ದರ್ಶನ್ ಬಂಧಿಸಿದ ಕರ್ನಾಟಕ ಪೊಲೀಸರಿಗೆ ಸಾರ್ವಜನಿಕರ ಶಹಬ್ಬಾಸ್ (ETV Bharat) ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಭೇದಿಸಿ ಆರೋಪಿ ನಟ ದರ್ಶನ್ ಅವರನ್ನು ಬಂಧಿಸಿದ್ದ ರಾಜ್ಯ ಪೊಲೀಸರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ನೇತೃತ್ವದಲ್ಲಿ ನಡೆದ ಮಾಸಿಕ ಜನಸಂಪರ್ಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಾರ್ವಜನಿಕರೊಬ್ಬರು ಪೊಲೀಸರ ಕರ್ತವ್ಯನಿಷ್ಠೆಯನ್ನು ಕೊಂಡಾಡಿದರು.
ಶನಿವಾರ ಬೆಂಗಳೂರು ಪೂರ್ವ ವಿಭಾಗದ ಕಸ್ತೂರಿ ನಗರದಲ್ಲಿ ನಡೆದ ಮಾಸಿಕ ಜನಸಂಪರ್ಕ ಸಭೆಯಲ್ಲಿ ಪೊಲೀಸ್ ಆಯುಕ್ತ ಬಿ.ದಯಾನಂದ್, ಪೂರ್ವ ವಿಭಾಗದ ಡಿಸಿಪಿ ಡಿ.ದೇವರಾಜ್ ಹಾಗೂ ಬೆಂಗಳೂರು ಸಂಚಾರ ಪೂರ್ವ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಭಾಗಿಯಾಗಿ ಅಹವಾಲು ಆಲಿಸಿದರು.
ಈ ವೇಳೆ ಮಾತನಾಡಿದ ಮುರುಳಿ ಎಂಬವರು, "ಹತ್ಯೆ ಪ್ರಕರಣದ ಆರೋಪಿಯಾಗಿರುವ ದರ್ಶನ್ ಅವರನ್ನು ಬಂಧಿಸುವ ಮೂಲಕ ಎಷ್ಟೇ ಪ್ರಭಾವಿಯಾದರೂ ಸಹ ಶಿಕ್ಷೆಯಾಗುತ್ತದೆ ಎಂಬುದನ್ನು ಕರ್ನಾಟಕ ಪೊಲೀಸರು ತೋರಿಸಿಕೊಟ್ಟಿದ್ದಾರೆ. ಹಣಬಲ, ರಾಜಕೀಯ ಬೆಂಬಲವಿರುವವರು ಕಾನೂನಿನಿಂದ ತಪ್ಪಿಸಿಕೊಳ್ಳುತ್ತಾರೆ ಎಂಬ ಭಾವನೆ ಸಾರ್ವಜನಿಕರಲ್ಲಿದೆ. ಆದರೆ ಕರ್ನಾಟಕ ಪೊಲೀಸರು ಅದೆಲ್ಲವೂ ಸುಳ್ಳು ಎಂದು ಸಾಬೀತುಪಡಿಸಿದ್ದಾರೆ. ಆದ್ದರಿಂದ ಅವರಿಗೆ ಸಾರ್ವಜನಿಕರ ಪರವಾಗಿ ಧನ್ಯವಾದ" ಎಂದರು.
ಇದೇ ವೇಳೆ ಸಭೆಯಲ್ಲಿ ಭಾಗಿಯಾಗಿದ್ದವರು ಚಪ್ಪಾಳೆ ತಟ್ಟುವ ಮೂಲಕ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರೆ, ಇಲಾಖೆಯ ಮೇಲೆ ಸಾರ್ವಜನಿಕರ ವಿಶ್ವಾಸಕ್ಕೆ ಆಯುಕ್ತರು ಧನ್ಯವಾದ ತಿಳಿಸಿದರು.
ಇದನ್ನೂ ಓದಿ:ದಲಿತ ವ್ಯಕ್ತಿಯ ಮೇಲೆ ಹಲ್ಲೆ, ಕೈ ಕಟ್: ರೌಡಿಶೀಟರ್‌ಗಳಿಗೆ ಪೊಲೀಸ್ ಗುಂಡೇಟು - Police Firing