ಮೈಸೂರು :ಮೈಸೂರು-ಕೊಡಗು ಲೋಕಸಭೆಯಲ್ಲಿ ಸ್ಪರ್ಧೆ ಮಾಡಲು ಬ್ರಾಹ್ಮಣ ಸಮುದಾಯದ ಬೆಂಬಲ ನನಗೆ ಬಹಳ ಮುಖ್ಯ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಭಾಸ್ಕರ್ ರಾವ್ ಅಭಿಪ್ರಾಯ ವ್ಯಕ್ತಪಡಿಸಿದರು. ಆರಾಧ್ಯ ಮಹಾಸಭಾದಲ್ಲಿ ಬ್ರಾಹ್ಮಣ ಸಂಘಟನೆಗಳಿಂದ ಮೈಸೂರು-ಕೊಡಗು ಲೋಕಸಭಾ ಚುನಾವಣೆಯ ಸಂವಾದದಲ್ಲಿ ಭಾಸ್ಕರ್ ರಾವ್ ಮಾತನಾಡಿದರು.
ಬ್ರಾಹ್ಮಣ ಸಮುದಾಯ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು. ಬ್ರಾಹ್ಮಣ ಸಮುದಾಯದ ಬಡವರನ್ನು ಉದ್ಧಾರ ಮಾಡುವ ಕೆಲಸ ಆಗಬೇಕು. ಜೈನ್ ಮತ್ತು ಸಿಖ್ ಧರ್ಮದಲ್ಲಿ ಬಡವರನ್ನು ಮೇಲೆತ್ತಲು ಇಡೀ ಸಮುದಾಯದವರೇ ಟೊಂಕ ಕಟ್ಟಿ ನಿಲ್ಲುತ್ತಾರೆ. ಅಂತಹದ್ದೇ ಮನೋಭಾವ ಬ್ರಾಹ್ಮಣ ಸಮುದಾಯದಲ್ಲೂ ಬರಬೇಕು ಎಂದು ಭಾಸ್ಕರ್ ರಾವ್ ಹೇಳಿದರು.
ಬ್ರಾಹ್ಮಣರಲ್ಲಿ ಸಂಸ್ಕಾರ ಮತ್ತು ಬುದ್ಧಿವಂತಿಕೆ ಇದೆ. ಆದರೆ, ಆರ್ಥಿಕವಾಗಿ ದುರ್ಬಲರಾದವರೂ ಇದ್ದಾರೆ. ಇಂತಹ ಸಂದರ್ಭದಲ್ಲಿ ಸ್ಥಿತಿವಂತ ಬ್ರಾಹ್ಮಣರು ಬಡವರ ಬಗ್ಗೆ ಪ್ರೀತಿ ಮತ್ತು ಕಾಳಜಿ ಬರಬೇಕು. ನಾನು ಪೊಲೀಸ್ ಇಲಾಖೆಯಲ್ಲಿ ಸತತ 34 ವರ್ಷ ಕೆಲಸ ಮಾಡಿದ್ದೇನೆ. ಇಡೀ ಸೇವೆಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಕೆಲಸ ಮಾಡಿದ ತೃಪ್ತಿ ನನಗಿದೆ. ನಾನೂ ಸಹ ಮೂಲತಃ ಮೈಸೂರು ಜಿಲ್ಲೆಯವನೇ, ನಂಜನಗೂಡು ತಾಲೂಕಿನ ಕಳಲೆ ನಮ್ಮ ಹುಟ್ಟೂರು. ನಮ್ಮ ಪೂರ್ವಿಕರೆಲ್ಲರೂ ಮೈಸೂರಿನಲ್ಲೇ ನೆಲೆಸಿದ್ದರು. ನಮ್ಮ ತಾತ ಮೊದಲ ಮಹಾ ಯುದ್ಧದ ವೇಳೆ ಮೈಸೂರ್ ಲ್ಯಾನ್ಸರ್ ಸೇನೆಯಲ್ಲಿ ಅಶ್ವಪಡೆ ಸೈನಿಕರಾಗಿ ಇಸ್ರೇಲ್ಗೆ ಹೋಗಿ ಹೋರಾಡಿ ಬಂದಿದ್ದ ಎಂದು ಭಾಸ್ಕರ್ ರಾವ್ ಸ್ಮರಿಸಿದರು.
ಮೈಸೂರು ಕೇವಲ ಸಾಂಸ್ಕೃತಿಕ ನಗರ ಮಾತ್ರ ಅಲ್ಲ. ಅತ್ಯಂತ ಧೈರ್ಯ ಮತ್ತು ಆಕ್ರಮಣಕಾರಿ ಮನೋಭಾವ ಇಲ್ಲಿನ ಜನರಲ್ಲಿದೆ. ನಾನು ಮೈಸೂರು ಭಾಗದಲ್ಲಿ ಹಲವಾರು ವರ್ಷ ಸೇವೆ ಸಲ್ಲಿಸಿದ್ದೇನೆ. ನಾನು ಸೇವೆ ಸಲ್ಲಿಸಿದ ಸಂದರ್ಭ ಯಾರದ್ದೂ ಒಂದು ಹನಿ ರಕ್ತ ಕೆಳಗೆ ಬೀಳದಂತೆ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಬಂದಿದ್ದೆ. ರಾಜಕಾರಣಕ್ಕೆ ಬಂದಿರುವೆ, ಇಲ್ಲಿಯೂ ಸಹ ನನ್ನಿಂದ ಒಂದೇ ತಪ್ಪು ಆಗಲ್ಲ. ತಪ್ಪು ಮಾಡಲು ಭಯಪಡುವ ಸ್ವಭಾವ ನನ್ನದು. ಅವಕಾಶ ಸಿಕ್ಕರೆ ನೀವು ನಮ್ಮ ಮೇಲಿಟ್ಟಿರುವ ಭರವಸೆಯನ್ನು ಖಂಡಿತಾ ಉಳಿಸಿಕೊಳ್ಳುವೆ ಎಂದು ಭಾಸ್ಕರ್ ರಾವ್ ತಿಳಿಸಿದರು.
ಇದಕ್ಕೂ ಮುನ್ನ ನಡೆದ ಸಂವಾದದಲ್ಲಿ ವಿಪ್ರ ಮುಖಂಡರು ಈ ಬಾರಿ ಮೈಸೂರು ಲೋಕಸಭೆಯಿಂದ ಭಾಸ್ಕರ್ ರಾವ್ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯ ಕೇಳಿ ಬಂದಿತು. ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬ್ರಾಹ್ಮಣರ 2.60 ಲಕ್ಷ ಮತಗಳಿವೆ. ಒಂದು ಬಾರಿಯೂ ಬ್ರಾಹ್ಮಣರಿಗೆ ಲೋಕಸಭೆ ಟಿಕೆಟ್ ನೀಡಿಲ್ಲ. ಈ ಬಾರಿ ಮೈಸೂರಿಗರೇ ಅಗಿರುವ ಭಾಸ್ಕರ್ ರಾವ್ ಅವರಿಗೆ ಟಿಕೆಟ್ ಕೊಡಲಿ ಎಂದು ಸಭೆಯಲ್ಲಿ ಒಕ್ಕೊರಲಿನ ಆಗ್ರಹ ಮಾಡಲಾಯಿತು.
ಇದೇ ವೇಳೆ ವಿಪ್ರ ಸಮುದಾಯದ ಹಲವು ಗಣ್ಯರನ್ನು ಸನ್ಮಾನಿಸಲಾಯಿತು. ನಿಮ್ಮ ಭಾಸ್ಕರ್ ರಾವ್ ಎಂಬ ಕಿರುಹೊತ್ತಿಗೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ವಿಶ್ವ ಹಿಂದೂ ಪರಿಷತ್ನ ಪ್ರಮುಖರಾದ ಕೇಶವಮೂರ್ತಿ, ಬ್ರಾಹ್ಮಣ ಸಭಾದ ಮುಖಂಡರಾದ ಪಾರ್ಥ ಸಾರಥಿ, ರವೀಂದ್ರ ಇನ್ನಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ :ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ನಲ್ಲಿ 21ಕ್ಕೂ ಹೆಚ್ಚು ಆಕಾಂಕ್ಷಿಗಳು; ಮತದಾರರ ಸಂಖ್ಯೆ ಎಷ್ಟು?