ಬೆಂಗಳೂರು:ಕನ್ನಡ ಚಿತ್ರರಂಗ ಸೇರಿದಂತೆ ದೇಶಾದ್ಯಂತ ಸದ್ದು ಮಾಡಿದ್ದಚಿತ್ರದುರ್ಗ ಮೂಲದರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಇನ್ನೆರೆಡು ದಿನಗಳಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಇಂದು ಮಾಹಿತಿ ನೀಡಿದರು.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ಮುಕ್ತಾಯಗೊಂಡಿದ್ದು, ದೋಷಾರೋಪ ಪಟ್ಟಿ ಸಲ್ಲಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಪರಿಶೀಲಿಸಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ಗೆ ನೀಡಲಾಗಿತ್ತು. ಆರೋಪಪಟ್ಟಿಯಲ್ಲಿ ಉಲ್ಲೇಖಿಸಿರುವ ಕೆಲವು ಅಂಶಗಳ ನ್ಯೂನತೆಗಳ ಗುರುತು ಮಾಡಿದ್ದು, ಸರಿಪಡಿಸುವ ಕೆಲಸವಾಗುತ್ತಿದೆ. ಇನ್ನೆರಡು ದಿನದೊಳಗೆ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಪ್ರಕರಣದಲ್ಲಿ ಈಗಾಗಲೇ ವೈಜ್ಞಾನಿಕ, ಭೌತಿಕ ಹಾಗೂ ತಾಂತ್ರಿಕ ವರದಿ ಸಂಗ್ರಹಿಸಲಾಗಿದೆ. ಮೊಬೈಲ್ ರಿಟ್ರೀವ್, ಡಿವಿಆರ್ ಸೇರಿ ಎಲ್ಲಾ ವರದಿಗಳನ್ನ ಎಫ್ಎಸ್ಎಲ್ನಿಂದ ಸಂಗ್ರಹಿಸಲಾಗಿದೆ. ಇದಕ್ಕೆ ಪೂರಕವಾಗಿ ಮಾಹಿತಿಗಳನ್ನು ಕೇಳಿ ಪಡೆಯಲಾಗಿದೆ. ಇನ್ನೂ ಹೈದರಬಾದ್ನ ಎಫ್ಎಸ್ಎಲ್ನಿಂದ ಬಹುತೇಕ ವರದಿಗಳು ಬಂದಿದ್ದು, ಕೆಲ ವರದಿಗಳು ಬರಬೇಕಿದೆ. ಹೀಗಾಗಿ ಲಭ್ಯವಿರುವ ಮಾಹಿತಿಯೊಳಗೊಂಡಂತೆ ಸುಮಾರು 4 ಸಾವಿರ ಪುಟಗಳ ಪ್ರಾಥಮಿಕ ಹಂತದ ಚಾರ್ಜ್ ಶೀಟ್ ಸಲ್ಲಿಸಲಾಗುವುದು. ಬಳಿಕ ಎಲ್ಲಾ ವರದಿಗಳು ಕೈಸೇರಿದ ಪೂರಕ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ ಎಂದು ಬಿ ದಯಾನಂದ ವಿವರಿಸಿದರು.