ಮೈಸೂರು: ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪಿಇಟಿಎ) ಇಂಡಿಯಾ, ಥೇಟ್ ಜೀವಂತ ಆನೆಯಂತೆಯೇ ಕಾಣುವ ರೋಬೋಟಿಕ್ ಆನೆಯನ್ನು ಸುತ್ತೂರು ಮಠಕ್ಕೆ ಉಡುಗೊರೆಯಾಗಿ ನೀಡಿದೆ. 10 ಅಡಿ ಎತ್ತರ ಇರುವ ರೋಬೋ ಆನೆಯನ್ನು ಕೇರಳದ ಕಲಾವಿದ ಪ್ರಶಾಂತ್ ಎನ್ನುವವರು ತಯಾರಿಸಿದ್ದಾರೆ. ಆನೆಗಳನ್ನು ಸಂರಕ್ಷಿಸಬೇಕು ಮತ್ತು ಹಿಂಸೆಯಿಂದ ಮುಕ್ತ ಮಾಡಬೇಕೆಂಬ ಉದ್ದೇಶದಿಂದ ಕೃತಕ ಆನೆಯನ್ನು ದೇವಸ್ಥಾನದ ಉತ್ಸವಗಳಲ್ಲಿ ಬಳಸಲು ಇದನ್ನು ನಿರ್ಮಾಣ ಮಾಡಲಾಗಿದೆ.
ಕೇರಳದಲ್ಲಿ ಎರಡು ಹಾಗೂ ಬೆಂಗಳೂರಿನ ಒಂದು ದೇವಾಲಯಕ್ಕೆ ಕೃತಕ ಆನೆಯನ್ನು ಕೊಟ್ಟಿದ್ದಾರೆ. ಈ ರೋಬೋಟಿಕ್ ಆನೆ ಜೀವಂತ ಆನೆಯಂತೆಯೇ ಕಿವಿ ಅಲ್ಲಾಡಿಸುತ್ತದೆ, ಕಣ್ಣು ಮಿಟುಕಿಸುತ್ತದೆ, ಕತ್ತು ಅಲ್ಲಾಡಿಸುತ್ತದೆ ಮತ್ತು ಸೊಂಡಿಲನ್ನು ಮೇಲೆ ಎತ್ತುತ್ತದೆ. ಅಲ್ಲದೇ ನೀರು ಚಿಮುಕಿಸುತ್ತದೆ. ಇದರ ಮೇಲೆ ಜಂಬೂಸವಾರಿ ಮಾದರಿಯಲ್ಲಿ ಮಂಟಪ ಮಾಡಲಾಗಿದೆ. ವಿದ್ಯುತ್ ಚಾಲಿತ ರೋಬೋ ಆನೆ ಶಿವನನ್ನು ಎಷ್ಟು ದೂರು ಬೇಕಾದರೆ ಸುಲಭವಾಗಿ ತೆಗೆದುಕೊಂಡು ಹೋಗಬಹುದು.