೋಜನೆಯಡಿ ಜಾರಿಯಲ್ಲಿರುವ ಆರೋಗ್ಯ ಸೇವೆಗಳು ಹೆಚ್ಚು ಪ್ರಗತಿ ಕಂಡಿಲ್ಲ. ಹಲವು ಸೇವೆಗಳು ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನಗೊಂಡಿಲ್ಲ. ಕಳೆದ ವರ್ಷದ ಅವಧಿಯಲ್ಲಿ ಹಲವು ಬಿಲ್ ಗಳು ಪಾವತಿಯಾಗದೇ ಬಾಕಿ ಇರಿಸಿಕೊಂಡಿರುವ ಬಗ್ಗೆ ಅಧಿಕಾರಿಗಳಿಗೆ ಚಾಟಿ ಬೀಸಿದರು. ರಾಷ್ಟ್ರೀಯ ಆರೋಗ್ಯ ಯೋಜನೆಯಡಿ ದೊರೆಯುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ ಎಂದಾದರೆ, ಆರೋಗ್ಯ ಸೇವೆಗಳು ಸಮರ್ಪಕವಾಗಿ ತಲುಪಲು ಹೇಗೆ ಸಾಧ್ಯ ಎಂದು ಅಧಿಕಾರಿಗಳಿಗೆ ಸಚಿವರು ಚುರುಕು ಮುಟ್ಟಿಸಿದರು.‌

ಲಭ್ಯವಿರುವ ಹಣಕಾಸಿನ ಸರಿಯಾಗಿ ಖರ್ಚು ಮಾಡದಿದ್ದರೆ ಏನು ಪ್ರಯೋಜನ? ಟೆಂಡರ್ ಪ್ರಕ್ರಿಯೆಗಳನ್ನು ಮಾರ್ಚ್​​ವರೆಗೆ ಏಕೆ ಎಳೆದುಕೊಂಡು ಹೋಗುತ್ತಿದ್ದೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು‌. ಯಾವ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಲ್ಲ ಅಂತವರ ವಿರುದ್ಧ ಕ್ರಮ ಕೈಗೊಳ್ಳಲು ನಾನು ಹಿಂಜರಿಯಲ್ಲ. ಯಾರ ಮುಲಾಜೂ ನಮಗಿಲ್ಲ. ಯಾರ ಒತ್ತಡದಿಂದಲೂ ನಾನು ಒಬ್ಬ ಅಧಿಕಾರಿಯನ್ನೂ ನೇಮಿಸಿಲ್ಲ. ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಲಹೆ ಮೇರೆಗೆ ಅಧಿಕಾರಿಗಳಿಗೆ ಜವಾಬ್ದಾರಿಗಳನ್ನು ನೀಡಲಾಗಿದೆ. ಹೀಗಾಗಿ ನಿಮ್ಮ ಕಾರ್ಯದಕ್ಷತೆ ತೋರದಿರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವುದಾಗಿ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದರು.

ಜಿಲ್ಲಾಸ್ಪತ್ರೆಗಳಲ್ಲಿ ಕಾರ್ಯವೈಖರಿ, ಇ-ಆಫೀಸ್, ಟೆಲಿ ಐಸಿಯು, ಆಯುಷ್ಮಾನ್ ಭಾರತ್ ಯೋಜನೆಯ ರೆಫರೆಲ್ ಪದ್ಧತಿಗಳ ಬಗ್ಗೆ ಚರ್ಚಿಸಲು ಸಭೆ ಆಯೋಜಿಸುವಂತೆ ಇದೇ ವೇಳೆ ಸಚಿವರು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಎನ್.ಎಚ್.ಎಮ್. ಎಂ.ಡಿ ನವೀನ್ ಭಟ್, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: 7ನೇ ವೇತನ ಆಯೋಗದ ವರದಿ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ: ಸಚಿವ ಹೆಚ್​.ಕೆ.ಪಾಟೀಲ್ - 7th Pay Commission

ABOUT THE AUTHOR

...view details