ಮಂಗಳೂರು:ಕರ್ನಾಟಕದ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ದೈವಗಳ ಆರಾಧನೆ ನಡೆಯುತ್ತದೆ. ಸಾವಿರಾರು ವರ್ಷಗಳಿಂದ ತುಳುನಾಡಿನ ಜನರು ದೈವಗಳ ಆರಾಧನೆ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ ದೈವಗಳ ಆರಾಧನೆ ನಡೆಯುವ ದೈವಸ್ಥಾನಗಳು ಪ್ರತಿ ಊರಿನಲ್ಲಿಯೂ ಇವೆ.
ಆದರೆ ಇದೀಗ ಮಂಗಳೂರು ತಾಲೂಕಿನ ಪೆದಮಲೆ ಎಂಬಲ್ಲಿ 300 ವರ್ಷಗಳ ಹಿಂದೆ ನೆಲಸಮವಾಗಿದ್ದ ದೈವಸ್ಥಾನದ ಕುರುಹು ಪತ್ತೆಯಾಗಿದ್ದು, ಹೊಸ ದೈವಸ್ಥಾನ ನಿರ್ಮಾಣ ಕಾರ್ಯ ನಡೆಯುತ್ತಿದೆ. ವಾಜಿಲ್ಲಾಯ ದೈವದ ಮಹಿಮೆಯಿಂದ 300 ವರ್ಷಗಳ ಹಿಂದೆ ನೆಲಸಮವಾಗಿದ್ದ ದೈವಸ್ಥಾನ ಒಂದೇ ವರ್ಷದಲ್ಲಿ ಪೂರ್ಣವಾಗುತ್ತಿದೆ.
ಶ್ರೀ ವಾಜಿಲ್ಲಾಯ- ಧೂಮಾವತಿ ದೈವಸ್ಥಾನ ಟ್ರಸ್ಟ್ ಅಧ್ಯಕ್ಷ ಗಿರಿಧರ್ ಶೆಟ್ಟಿ ಮಾಹಿತಿ (ETV Bharat) ತಮ್ಮ ಇರುವಿಕೆಯನ್ನು ನೆನಪಿಸುವ ದೈವಗಳು :ದೈವಗಳ ಆರಾಧನೆ ನಡೆಯುವ ದಕ್ಷಿಣ ಕನ್ನಡದಲ್ಲಿ ದೈವಾರಾಧನೆ, ಭೂತಾರಾಧನೆಗೆ ಹೆಚ್ಚಿನ ಮಹತ್ವವಿದೆ. ತುಳುನಾಡಿನ ಜನರು ಸುಮಾರು 1,400 ರಷ್ಟು ದೈವಗಳನ್ನು ಆರಾಧನೆ ನಡೆಸುತ್ತಿದ್ದರು ಎಂಬ ಸಂಶೋಧನೆಯೂ ಇದೆ. ಸಹಸ್ರಾರು ವರ್ಷಗಳಿಂದ ಈ ದೈವಗಳಿಗೆ ಸೇವೆಗಳನ್ನು ಜನರು ನಡೆಸುತ್ತಲೇ ಇದ್ದಾರೆ. ಹೀಗೆ ಭಯ ಭಕ್ತಿಯಿಂದ ನಡೆಯುತ್ತಿರುವ ದೈವಗಳ ಆರಾಧನೆ ಕೆಲವೊಂದು ಕಡೆ ನಾನಾ ಕಾರಣಗಳಿಂದ ನಿಂತು ಹೋಗಿದ್ದೂ ಇದೆ. ಇವುಗಳ ಇರುವಿಕೆಯನ್ನು ದೈವಗಳು ನೆನಪು ಮಾಡಿಸುತ್ತವೆ ಎಂಬ ನಂಬಿಕೆ ಜನರಲ್ಲಿದೆ.
ಇದೇ ರೀತಿಯ ಒಂದು ದೈವದ ಮಹಿಮೆ ಮಂಗಳೂರು ತಾಲೂಕಿನ ನೀರುಮಾರ್ಗದಲ್ಲಿರುವ ಪೆದಮಲೆಯಲ್ಲಿ ನಡೆದಿದೆ. ನೀರುಮಾರ್ಗ ಗ್ರಾಮದ ಪೆದಮಲೆಯಲ್ಲಿ ಶ್ರೀ ಉಮಾ ಮಹೇಶ್ವರ ಎಂಬ ದೇವಸ್ಥಾನ ಇದೆ. ಈ ದೇವಸ್ಥಾನದ ಜೀರ್ಣೋದ್ಧಾರ ನಡೆಸಲು ಪ್ರಶ್ನಾ ಚಿಂತನೆ ನಡೆಸಲಾಗಿತ್ತು. ಈ ದೇವಸ್ಥಾನದ ಪ್ರಶ್ನಾ ಚಿಂತನೆ ವೇಳೆ ಬಂದ ಉತ್ತರವೇ ದೇವಸ್ಥಾನ ಜೀರ್ಣೋದ್ಧಾರಕ್ಕೆ ಮುಂಚೆ ಇಲ್ಲಿಯೇ ಇರುವ ದೈವಸ್ಥಾನದಲ್ಲಿ ಮೊದಲು ಜೀರ್ಣೋದ್ಧಾರವಾಗಬೇಕು ಎಂದು.
ಗ್ರಾಮಸ್ಥ ಹಾಗೂ ಟ್ರಸ್ಟ್ ಕಾರ್ಯಾಧ್ಯಕ್ಷರಿಂದ ಮಾಹಿತಿ (ETV Bharat) ಆದರೆ ಆವರೆಗೆ ಅಲ್ಲಿನ ಜನರಿಗೆ ಊರಿನಲ್ಲಿ ದೈವಸ್ಥಾನವೊಂದು ಇತ್ತು ಎಂಬ ಮಾಹಿತಿ ಇರಲಿಲ್ಲ. ಪ್ರಶ್ನಾ ಚಿಂತನೆಯೊಂದಿಗೆ ಹುಡುಕಾಡಿದಾಗ ಅಲ್ಲಿ ಜನರು ಬನ ಎಂದು ಕರೆಯಲಾಗುವ ಜಾಗದಲ್ಲಿ ಇದ್ದ ಪೊದೆಯನ್ನು ಸರಿಸಿ ನೋಡಿದಾಗ ದೈವಸ್ಥಾನದ ಅವಶೇಷಗಳು ಪತ್ತೆಯಾಗಿವೆ. ಸಂಪೂರ್ಣ ಶಿಥಿಲಗೊಂಡ ದೈವಸ್ಥಾನದ ಸುತ್ತುಪೌಳಿ ಹಾಗೂ ಗರ್ಭಗುಡಿಯ ಪಂಚಾಂಗ ಮಾತ್ರ ಕಾಣುತ್ತಿತ್ತು. ಸುಮಾರು 20 ಸೆಂಟ್ಸ್ ಜಾಗದಲ್ಲಿ ಗಿಡ, ಬೃಹತ್ ಗಾತ್ರದ ಮರ ಬಳ್ಳಿಯಿಂದಾವೃತವಾದ ಈ ಪ್ರದೇಶವನ್ನು ಜನರು ಬನ ಎಂದೇ ಕರೆಯುತ್ತಿದ್ದರು.
ಈ ಜಾಗಕ್ಕೆ ಜನಸಂಚಾರವಿಲ್ಲದೆ ಶತಮಾನವೇ ಕಳೆದಿತ್ತು. ಇಲ್ಲಿ ದೈವಸ್ಥಾನದ ಧ್ವಜ ಸ್ಥಂಭದ ಬುಡವೊಂದರ ದಂಬೆ ಕಲ್ಲು ಸಿಕ್ಕಿದ್ದು, ಅದರ ಒಂದು ಬದಿ ಕುದುರೆ ಮೇಲೆ ರಾಜನೊಬ್ಬನ ಕೆತ್ತನೆ ಹಾಗೂ ಇನ್ನೊಂದು ಬದಿ ಸೂರ್ಯ ಚಂದ್ರರ ಸುಂದರ ಕೆತ್ತನೆ ಇದೆ. ಇನ್ನು ಸ್ಥಳದಲ್ಲಿ ಗಂಟೆ ಸೇರಿದಂತೆ ಹಲವು ವಸ್ತುಗಳು ಸಿಕ್ಕಿವೆ.
ಶ್ರೀ ವಾಜಿಲ್ಲಾಯ- ಧೂಮಾವತಿ ದೈವಸ್ಥಾನ ಟ್ರಸ್ಟ್ ಅಧ್ಯಕ್ಷ ಗಿರಿಧರ್ ಶೆಟ್ಟಿ ಮಾಹಿತಿ (ETV Bharat) ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟ ಮಂಗಲ ಪ್ರಶ್ನೆ ಸಂದರ್ಭದಲ್ಲಿ ಈ ದೈವಸ್ಥಾನದಲ್ಲಿ 300 ವರ್ಷಗಳಿಂದ ದೈವದ ಸೇವೆಗಳಾದ ನೇಮಗಳು ನಡೆಯುತ್ತಿಲ್ಲ ಎಂಬುದು ತಿಳಿದುಬಂದಿದೆ. ಇಲ್ಲೊಂದು ದೈವಸ್ಥಾನ ಇತ್ತೆಂಬುದು ಈಗ ಇರುವ ಯಾರಿಗೂ ತಿಳಿದಿರಲಿಲ್ಲ. ಆದರೆ ದೈವದ ಚಾವಡಿ ಇರುವ ಕಡೆ ಜನರು ದೈವಕ್ಕೆ ಶುಭ ಸಮಾರಂಭಗಳ ವೇಳೆ ಹೂವು ಹಾಕುತ್ತಿದ್ದರು. ಆದರೆ ಅದು ಯಾವ ದೈವದ ಚಾವಡಿ ಎಂಬುದು ಯಾರಿಗೂ ತಿಳಿದಿರಲಿಲ್ಲ.
ಈ ದೈವಸ್ಥಾನದ ಕುರುಹು ಸಿಕ್ಕ ಬಳಿಕ ಮತ್ತೆ ಅದೇ ಜಾಗದಲ್ಲಿ ಪ್ರಶ್ನಾ ಚಿಂತನೆಗಳನ್ನು ನಡೆಸಿದ ವೇಳೆ ಇಲ್ಲಿ ವಾಜಿಲ್ಲಾಯ- ಧೂಮವತಿ ದೈವಸ್ಥಾನ ಇತ್ತು ಎಂಬುದು ತಿಳಿದುಬಂದಿದೆ. ಅದರಂತೆ ಈ ದೈವಸ್ಥಾನವನ್ನು ಪುನರ್ ಕಟ್ಟುವ ಕಾರ್ಯಕ್ಕೆ ಊರವರು ತೀರ್ಮಾನ ಮಾಡಿದ್ದಾರೆ. ಇದಕ್ಕಾಗಿ ಗಿರಿಧರ್ ಶೆಟ್ಟಿ ಎಂಬವರ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ ಪೆದಮಲೆ ಶ್ರೀ ವಾಜಿಲ್ಲಾಯ ಧೂಮಾವತಿ ದೈವಸ್ಥಾನ ಟ್ರಸ್ಟ್ ಎಂಬುದನ್ನು ರಚಿಸಿ ದೈವಸ್ಥಾನದ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ.
ದೈವಸ್ಥಾನ ಸೇವಾ ಸಮಿತಿ (ETV Bharat) ಎರಡು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ದೈವಸ್ಥಾನಕ್ಕೆ ಊರವರು, ಪರವೂರವರು ಮನದುಂಬಿ ದೇಣಿಗೆ ನೀಡಿದ್ದಾರೆ. ಇದೀಗ ಶೇಕಡ 90 ರಷ್ಟು ಕಾಮಗಾರಿ ಮುಗಿದಿದ್ದು, ಫೆಬ್ರವರಿ 18 ರಂದು ಪುನರ್ ಪ್ರತಿಷ್ಠಾ ಕಲಶಾಭಿಷೇಕ ನಡೆಸಲು ನಿರ್ಧರಿಸಲಾಗಿದೆ.
ದಂಬೆಕಲ್ಲು ನೀಡಿದ ಇತಿಹಾಸ :ನೆಲದಡಿಗೆ ಬಿದಿದ್ದ ದೈವಸ್ಥಾನದ ಕುರುಹು ಪತ್ತೆ ಸಂದರ್ಭದಲ್ಲಿ ದೊಡ್ಡ ರೀತಿಯಲ್ಲಿ ಈ ದೈವಸ್ಥಾನದ ಬಗ್ಗೆ ಮಾಹಿತಿ ನೀಡಿದ್ದು ದಂಬೆ ಕಲ್ಲು. ದಂಬೆ ಕಲ್ಲು ಎಂದರೆ ದೈವಸ್ಥಾನದ ಧ್ವಜಸ್ಥಂಭದ ಬುಡ. ಇಲ್ಲಿ ಸಿಕ್ಕ ದಂಬೆಕಲ್ಲಿನಲ್ಲಿ ಕುದುರೆ ಮೇಲೆ ರಾಜನೊಬ್ಬನ ಕೆತ್ತನೆ ಹಾಗೂ ಇನ್ನೊಂದು ಬದಿಯಲ್ಲಿ ಸೂರ್ಯ ಚಂದ್ರರ ಕೆತ್ತನೆ ಇದೆ. ಕುದುರೆ ಎಂದರೆ ವಾಜಿ ಎಂಬ ಅರ್ಥ ಬರುತ್ತದೆ. ಕುದುರೆಯ ಮೇಲೆ ಕುಳಿತವನೆ ವಾಜಿಲ್ಲಾಯ ಎಂದು ಹೇಳಲಾಗುತ್ತದೆ. ತುಳುನಾಡಿನಲ್ಲಿ ಅರಸು ದೈವಗಳನ್ನು ಆರಾಧಿಸಲಾಗುತ್ತಿದ್ದು, ವಿವಿಧ ಹೆಸರಿನಲ್ಲಿ ಕರೆಯಲಾಗುತ್ತದೆ. ಇಲ್ಲಿ ಕೂಡ ಅರಸು ದೈವ ಇದ್ದು, ವಾಜಿಲ್ಲಾಯ ಹೆಸರಿನಿಂದ ಕರೆಯಲ್ಪಡುತ್ತಿದೆ. ವಾಜಿಲ್ಲಾಯ ದೈವದ ಹೆಸರಿಗೂ ಇಲ್ಲಿ ದೊರೆತ ದಂಬೆಕಲ್ಲಿನ ಚಿತ್ರಕ್ಕೂ ಸಾಮಿಪ್ಯ ಇದೆ.
ದೇಣಿಗೆ ಮೂಲಕ ನಿರ್ಮಾಣ ಹಂತದಲ್ಲಿರುವ ವಾಜಿಲ್ಲಾಯ ದೈವದ ದೈವಸ್ಥಾನ (ETV Bharat) ಊರಲ್ಲಿ ದೈವದ ಬಗ್ಗೆ ಮಾಹಿತಿ ಇಲ್ಲ :ಈ ಊರಿನ ಜನರಿಗೆ ಈ ಹಿಂದೆ ಇಲ್ಲಿ ದೈವಸ್ಥಾನ ಇತ್ತೆಂಬುದರ ಬಗ್ಗೆ ಮಾಹಿತಿ ಇಲ್ಲ. ಈಗ ಸಿಕ್ಕಿರುವ ಜಾಗವು ಬನ ಎಂದೆ ಕರೆಯಲ್ಪಡುತ್ತಿದ್ದು. ಇಲ್ಲಿಗೆ ಯಾರೂ ಬರುತ್ತಿರಲಿಲ್ಲ. ದಟ್ಟ ಪೊದೆಯಿಂದ ಆವೃತವಾಗಿದ್ದ ಈ ಜಾಗದಲ್ಲಿ ಜನಸಂಚಾರವೇ ಇರಲಿಲ್ಲ. ಇಲ್ಲಿಗೆ ಬರಲು ಎಲ್ಲರೂ ಹೆದರುತ್ತಿದ್ದರು. ದೈವಗಳಿಗೆ ಚಾವಡಿ, ಭಂಡಾರ ಮನೆ ಎಂಬುದು ಇರುತ್ತದೆ. ಅದರಂತೆ ಈ ಊರಿನಲ್ಲಿ ಒಂದು ಚಾವಡಿ ಇತ್ತು. ಈ ಚಾವಡಿಗೆ ಊರಿನವರು ಶುಭ ಸಮಾರಂಭಗಳಲ್ಲಿ ಬಂದು ಹೂವು ಇಡುತ್ತಿದ್ದರು. ಆದರೆ ಇದು ಯಾವ ದೈವ, ಇದರ ದೈವಸ್ಥಾನ ಎಲ್ಲಿದೆ ಎಂಬುದು ಯಾರಿಗೂ ಗೊತ್ತೇ ಇರಲಿಲ್ಲ.
ಪ್ರತಿ ಮನೆಗೆ ನಾಗರ ಹಾವಿನ ಭೇಟಿ :ಇಲ್ಲಿರುವ ಪ್ರತಿ ಮನೆಗೆ ನಾಗರಹಾವು ಬರುತ್ತಿತ್ತು. ಇದರಿಂದ ಗ್ರಾಮದ ಜನರು ಭಯಭೀತರಾಗುತ್ತಿದ್ದರು. ಆದರೆ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಂತೆ ಈ ದೈವಸ್ಥಾನದ ಜಾಗದಲ್ಲಿಯೇ ಇರುವ ನಾಗಬನವನ್ನು ಜೀರ್ಣೋದ್ಧಾರ ಮಾಡಿದ ಬಳಿಕ ಇಲ್ಲಿ ನಾಗರಹಾವಿನ ಮನೆ ಭೇಟಿ ನಿಂತಿದೆ ಎನ್ನುತ್ತಾರೆ ಗ್ರಾಮಸ್ಥರು.
300 ವರ್ಷಗಳ ಹಿಂದೆ ನೆಲಸಮವಾಗಿದ್ದ ದೈವಸ್ಥಾನ (ETV Bharat) ಸಣ್ಣ ಕೆಲಸಕ್ಕೂ ಸಿಗುತ್ತಿದೆ ದೊಡ್ಡ ದೇಣಿಗೆ :ಈ ದೈವಸ್ಥಾನವನ್ನು ಆರಂಭದಲ್ಲಿ ಚಿಕ್ಕದಾಗಿ ಕಟ್ಟಲು ನಿರ್ಧರಿಸಲಾಗಿತ್ತು. ಆದರೆ ದೈವಸ್ಥಾನಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ನಿರ್ಧಾರ ಮಾಡಿದಾಗ ಅದಕ್ಕೆ ಅದರ ಖರ್ಚನ್ನು ಭರಿಸಿ ದೊಡ್ಡಮಟ್ಟದಲ್ಲಿ ಮಾಡಲು ದೇಣಿಗೆ ಸಿಗುತ್ತಿತ್ತು. ಅದರಂತೆ ಈ ದೈವಸ್ಥಾನ ಇದೀಗ ದೊಡ್ಡದಾಗಿ ಮೂಡಿಬಂದಿದೆ.
ವಾಜಿಲ್ಲಾಯ ಅರಸು ದೈವ :ಸೀಮೆಯ ಅಧಿಕಾರ ವ್ಯಾಪ್ತಿಯನ್ನು ಒಳಗೊಂಡಿರುವ ದೈವಗಳನ್ನು ಅರಸು ದೈವಗಳೆಂದು ಕರೆಯುತ್ತಾರೆ. ಅರಸನ ಅಧಿಕಾರ ವ್ಯಾಪ್ತಿಯನ್ನು ಈ ದೈವಗಳು ಹೊಂದಿರುತ್ತವೆ. ಸೀಮೆಗಳಲ್ಲಿ ಅರಸು ದೈವಗಳು ಆರಾಧನೆಗೊಳ್ಳುತ್ತವೆ. ವಾಜಿಲ್ಲಾಯ ಸೇರಿದಂತೆ ಉಳ್ಳಾಯ, ಉಳ್ಳಾಕುಲು, ಮುಂಡಾತ್ತಾಯ, ಅತ್ತಾವರ ದೈಯ್ಯಂಗುಳು, ಮುಡದಾಯೆ ಇವೆಲ್ಲವು ಅರಸು ದೈವಗಳಾಗಿ ಆರಾಧಿಸಲ್ಪಡುತ್ತವೆ.
ವಾಜಿಲ್ಲಾಯ ದೈವವು ಜೈನ ಮೂಲದ ರಾಜರಿಂದ ಆರಾಧನೆಗೊಳಪಟ್ಟ ದೈವವೆಂದು ಪ್ರಶ್ನಾ ಚಿಂತನೆಯಲ್ಲಿ ತಿಳಿದುಬಂದಿದೆ. ರಾಜರಿಂದ ಆರಾಧನೆಗೊಳಪಟ್ಟ ದೈವವಾದ್ದರಿಂದ ಈ ದೈವವನ್ನು ಅರಸು ದೈವ ಎಂದೇ ಸಂಭೋಧಿಸಿ ಆರಾಧನೆ ಮಾಡಲಾಗುತ್ತದೆ. ವಾಜಿಲ್ಲಾಯ ಅರಸು ದೈವವೆಂದು ಅಧಿಕೃತವಾಗಿ ಒಪ್ಪಿಕೊಳ್ಳಲು ಸದ್ಯ ದೈವಸ್ಥಾನದ ಜಾಗದಲ್ಲಿ ಉತ್ಖನನ ಮಾಡುವಾಗ ದೊರಕಿದ ಐನೂರು ವರ್ಷಗಳ ಹಿಂದಿನ ದಂಬೆಕಲ್ಲಿನಲ್ಲಿ ಚಿತ್ರಿತವಾಗಿರುವ ಕುದುರೆ ಮೇಲೆ ರಾಜಭಂಗಿಯಲ್ಲಿ ಕುಳಿತ ದೈವದ ಕಲಾಕೃತಿಯೇ ಉತ್ತಮ ಪುರಾವೆ ಎಂದು ಹೇಳಬಹುದಾಗಿದೆ.
ನಿರ್ಮಾಣ ಹಂತದಲ್ಲಿ ದೈವಸ್ಥಾನ. (ETV Bharat) ಈ ಬಗ್ಗೆ ಮಾತನಾಡಿದ ಶ್ರೀ ವಾಜಿಲ್ಲಾಯ- ಧೂಮಾವತಿ ದೈವಸ್ಥಾನ ಟ್ರಸ್ಟ್ ಅಧ್ಯಕ್ಷ ಗಿರಿಧರ್ ಶೆಟ್ಟಿ, "ಈ ಉಮಾ ಮಹೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ವಿಫಲವಾಗುತ್ತಿರುವುದು, ಇಲ್ಲಿನ ಜನರ ಮನೆಗಳಿಗೆ ನಾಗರಹಾವು ಬರುತ್ತಿತ್ತು. ಇದರಿಂದ ಇಲ್ಲಿನ ಜನರು ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನೆ ನಡೆಸಿದ್ದರು. ಈ ವೇಳೆ ಈ ದೈವಸ್ಥಾನದ ಇರುವಿಕೆ ಗೊತ್ತಾಯಿತು. ಗ್ರಾಮಕ್ಕೆ ಧ್ವಜ ಏರಿ ಗ್ರಾಮಕ್ಕೆ ಉತ್ಸವ ಆಗುವ ದೈವಸ್ಥಾನ ಇತ್ತು. ಅದು ನೆಲದಡಿಗೆ ಬಿದ್ದು, ಊರು ಅಭಿವೃದ್ಧಿ ಇಲ್ಲ ಎಂದು ಕಂಡು ಬಂದಿದೆ".
"ಈ ದೈವಸ್ಥಾನ ಮಾಡಿದರೆ ಮಾತ್ರ ಊರಿನ ಏಳಿಗೆ, ದೇವಸ್ಥಾನದ ಜೀರ್ಣೋದ್ಧಾರ ಮಾಡಲು ಸಾಧ್ಯ ಎಂದು ತಿಳಿದುಬಂದಿತ್ತು. ಈ ಊರಿನವರಿಗೆ ದೈವಗಳಿಗೆ ಇರುವ ಚಾವಡಿ ಬಗ್ಗೆ ಮಾತ್ರ ತಿಳಿದಿತ್ತು. ಆದರೆ ದೈವಸ್ಥಾನ ಎಲ್ಲಿ ಇದೆ ಎಂಬುದು ತಿಳಿದಿರಲಿಲ್ಲ. ಈ ದೈವಸ್ಥಾನದ ಸ್ಥಳವನ್ನು ಅಷ್ಟಮಂಗಲದಲ್ಲಿ ತೋರಿಸಿದಂತೆ ನೋಡಿದಾಗ 500 ವರ್ಷಗಳ ಹಿಂದಿನ ಧ್ವಜಸ್ತಂಭದ ದಂಬೆಕಲ್ಲು ಸಿಕ್ಕಿತ್ತು. ದೇವಸ್ಥಾನದ ಫೌಂಡೇಶನ್ ಕುರುಹು ಸಿಕ್ಕಿತ್ತು. ಇಲ್ಲಿ ಪ್ರಶ್ನೆ ಇಟ್ಟು ನೋಡಿದಾಗ ಯಾವ ದೈವ ಎಂದು ತಿಳಿದುಬಂತು".
ನಿರ್ಮಾಣ ಹಂತದಲ್ಲಿ ದೈವಸ್ಥಾನ. (ETV Bharat) "ಪಡುಶೆಡ್ಡೆ, ಪಚ್ಚನಾಡಿ, ಸರಿಪಳ್ಳ, ನೀರುಮಾರ್ಗ, ಅಳಪೆ ಗ್ರಾಮದ ವ್ಯಾಪ್ತಿಗೆ ಈ ದೈವಸ್ಥಾನ ಬರುತ್ತದೆ ಎಂಬುದು ದಾಖಲೆಗಳಿಂದ ತಿಳಿದುಬಂದಿದೆ. ಬಹಳ ವಿಜೃಂಭಣೆಯಿಂದ ನಡೆಯುತ್ತಿದ್ದ ದೈವಸ್ಥಾನ, ಇದರ ಭಂಡಾರ, ಬಂಡಿ , ಧ್ವಜಸ್ತಂಭ ಎಲ್ಲವೂ ಹೋದ ಕಾರಣ ಹೊಸದಾಗಿ ಮಾಡಲಾಗಿದೆ. 30 ಲಕ್ಷದ ಬಂಗಾರ, ದೈವಸ್ಥಾನ, ಗೋಪುರ, ಬಂಡಿಗಳು, ದೈವದ ಚಾವಡಿ ಎಲ್ಲವೂ ಹೊಸತು ಮಾಡಲಾಗಿದೆ. ಈ ಜಾಗವನ್ನು ಲೀಲಾವತಿ ಪದ್ಮನಾಭ ಅವರು ತಮ್ಮ ಹೆಸರಿನಲ್ಲಿದ್ದ ಜಾಗವನ್ನು ದೈವಸ್ಥಾನಕ್ಕೆ ರಿಜಿಸ್ಟ್ರೇಷನ್ ಮಾಡಿಕೊಟ್ಟರು. ಎಲ್ಲರ ಸಹಕಾರದಿಂದ ದೈವಸ್ಥಾನದ ಕೆಲಸ 90 ಶೇಕಡ ಮುಕ್ತಾಯವಾಗಿದೆ. ನಾವು ಯಾವುದೇ ಕೆಲಸ ನಿರ್ಧರಿಸಿದ್ದರೂ ಅದಕ್ಕೆ ದೈವವು ಮುಂದೆ ನಿಂತು ದೊಡ್ಡ ರೀತಿಯಲ್ಲಿ ಮಾಡಿಸುತ್ತಿದೆ" ಎನ್ನುತ್ತಾರೆ ಗಿರಿಧರ್ ಶೆಟ್ಟಿ.
ದೇಣಿಗೆ ಮೂಲಕ ನಿರ್ಮಾಣ ಹಂತದಲ್ಲಿರುವ ವಾಜಿಲ್ಲಾಯ ದೈವದ ದೈವಸ್ಥಾನ (ETV Bharat) ಗ್ರಾಮಸ್ಥ ಕಿಶೋರ್ ಮಾತನಾಡಿ, "ಈ ಊರಿನವರೇ ಆಗಿದ್ದರೂ ಈ ದೈವಸ್ಥಾನದ ಬಗ್ಗೆ ಕನಿಷ್ಠ ಮಾಹಿತಿಯು ನಮಗೆ ಇರಲಿಲ್ಲ. ಇದೊಂದು ನಾಗಬನ, ಅಲ್ಲಿಗೆ ಹೋಗಬಾರದು ಎಂದು ಹೇಳುತ್ತಿದ್ದರು. ರಾಮಣ್ಣ ಶೆಟ್ಟಿ ಎಂಬವರ ಮನೆಯಲ್ಲಿದ್ದ ಚಾವಡಿಗೆ ಇಲ್ಲಿನ ಜನರು ಶುಭಸಂದರ್ಭದಲ್ಲಿ ಹೂವು ಹಾಕಿ ಬರುತ್ತಿದ್ದರು. ಇನ್ನೊಂದು ಕಡೆ ಇರುವ ಚಾವಡಿಯಲ್ಲಿರುವ ಮನೆಯವರಿಗೂ ಈ ದೈವಸ್ಥಾನದ ಬಗ್ಗೆ ಮಾಹಿತಿ ಇರಲಿಲ್ಲ. ಪ್ರಶ್ನಾ ಚಿಂತನೆಯಲ್ಲಿ ಇದೊಂದು700 ವರ್ಷಗಳ ಇತಿಹಾಸವಿರುವ ಈ ದೈವಸ್ಥಾನದಲ್ಲಿ ಜೈನ ಅರಸರು ಬಂದು ನೇಮ ನಡೆಸುವ ಪ್ರತೀತಿ ಇತ್ತು. ರಾಜರಿಗೆ ಸಂಬಂಧ ಪಟ್ಟ ದೈವ ಎಂದು ತಿಳಿದುಬಂದಿದೆ. ಈ ದೈವಸ್ಥಾನಕ್ಕೆ ಸಂಬಂಧಿಸಿದಂತೆ ನಾಗಬನವು ಇರುವುದು ತಿಳಿದುಬಂದಿತ್ತು. ನಾಗರಹಾವು ಪ್ರತಿ ಮನೆಗೂ ಭೇಟಿ ನೀಡುತ್ತಿತ್ತು. ನಾಗಬನದ ಜೀರ್ಣೋದ್ಧಾರ ಬಳಿಕ ನಾಗರ ಹಾವು ಮನೆ ಮನೆಗೆ ಬರುವುದು ನಿಂತಿದೆ" ಎಂದು ತಿಳಿಸಿದರು.
ಟ್ರಸ್ಟ್ ಕಾರ್ಯಾಧ್ಯಕ್ಷ ಆನಂದ್ ಸರಿಪಳ್ಳ ಮಾತನಾಡಿ, "ದೇವಸ್ಥಾನದಲ್ಲಿ ಪ್ರಶ್ನಾ ಚಿಂತನೆ ಮಾಡಿದ ಬಳಿಕ ದೈವದ ಬಗ್ಗೆ ತಿಳಿದುಕೊಳ್ಳಲು ಈ ಸ್ಥಳದಲ್ಲಿಯೇ ಪ್ರಶ್ನಾ ಚಿಂತನೆ ಮಾಡಲಾಗಿತ್ತು. ಈ ಜಾಗ ನಾಗಬನದ ತರಹ ಇತ್ತು. ಆ ಸ್ಥಳ ಸಮತಟ್ಟು ಮಾಡಿ, ಪೊದೆಯ ಮರ ಗಿಡ ಕಡಿದಾಗ ಪುರಾತನ ದೇವಸ್ಥಾನ ಇದ್ದ ಕುರುಹುಗಳು ದೊರೆತವು. ಕುದುರೆ ರೂಪದ ವಾಜಿಲ್ಲಾಯ ಮೂಲ ರೂಪದ ದಂಬೆ ಕಲ್ಲು ಇಲ್ಲಿ ದೊರೆತಿತ್ತು. 300 ವರ್ಷ ಇಲ್ಲಿ ನೇಮೋತ್ಸವ ನಡೆದಿಲ್ಲ ಎಂಬುದು ತಿಳಿದುಬಂತು. ಇಲ್ಲಿ ದೈವಸ್ಥಾನ ನಡೆಸಲು ಲೀಲಾವತಿ ಅವರು ಜಾಗ ಬಿಟ್ಟುಕೊಟ್ಟರು. ರಸ್ತೆಗಾಗಿ ಮಿನೆಜಸ್ ಎಂಬ ಕ್ರಿಶ್ಚಿಯನ್ ಸಮುದಾಯದ ವ್ಯಕ್ತಿ 20 ಸೆಂಟ್ಸ್ ಜಾಗ ಬಿಟ್ಟುಕೊಟ್ಟರು. ಅದೇ ರೀತಿ ಸಾಕಷ್ಟು ಮಂದಿ ಇಲ್ಲಿ ದೈವಸ್ಥಾನ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ದೈವಸ್ಥಾನದ ಕುರುಹು (ETV Bharat) ಒಟ್ಟಿನಲ್ಲಿ ಒಂದು ವರ್ಷದ ಹಿಂದೆ (2023 ನವೆಂಬರ್ 9) ನಡೆದ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಂತೆ 300 ವರ್ಷಗಳ ಹಿಂದೆ ನೆಲಸಮವಾಗಿದ್ದ ದೈವಸ್ಥಾನ ವಾಜಿಲ್ಲಾಯನ ಮಹಿಮೆಯಿಂದ ಒಂದೇ ವರ್ಷದಲ್ಲಿ ನಿರ್ಮಾಣವಾಗುತ್ತಿದೆ.
ಇದನ್ನೂ ಓದಿ:ಬಾನಂಗಳದಲ್ಲಿ ಹಾರುವ ಕುದುರೆ, ಹುಲಿ, ಚಿರತೆ: ಮಂಗಳೂರಿನ ಗಾಳಿಪಟ ಉತ್ಸವ ಕಣ್ಣಿಗೆ ಬಲು ಮೋಜು