ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಹಾಗೂ ಪವಿತ್ರಾಗೌಡ ಸೇರಿ 13 ಮಂದಿ ಆರೋಪಿಗಳಿಗೆ ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ಆರ್ಥಿಕ ಅಪರಾಧ ನ್ಯಾಯಾಲಯವು ಆದೇಶಿಸಿದೆ.
ಪ್ರಕರಣದ ಆರೋಪಿಗಳಾದ ದರ್ಶನ್, ಪವಿತ್ರಾ ಗೌಡ, ಪವನ್, ರಾಘವೇಂದ್ರ, ನಂದೀಶ್, ವಿನಯ್, ನಾಗರಾಜ್, ಲಕ್ಷ್ಮಣ್, ದೀಪಕ್, ಪ್ರದೋಷ್, ನಿಖಿಲ್ ನಾಯಕ್ ಹಾಗೂ ಅನುಕುಮಾರ್ ಎಂಬುವರನ್ನು ಜೂ. 20ರ ವರೆಗೆ ಐದು ದಿನಗಳ ಪೊಲೀಸ್ ಕಸ್ಟಡಿ ನೀಡಿ ನ್ಯಾಯಮೂರ್ತಿ ವಿಶ್ವನಾಥ್ ಸಿ.ಗೌಡರ್ ಅವರು ಆದೇಶಿಸಿದರು.
ಪ್ರಕರಣ ಸಂಬಂಧ ವಾದ ಆರಂಭಿಸಿದ ಎಸ್ಪಿಪಿ ಪ್ರಸನ್ನ ಕುಮಾರ್, ವ್ಯಕ್ತಿಯನ್ನ ಭೀಕರವಾಗಿ ಹತ್ಯೆ ಮಾಡಲಾಗಿದೆ. ಕೊಲೆ ಪ್ರಕರಣದಲ್ಲಿ ಒಟ್ಟು 16 ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಆರೋಪಿಗಳನ್ನು ಕರೆದೊಯ್ದು ಕೃತ್ಯವೆಸಗಿದ್ದ ಸ್ಥಳ ಮಹಜರು ಮಾಡಿ ಹಲವು ಸಾಕ್ಷ್ಯಾಧಾರ ಸಂಗ್ರಹಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ವಾಹನಗಳನ್ನು ಸೀಜ್ ಮಾಡಲಾಗಿದೆ. ವಶಕ್ಕೆ ಪಡೆದುಕೊಂಡಿರುವ ಆರೋಪಿಗಳ ಮೊಬೈಲ್ ರಿಟ್ರೀವ್ ಮಾಡಬೇಕಿದೆ. ನಿನ್ನೆಯಷ್ಟೇ ಜಗದೀಶ್ ಹಾಗೂ ಅನು ಎಂಬುವರನ್ನ ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಂದ 30 ಲಕ್ಷ ಹಣ ವಶಕ್ಕೆ ಪಡೆಯಲಾಗಿದೆ. ಪ್ರಕರಣದ 5ನೇ ಆರೋಪಿ ನಂದೀಶ್ ಹಾಗೂ ಎ-13 ದೀಪಕ್ ಎಂಬುವರು ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್ ಶಾಕ್ ನೀಡಿದ್ದು, ಇದರ ಡಿವೈಎಸ್ ಸಹ ವಶಕ್ಕೆ ಪಡೆಯಬೇಕಿದೆ. ಸಾಕ್ಷಿ ನಾಶಪಡಿಸಲು ಆರೋಪಿಗಳಿಂದ ಸಂಚು ನಡೆದಿದೆ. ಆರೋಪಿತರಿಂದ ತನಿಖೆಗೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ಕಲೆ ಹಾಕಬೇಕಿದೆ. ಹೀಗಾಗಿ 9 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು.
ದರ್ಶನ್ ಪರ ವಕೀಲ ಅನಿಲ್ ಬಾಬು ವಾದ ಮಂಡಿಸಿ ಪ್ರಕರಣದಲ್ಲಿ ಎಲ್ಲದಕ್ಕೂ ಎರಡನೇ ಆರೋಪಿ ದರ್ಶನ್ ಅವರೇ ಕಾರಣ ಎಂಬುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಹೀಗಾಗಿ ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಮನವಿ ಮಾಡಿದರು.
ಪವಿತ್ರಾಗೌಡ ಪರ ವಕೀಲ ನಾರಾಯಣಸ್ವಾಮಿ ವಾದ ಮಂಡಿಸಿ ಪವಿತ್ರಾಗೌಡರನ್ನು 6 ದಿನಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿದೆ. ಕೋರ್ಟ್ ಅನುಮತಿ ಪಡೆಯದೆ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಹೇಳಿಕೆ ಹೊರಗೆ ಸೋರಿಕೆಯಾಗುತ್ತಿದೆ. ಹೀಗಾಗಿ ನ್ಯಾಯಾಂಗ ಬಂಧನ ನೀಡಬೇಕೆಂದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಆರೋಪಿತರನ್ನ ಐದು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿ ಆದೇಶಿಸಿದರು.