ಕರ್ನಾಟಕ

karnataka

ETV Bharat / state

ನಕ್ಸಲ್ ಆರೋಪಿ ಸಾವಿತ್ರಿ ಬಾಡಿ ವಾರೆಂಟ್ ಮರುಪರಿಶೀಲಿಸಲು ಅಧೀನ ನ್ಯಾಯಾಲಯಕ್ಕೆ ಸೂಚನೆ

ನಕ್ಸಲ್ ಚಳವಳಿಯಲ್ಲಿ ಭಾಗಿಯಾದ ಆರೋಪದ ಮೇಲೆ ಕೇರಳ ಪೊಲೀಸರ ವಶದಲ್ಲಿರುವ ಸಾವಿತ್ರಿ ಅವರ ವಿರುದ್ಧ ಬಾಡಿ ವಾರೆಂಟ್ ಜಾರಿ ಕುರಿತ ಮನವಿಯನ್ನು ಮರು ಪರಿಶೀಲಿಸುವಂತೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಹೈಕೋರ್ಟ್ High Court
ಹೈಕೋರ್ಟ್ (ETV Bharat)

By ETV Bharat Karnataka Team

Published : 11 hours ago

ಬೆಂಗಳೂರು:ದಕ್ಷಿಣ ಕನ್ನಡ ಜಿಲ್ಲೆ ವೇಣೂರು ಪೊಲೀಸ್ ಠಾಣೆಯಲ್ಲಿ 2012ರಲ್ಲಿ ದಾಖಲಾಗಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ವಿಚಾರಣೆಗೆ ಒಳಪಡಿಸಲು ನಕ್ಸಲ್ ಚಳವಳಿಯಲ್ಲಿ ತೊಡಗಿದ್ದ ಆರೋಪದ ಮೇಲೆ ಕೇರಳ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಸಾವಿತ್ರಿ ಅವರ ವಿರುದ್ಧ ಬಾಡಿ ವಾರೆಂಟ್ ಜಾರಿಗೊಳಿಸಬೇಕು ಎಂದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಮನವಿ ಮರು ಪರಿಶೀಲಿಸಲು ಬೆಳ್ತಂಗಡಿಯ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ವೇಣೂರು ಪೊಲೀಸರು ಸಲ್ಲಿಸಿದ್ದ ಎರಡು ಪ್ರತ್ಯೇಕ ಕ್ರಿಮಿನಲ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಪ್ರಕರಣವನ್ನು ಬೆಳ್ತಂಗಡಿ ಎಸಿಜೆ ಮತ್ತು ಜೆಎಂಎಫ್‌ಸಿ ಕೋರ್ಟ್‌ಗೆ (ಅಧೀನ ನ್ಯಾಯಾಲಯ) ಹಿಂದಿರುಗಿಸಿತು. ಅಲ್ಲದೆ, ಸರ್ಕಾರದ ಮನವಿಯನ್ನು ಮರು ಪರಿಶೀಲಿಸಿ ನಿರ್ಧಾರ ಕೈಗೊಳ್ಳುವಂತೆ ಅಧೀನ ನ್ಯಾಯಾಲಯಕ್ಕೆ ನಿರ್ದೇಶಿಸಿ ಅರ್ಜಿಗಳನ್ನು ಇತ್ಯರ್ಥಪಡಿಸಿದೆ.

ಪೊಲೀಸರ ಪರ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್.ಜಗದೀಶ್ ವಾದ ಮಂಡಿಸಿ, ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಕೇರಳ ಪೊಲೀಸರಿಂದ ಸಾವಿತ್ರಿ ಅಲಿಯಾಸ್ ಉಷಾ ಬಂಧನಕ್ಕೆ ಒಳಗಾಗಿದ್ದಾರೆ. ಸದ್ಯ ತ್ರಿಶ್ಯೂರ್ ಜೈಲಿನಲ್ಲಿದ್ದಾರೆ. ಆದರೆ, 2012ರಲ್ಲಿ ಬೆಳ್ತಂಗಡಿಯ ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರಕರಣಗಳ ಸಂಬಂಧ ಸಾವಿತ್ರಿಯನ್ನು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಅಲ್ಲದೆ, ಸಾವಿತ್ರಿ ವಿರುದ್ಧ ಬಾರಿ ವಾರೆಂಟ್ ಜಾರಿಗೊಳಿಸುವಂತೆ ಕೋರಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಬೆಳ್ತಂಗಡಿ ಎಸಿಜೆ ಮತ್ತು ಜೆಎಂಎಫ್ ಕೋರ್ಟ್ 2022ರ ಜೂ.22ರಂದು ಆದೇಶಿಸಿದೆ. ಪ್ರಕರಣ ತನ್ನ ಮುಂದಿಲ್ಲ. ಪ್ರಕರಣದ ವಿಚಾರಣಾ ವ್ಯಾಪ್ತಿ ಹೊಂದಿರುವ ಕೋರ್ಟ್ ಮುಂದೆ ಅರ್ಜಿ ಸಲ್ಲಿಸುವಂತೆ ಅಧೀನ ನ್ಯಾಯಾಲಯ ಆದೇಶಿಸಿದೆ. ಆದರೆ, ಸರ್ಕಾರದ ಮನವಿಯನ್ನು ಪರಿಶೀಲನೆ ನಡೆಸುವ ಅಧಿಕಾರ ವ್ಯಾಪ್ತಿ ಈ ಅಧೀನ ನ್ಯಾಯಾಲಯ ಹೊಂದಿದೆ. ಅದರಂತೆ ಅಧೀನ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು. ಸರ್ಕಾರದ ಮನವಿಯನ್ನು ಮರು ಪರಿಶೀಲಿಸಲು ಅಧೀನ ನ್ಯಾಯಾಲಯಕ್ಕೆ ಸೂಚಿಸಬೇಕು ಎಂದು ಕೋರಿದರು. ಈ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿದೆ.

ಇದನ್ನೂ ಓದಿ:ಎಚ್​ಎಸ್​ಆರ್​ಪಿ ನಂಬರ್​ ಪ್ಲೇಟ್ ಅಳವಡಿಕೆಗೆ ಡಿಸಂಬರ್​ 5ರವರೆಗೂ ಗಡುವು ವಿಸ್ತರಿಸಿದ ಹೈಕೋರ್ಟ್

ಇದನ್ನೂ ಓದಿ:ನಕ್ಸಲ್ ವಿಕ್ರಂ ಗೌಡ ಎನ್​ಕೌಂಟರ್: ಕಾರ್ಯಾಚರಣೆ ಮಾಹಿತಿ ಬಿಚ್ಚಿಟ್ಟ ಸಚಿವ ಜಿ.ಪರಮೇಶ್ವರ್

ABOUT THE AUTHOR

...view details