ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ತಗ್ಗಿದ್ದ ಮುಂಗಾರು ಮಳೆಯು ಮತ್ತೆ ಚುರುಕಾಗುವ ಮುನ್ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ ನೀಡಿದ್ದು, ಮುಂದಿನ 48 ಗಂಟೆಗಳಿಗೆ ಅನ್ವಯವಾಗುವಂತೆ ರಾಜ್ಯದ ಮೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ದಕ್ಷಿಣ ಒಳನಾಡಿನ ಕೊಡಗು ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಉಳಿದಂತೆ ಉತ್ತರ ಕನ್ನಡಕ್ಕೆ ಭಾನುವಾರ ಮತ್ತು ಸೋಮವಾರ ಕ್ರಮವಾಗಿ ಆರೆಂಜ್ ಮತ್ತು ರೆಡ್ ಅಲರ್ಟ್, ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಗೆ ಸೋಮವಾರ ಯೆಲ್ಲೋ, ಬೀದರ್ ಜಿಲ್ಲೆಗೆ ಎರಡು ದಿನ ಯೆಲ್ಲೋ, ಕಲಬುರಗಿ ಜಿಲ್ಲೆಗೆ ಭಾನುವಾರ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನು ದಕ್ಷಿಣ ಒಳನಾಡಿನ ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗೆ ಸೋಮವಾರ ಮತ್ತು ಭಾನುವಾರ ಕ್ರಮವಾಗಿ ಯೆಲ್ಲೋ ಮತ್ತು ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಚದುರಿದಂತೆ ಭಾರೀ ಮಳೆಯಾಗಲಿದೆ. ದಕ್ಷಿಣ ಒಳ ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಗುಡುಗು ಸಹಿತ ಮಳೆಯಾಗಲಿದೆ. ದಕ್ಷಿಣ ಒಳ ಕರ್ನಾಟಕದ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಚದುರಿದಂತೆ ಭಾರೀ ಮಳೆಯಾಗಲಿದೆ. ರಾಜ್ಯದ ಒಳನಾಡಿನ ಬೆಳಗಾವಿ, ಬೀದರ್ ಮತ್ತು ಮೈಸೂರು ಜಿಲ್ಲೆಗಳಲ್ಲಿ ಭಾರೀ ಗಾಳಿಸಹಿತ ವರುಣ ಅಬ್ಬರಿಸುವ ಸಾಧ್ಯತೆಯಿದೆ ಎಂದಿದೆ.
ದಕ್ಷಿಣ ಒಳ ಕರ್ನಾಟಕದ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳ ಮೇಲೆ ಅನೇಕ ಸ್ಥಳಗಳಲ್ಲಿ ಮತ್ತು ಉತ್ತರ ಒಳನಾಡಿನ ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳ ಹೆಚ್ಚಿನ ಸ್ಥಳಗಳಲ್ಲಿ ಬಿರುಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ಸಾಧಾರಣ ಮಳೆ:ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ಆಕಾಶ ಇರಲಿದೆ. ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ. ಕೆಲವೊಮ್ಮೆ ಮೇಲ್ಮೈ ಗಾಳಿಯು ಪ್ರಬಲವಾಗಿರುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಡಿಗ್ರಿ ಮತ್ತು 21 ಡಿಗ್ರಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಎಲ್ಲಿ ಅತಿ ಹೆಚ್ಚು ಮಳೆ:ನೈಋತ್ಯ ಮುಂಗಾರು ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಸಾಧಾರಣವಾಗಿದ್ದು, ಮತ್ತು ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿತ್ತು. ಕರಾವಳಿಯ ಬಹುತೇಕ ಕಡೆಗಳಲ್ಲಿ ಮತ್ತು ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಿದೆ. ಇಲ್ಲಿಯವರೆಗೆ ಅತಿ ಹೆಚ್ಚು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಕಾರವಾರ ಮತ್ತು ಕುಮಟಾದಲ್ಲಿ 5 ಸೆಂ.ಮೀ ಮಳೆಯಾಗಿದೆ. ಊಳಿದಂತೆ ಸಿದ್ದಾಪುರ, ಕೊಲ್ಲೂರು, ಕೋಟ, ಸಿದ್ದಾಪುರದಲ್ಲಿ 4 ಸೆಂ.ಮೀ ಮಳೆಯಾಗಿದೆ.
ಮೀನುಗಾರರಿಗೆ ಎಚ್ಚರಿಕೆ: ತೀವ್ರ ಬಿರುಗಾಳಿಯಿಂದ ಕೂಡಿದ ಹವಾಮಾನ ಇಲಾಖೆ ಪ್ರಕಾರ 45 ರಿಂದ 55 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಕರ್ನಾಟಕ ಕರಾವಳಿಯ ಉದ್ದಕ್ಕೂ ಮತ್ತು ಹೊರಗೆ ಮೇಲುಗೈ ಸಾಧಿಸುವ ಸಾಧ್ಯತೆ ಇರುವುದರಿಂದ ಮೀನುಗಾರರಿಗೆ ಅಲರ್ಟ್ ನೀಡಲಾಗಿದೆ.
ಬೆಂಗಳೂರು ಹವಾಮಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ರಾಜವೇಲ್ ಮಾಣಿಕ್ಕಂ ಮಾತನಾಡಿ, ಸರಾಸರಿ ಸಮುದ್ರ ಮಟ್ಟದಲ್ಲಿನ ಟ್ರಫ್ ಈಗ ದಕ್ಷಿಣ ಮಹಾರಾಷ್ಟ್ರ-ಉತ್ತರ ಕೇರಳ ಕರಾವಳಿಯಿಂದ ಹಾದು ಹೋಗುತ್ತಿದೆ. ಸಮುದ್ರ ಮಟ್ಟದಿಂದ ಸರಾಸರಿ 3.1 ಮತ್ತು 4.5 ಕಿ.ಮೀ ಎತ್ತರದಲ್ಲಿ ವಿದರ್ಭ ಮತ್ತು ನೆರೆಹೊರೆಯಲ್ಲಿ ಚಂಡಮಾರುತದ ಪರಿಚಲನೆಯು ಗುರುತಿಸಲ್ಪಟ್ಟಿದೆ. ಈ ಕಾರಣಕ್ಕೆ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಪಕ್ಕದ ಜಿಲ್ಲೆಗಳು ಜೂನ್ 22 ರಿಂದ 25 ರಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ. ಬಲವಾದ ಗಾಳಿ ಮತ್ತು ಭೂಕುಸಿತದ ಸಂಭವನೆ ಕೂಡ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲಿ ಕೆಂಪು ಸುಂದರಿಗೆ ಡಿಮ್ಯಾಂಡ್ಪ್ಪೋ ಡಿಮ್ಯಾಂಡು; ಬಂಪರ್ ನಿರೀಕ್ಷೆಯಲ್ಲಿ ರೈತ! - TOMATO PRICE