ರಾಮನಗರ: "ಭೂ ವ್ಯಾಜ್ಯಗಳಿಂದಾಗಿ ಜನ ಪೊಲೀಸ್ ಠಾಣೆಗೆ ಹೋಗಬಾರದು, ಬಡವರು ಲಂಚ ನೀಡುವುದನ್ನು ತಪ್ಪಿಸಬೇಕು ಎಂಬ ಉದ್ದೇಶದಿಂದ ನಮ್ಮ ಸರ್ಕಾರ ಮರು ಭೂಮಾಪನ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಜಾರಿ ಮಾಡಿದ್ದು, ಮುಂದೆ ಇಡೀ ತಾಲೂಕಿಗೆ ಕಾರ್ಯಕ್ರಮ ವಿಸ್ತರಣೆ ಮಾಡಲಾಗುವುದು" ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ತಿಳಿಸಿದರು.
ಕನಕಪುರದ ಉಯ್ಯಂಬಳ್ಳಿ ಹೋಬಳಿಯ ದೊಡ್ಡ ಆಲಹಳ್ಳಿಯಲ್ಲಿಂದು ನಡೆದ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಹಾಗೂ ಮರು ಭೂ ಮಾಪನ ಯೋಜನೆಯಡಿ ರೈತರಿಗೆ ಜಮೀನಿನ ಆರ್ಟಿಸಿ ದಾಖಲೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ನೂರಾರು ವರ್ಷಗಳ ಹಿಂದೆ ಬ್ರಿಟಿಷರು ಈ ಭಾಗದಲ್ಲಿ ಭೂ ಮಾಪನ ಮಾಡಿದ್ದರು. ಆನಂತರ ಮಾಡಿರಲಿಲ್ಲ. ಈಗ ಹೊಸ ಮಾದರಿಯಲ್ಲಿ ಭೂ ಮಾಪನ ಮಾಡಲಾಗುತ್ತಿದೆ. ನಮ್ಮ ಸರ್ಕಾರ ಈ ಕಾರ್ಯಕ್ರಮ ರೂಪಿಸಿದೆ. ಇದು ಮುಂದಿನ ತಲೆಮಾರಿಗೂ ಬಹಳ ಉಪಯೋಗವಾಗಲಿದೆ. ಡಿ. ಕೆ. ಸುರೇಶ್ ಹಾಗೂ ಕೃಷ್ಣ ಬೈರೇಗೌಡರು ಚರ್ಚಿಸಿ ನನ್ನ ಗ್ರಾಮದಿಂದಲೇ ಈ ಯೋಜನೆ ಆರಂಭಿಸಿದ್ದಾರೆ. ಇದು ರಾಜ್ಯಕ್ಕೆ ಮಾದರಿಯಾಗಲಿದೆ" ಎಂದರು.
"ನಮ್ಮ ಹೋಬಳಿಯಲ್ಲಿ 35 ಕಂದಾಯ ಗ್ರಾಮಗಳಿವೆ. ಅದರಲ್ಲಿ 2 ಗ್ರಾಮಗಳು ಅರಣ್ಯ ಭಾಗದಲ್ಲಿವೆ. ಉಳಿದ 33 ಗ್ರಾಮಗಳಲ್ಲಿ 5,804 ಸರ್ವೆ ನಂಬರ್ಗಳಿದ್ದವು. ಈಗ 23,469 ಸಾವಿರ ಸರ್ವೆ ನಂಬರ್ಗಳಾಗಿವೆ. ಈಗ ಈ ಪಂಚಾಯಿತಿಯಲ್ಲಿ ಮರು ಭೂ ಮಾಪನ ಮಾಡಲಾಗಿದ್ದು, ಮುಂದೆ ಇಡೀ ಕ್ಷೇತ್ರ, ಜಿಲ್ಲೆ ಹಾಗೂ ರಾಜ್ಯಕ್ಕೆ ಈ ಕಾರ್ಯಕ್ರಮ ವಿಸ್ತರಣೆಯಾಗಲಿದೆ" ಎಂದು ತಿಳಿಸಿದರು.
"ನಾನು ಡಿಸಿಎಂ ಆದ ನಂತರ ನನ್ನ ಕ್ಷೇತ್ರದ ಜನರನ್ನು ಭೇಟಿ ಮಾಡುವುದು ಕಷ್ಟವಾಗಿದೆ. ಬಹಳಷ್ಟು ಮಂದಿ ಬೆಂಗಳೂರಿಗೆ ಬಂದು ವಾಪಸ್ ಹೋಗುತ್ತಿದ್ದೀರಿ. ಮಾಜಿ ಸಂಸದ, ಸಹೋದರ ಡಿ ಕೆ ಸುರೇಶ್ ಅವರು ಎಂಟು ಕ್ಷೇತ್ರಗಳ ಜವಾಬ್ದಾರಿ ನೋಡಿಕೊಳ್ಳಬೇಕು. ಹೀಗಾಗಿ ತಿಂಗಳಿಗೆ ಒಂದು ದಿನ ಹೋಬಳಿ ಮಟ್ಟದಲ್ಲಿ ನಾನೇ ಬಂದು ಜನರ ಸಮಸ್ಯೆ ಆಲಿಸಲು ತೀರ್ಮಾನಿಸಿದ್ದೇನೆ. ಸಾತನೂರು ಹೋಬಳಿ ನಂತರ ಉಯ್ಯಂಬಳ್ಳಿ ಹೋಬಳಿಗೆ ಬಂದಿದ್ದು, ಮುಂದೆ ಕಸಬಾ, ಕೋಡಂಬಳ್ಳಿ ಹೋಬಳಿಗೆ ಭೇಟಿ ನೀಡಲಿದ್ದೇನೆ" ಎಂದು ಹೇಳಿದರು.
ಶೀಘ್ರ ಬೆಂಗಳೂರು ದಕ್ಷಿಣ ಜಿಲ್ಲೆ ಅಸ್ತಿತ್ವಕ್ಕೆ : "ಕಳೆದ 15 ರಿಂದ 20 ವರ್ಷಗಳ ಹಿಂದೆ ಈ ಭಾಗದಲ್ಲಿ ಜಮೀನಿನ ಬೆಲೆ ಎಷ್ಟಿತ್ತು?, ಈಗ ಎಷ್ಟಾಗಿದೆ?, ನಿಮಗೆ ನೇರವಾಗಿ ಹಣ ನೀಡಲಾಗದಿದ್ದರೂ ನಿಮ್ಮ ಆಸ್ತಿ ಮೌಲ್ಯವನ್ನು ಹೆಚ್ಚಿಸಿ ನಿಮಗೆ ನೆರವಾಗಿದ್ದೇನೆ. ಆ ಮೂಲಕ ನಿಮ್ಮ ಬದುಕಿನಲ್ಲಿ ಬದಲಾವಣೆ ತಂದಿದ್ದೇನೆ. ಇದು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ದೆಹಲಿಗೆ ಕಳುಹಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯದಿಂದ ಇಂಟೆಲಿಜೆನ್ಸ್ ನವರು ವರದಿ ಕಳುಹಿಸುವುದು ಬಾಕಿ ಇದೆ. ಈ ವಿಚಾರವಾಗಿ ಕೇಂದ್ರ ಸಚಿವರು ಹಾಗೂ ಪ್ರಧಾನಮಂತ್ರಿಗಳಿಗೆ ಒಂದೆರಡು ದಿನಗಳಲ್ಲಿ ಪತ್ರ ಬರೆಯಲಿದ್ದೇನೆ. ನಂತರ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಅಧಿಕೃತವಾಗಿ ಘೋಷಣೆಯಾಗಲಿದೆ. ರಾಮನಗರ ಜಿಲ್ಲಾ ಕೇಂದ್ರವಾಗಿಯೇ ಉಳಿಯಲಿದೆ. ಹೀಗಾಗಿ ನೀವು ನಿಮ್ಮ ಆಸ್ತಿ ಮಾರಿಕೊಳ್ಳಬೇಡಿ" ಎಂದು ಡಿಸಿಎಂ ಮನವಿ ಮಾಡಿದರು.
ಡಿನ್ನರ್ ಸಭೆ ಬಗ್ಗೆ ಮಾತನಾಡಿ, "ಯಾವ ಡಿನ್ನರ್ ಇಲ್ಲ. ಹೊಸ ವರ್ಷಾಚರಣೆಗೆ ನಮ್ಮ ಕೆಲ ನಾಯಕರು ಸೇರಿದ್ದರು. ಇದಕ್ಕೆ ಯಾರೋ ಸುದ್ದಿ ಕಟ್ಟಿದ್ದಾರೆ ಅಷ್ಟೇ. ನಾವು ಹೊಸವರ್ಷಕ್ಕೆ ಹೊರ ದೇಶಕ್ಕೆ ಹೋಗಿದ್ದೆವು. ಇಲ್ಲಿ ನಮ್ಮ ನಾಯಕರು ಊಟಕ್ಕೆ ಸೇರಿದ್ದರು. ಅದನ್ನು ರಾಜಕಾರಣಕ್ಕೆ ಬಳಸಿಕೊಳ್ಳಲಾಗಿದೆ" ಎಂದು ತಿಳಿಸಿದರು.
ಸಂಕ್ರಾಂತಿಗೆ ಸಂಪುಟ ವಿಸ್ತರಣೆ ಆಗಲಿದೆಯೇ ಎಂಬ ಪ್ರಶ್ನೆಗೆ, "ಅದೆಲ್ಲವೂ ಸುಳ್ಳು. ಈ ವಿಚಾರವಾಗಿ ಮುಖ್ಯಮಂತ್ರಿಗಳು ಮಾಹಿತಿ ನೀಡುತ್ತಾರೆ" ಎಂದರು .
ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ಸಿಎಂ ಆಗೇ ಆಗ್ತಾರೆ: ಶಾಸಕ ಶಿವಗಂಗಾ ಬಸವರಾಜ್
ಇದನ್ನೂ ಓದಿ: ಅನಗತ್ಯ ಗೊಂದಲ ಬೇಡ, ಒಕ್ಕಲಿಗರ ಸಭೆ ಮುಂದೂಡಿ: ಡಿ.ಕೆ.ಶಿವಕುಮಾರ್ ಸೂಚನೆ