ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಂಧನಕ್ಕೊಳಗಾಗಿರುವ ಎ2 ಆರೋಪಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಇಂದು ನಗರದ 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ನಡೆಯಿತು. ಪೊಲೀಸ್ ಪರ ಸರ್ಕಾರಿ ವಿಶೇಷ ಅಭಿಯೋಜಕ ಪ್ರಸನ್ನ ಕುಮಾರ್ ವಾದ ಮಂಡಿಸಿ, ತನಿಖೆಯಲ್ಲಿ ಲೋಪವಾಗಿದೆ ಎಂದಿದ್ದ ದರ್ಶನ್ ಪರ ವಕೀಲ ಸಿ.ವಿ.ನಾಗೇಶ್ ವಾದಕ್ಕೆ ಸ್ಪಷ್ಟನೆ ನೀಡಿದರು.
ಎಸ್ಪಿಪಿ ವಾದ:ಹತ್ಯೆ ಪ್ರಕರಣದಲ್ಲಿ ಶರಣಾಗಲು ಬಂದ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಕೃತ್ಯದ ಹಿಂದೆ ಕಾಣದ ಕೈಗಳು ಅಡಗಿವೆ ಎಂಬ ವಿಚಾರ ಜೂ.10ರ ರಾತ್ರಿ ತಿಳಿಯಿತು. ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಜೂ.11ರಂದು ದರ್ಶನ್ ಸೇರಿ ಇತರ ಆರೋಪಿಗಳನ್ನು ಬಂಧಿಸಲಾಯಿತು.
12ರಂದು ಪಟ್ಟಣಗೆರೆ ಶೆಡ್ಗೆ ಕರೆದೊಯ್ದು ಮಹಜರು ಮಾಡಲಾಯಿತು. ಜೂ.13ರಂದು ಶೆಡ್ನಲ್ಲಿ ಕೆಲಸ ಮಾಡುತ್ತಿದ್ದ ಕಾವಲುಗಾರನ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಯಿತು. ಅಲ್ಲಿ ಕೆಲಸ ಮಾಡುತ್ತಿದ್ದ ಇತರ ಸಾಕ್ಷಿಗಳನ್ನು ಸಂಪರ್ಕಿಸಿ ಹೇಳಿಕೆ ಪಡೆಯಲಾಗಿದೆ. ಸಾಕ್ಷಿಗಳ ಹೇಳಿಕೆ ದಾಖಲು ವಿಚಾರದಲ್ಲಿ ವಿಳಂಬ ತೋರಿಸಿಲ್ಲ.
ಪಂಚನಾಮೆ ವೇಳೆ ಬಟ್ಟೆ ಹಾಗೂ ಚಪ್ಪಲಿ ಮನೆಯಲ್ಲಿರುವುದಾಗಿ ಆರೋಪಿ ದರ್ಶನ್ ಹೇಳಿಕೆ ನೀಡಿದ್ದು, ಅದರಂತೆ ನಮೂದಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಪಂಚನಾಮೆ ವೇಳೆ ಹೇಳಿಕೆ ಯಥಾವತ್ ದಾಖಲಿಸಿಕೊಳ್ಳಲಾಗಿದೆ. ಅದರಂತೆ ದರ್ಶನ್ ಮನೆಯಲ್ಲಿ ಹತ್ಯೆ ಸಂದರ್ಭದಲ್ಲಿ ಧರಿಸಿದ್ದ ಬಟ್ಟೆ ವಶಕ್ಕೆ ಪಡೆಯಲಾಗಿದೆ. ಬಳಿಕ ಆತನ ಪತ್ನಿ ವಿಜಯಲಕ್ಷ್ಮೀ ಮನೆಯಲ್ಲಿ ನೀಲಿ ಬಣ್ಣದ ಲೋಫರ್ಸ್ ಕಂಪನಿ ಶೂ ಜಪ್ತಿ ಮಾಡಲಾಯಿತು. ಚಪ್ಪಲಿ ಎಂದು ಹೇಳಿಕೆ ಪಡೆದು ಶೂ ರಿಕವರಿ ಮಾಡಿದ್ದಾರೆ ಎಂಬ ದರ್ಶನ್ ಪರ ವಕೀಲರ ವಾದಕ್ಕೆ ಸರ್ಕಾರಿ ವಿಶೇಷ ಅಭಿಯೋಜಕ ಪ್ರಸನ್ನ ಕುಮಾರ್ ತಿರುಗೇಟು ನೀಡಿದರು.
ದರ್ಶನ್ ಧರಿಸಿದ್ದ ಬಟ್ಟೆಯನ್ನು ಕುಕ್ಕಿ ಕುಕ್ಕಿ ಒಗೆದಿದ್ದರಿಂದ ರಕ್ತದ ಕಲೆಯಿರಲು ಸಾಧ್ಯವೇ? ಎಂಬ ಆರೋಪಿ ಪರ ವಕೀಲರ ಪ್ರಶ್ನೆಗೆ ಸ್ಪಷ್ಟನೆ ನೀಡಿ, ದರ್ಶನ್ ಬಟ್ಟೆ ಒಗೆಯಲು ಮನೆ ಕೆಲಸದವರಿಗೆ ಪವನ್ ಸೂಚಿಸಿದ್ದ. ಬಟ್ಟೆಯನ್ನು ಕುಕ್ಕಿ ಒಗೆದಿರುವ ಬಗ್ಗೆ ಕೆಲಸಗಾರನ ಹೇಳಿಕೆ ದಾಖಲಿಸಲಾಗಿದೆ. ಬಟ್ಟೆ ಒಗೆದ ಮೇಲೂ ಬರಿಗಣ್ಣಿಗೆ ಕಾಣದ ಅಂಶವು ಡಿಎನ್ಎ ಪರೀಕ್ಷೆಯಲ್ಲಿ ಪತ್ತೆ ಹಚ್ಚಲು ಸಾಧ್ಯವಿದೆ. 40ರಿಂದ 80 ಡಿಗ್ರಿ ಉಷ್ಣಾಂಶದಲ್ಲಿ ಒಣಗಿಸಿದ್ದರೂ ಡಿಎನ್ಎನಲ್ಲಿ ಪರೀಕ್ಷೆಯಲ್ಲಿ ರಕ್ತದ ಕಲೆ ಪತ್ತೆ ಹಚ್ಚಬಹುದಾಗಿದೆ.
ಲಾಂಡ್ರಿ, ವಾಷಿಂಗ್ ಪೌಡರ್ನಿಂದ ಒಗೆದರೂ ಪತ್ತೆ ಹಚ್ಚಬಹುದಾಗಿದೆ. ಡಿಎನ್ಎ ವರದಿ ಶೇ.100ರಷ್ಟು ನಿಖರತೆ ಹೊಂದಿದೆ ಎಂದು ವೈಜ್ಞಾನಿಕ ವರದಿಗಳು ತಿಳಿಸಿವೆ. ದರ್ಶನ್, ಪವಿತ್ರಾಗೌಡ, ರವಿ ಸೇರಿದಂತೆ ಇನ್ನಿತರು ಕೃತ್ಯದ ವೇಳೆ ಧರಿಸಿದ್ದ ಬಟ್ಟೆಗಳನ್ನು ಎಫ್ಎಸ್ಎಲ್ಗೆ ಕಳುಹಿಸಲಾಗಿದ್ದು, ವರದಿಯಲ್ಲಿ ರೇಣುಕಾಸ್ವಾಮಿ ಡಿಎನ್ಎಗೆ ಹೋಲಿಕೆಯಾಗಿದೆ ಎಂದು ಪ್ರತಿಪಾದಿಸಿದರು.