ಕರ್ನಾಟಕ

karnataka

ETV Bharat / state

ಹಾವೇರಿ : ಪ್ಲಾಸ್ಟಿಕ್ ಮಾಲೆಗಳ ಪೈಪೋಟಿ ನಡುವೆಯೂ ಖ್ಯಾತಿ ಉಳಿಸಿಕೊಂಡ ನೈಜ ಏಲಕ್ಕಿ ಹಾರ - CARDAMOM GARLAND

ಹಾವೇರಿ ಜಿಲ್ಲೆಯಲ್ಲಿ ಪ್ಲಾಸ್ಟಿಕ್​ ಏಲಕ್ಕಿ ಮಾಲೆಗಳು ಮಾರುಕಟ್ಟೆಗೆ ಬಂದಿದ್ದರೂ, ಗ್ರಾಹಕರು ನೈಜ ಏಲಕ್ಕಿ ಮಾಲೆಯ ಖರೀದಿ ಆಸಕ್ತಿ ಕಳೆದುಕೊಂಡಿಲ್ಲ. ಈ ಕುರಿತು ಹಾವೇರಿ ಪ್ರತಿನಿಧಿ ಶಿವಕುಮಾರ್​ ಹುಬ್ಬಳ್ಳಿ ಅವರು ಮಾಡಿರುವ ವಿಶೇಷ ವರದಿ ಇಲ್ಲಿದೆ..

real-cardamom-garland
ಏಲಕ್ಕಿ ಹಾರ ತಯಾರಕರು (ETV Bharat)

By ETV Bharat Karnataka Team

Published : 6 hours ago

Updated : 5 hours ago

ಹಾವೇರಿ :ಏಲಕ್ಕಿ ಕಂಪಿನನಗರಿ ಎಂಬ ಖ್ಯಾತಿಯಿರುವ ಜಿಲ್ಲೆಗೆಪ್ಲಾಸ್ಟಿಕ್ ಏಲಕ್ಕಿಗಳ ಮಾಲೆಗಳು ಲಗ್ಗೆ ಇಟ್ಟಿವೆ. ಹೀಗಿದ್ದರೂ, ಇಲ್ಲಿನ ಗ್ರಾಹಕರು ಎಂದಿನಂತೆ ನೈಜ ಏಲಕ್ಕಿ ಮಾಲೆಗಳ ಖರೀದಿಗೆ ಮುಂದಾಗುತ್ತಿದ್ದಾರೆ.

ಹೆಸರಿನ ಇತಿಹಾಸ : ಇಲ್ಲಿನ ವ್ಯಾಪಾರಿಗಳು ಕಾಸರಗೋಡು ಸೇರಿದಂತೆ ಕೇರಳದಿಂದ ಏಲಕ್ಕಿ ಮೊಗ್ಗುಗಳನ್ನು ತಂದು ಇಲ್ಲಿ ಉಬ್ಬಿ ಹಾಕಿ ಅರಳಿಸುತ್ತಿದ್ದರು. ಆ ರೀತಿ ಸಂಸ್ಕರಿಸಿದ ಏಲಕ್ಕಿಗಳನ್ನ ಹಾವೇರಿಯ ಬೀದಿ ಬೀದಿಗಳಲ್ಲಿ ಒಣಗಲು ಹಾಕುತ್ತಿದ್ದರು. ಈ ದಾರಿಗಳಲ್ಲಿ ಓಡಾಡುವವರಿಗೆಲ್ಲಾ ಏಲಕ್ಕಿ ಕಂಪು ಹರಡುತ್ತಿತ್ತು. ಹೀಗಾಗಿ, ಹಾವೇರಿಗೆ ಏಲಕ್ಕಿ ಕಂಪಿನ ನಗರಿ ಎಂಬ ಹೆಸರು ಬಂದಿದೆ.

ಕಲಾವಿದ ಉಸ್ಮಾನಸಾಬ್ ಪಟವೇಗಾರ ಮಾತನಾಡಿದರು (ETV Bharat)

ಒಂದು ಕಾಲದಲ್ಲಿ ಏಲಕ್ಕಿ ವ್ಯಾಪಾರಿಗಳು ಅಧಿಕವಾಗಿದ್ದ ನಗರದಲ್ಲಿ ಇದೀಗ ಏಲಕ್ಕಿ ವ್ಯಾಪಾರಿಗಳ ಸಂಖ್ಯೆ ಬೆರಳೆಣಿಕೆ ಹಂತಕ್ಕೆ ತಲುಪಿದೆ. ಬೀದಿಗಳಲ್ಲಿ ಏಲಕ್ಕಿ ಒಣಗಲು ಹಾಕುತ್ತಿದ್ದ ಕಾಲದಲ್ಲಿ ಏಲಕ್ಕಿ ನೋಡಿದ ಹಲವು ಹಾವೇರಿ ಕಲಾವಿದರು ಏಲಕ್ಕಿಯಿಂದ ಮಾಲೆ ತಯಾರಿಸಲು ಆರಂಭಿಸಿದ್ದರು. ಈ ರೀತಿ ತಯಾರಾದ ಏಲಕ್ಕಿಮಾಲೆಗಳು ದೇಶ-ವಿದೇಶಗಳ ಗಣ್ಯರ ಕೊರಳೇರಿದ್ದು ಈಗ ಇತಿಹಾಸ. ಈ ವಿಶಿಷ್ಟ ಮಾಲೆಯಿಂದ ಹಾವೇರಿ ಪ್ರಸಿದ್ಧಿ ಪಡೆದಿದ್ದು, ಈ ರೀತಿ ಮಾಲೆ ತಯಾರಿಸುವ ಕಲಾವಿದರಿಗೆ ರಾಜ್ಯೋತ್ಸವ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.

ಏಲಕ್ಕಿ ಹಾರಗಳು (ETV Bharat)

ಆರಂಭದಲ್ಲಿ ಏಲಕ್ಕಿ ದಾರದಿಂದ ತಯಾರಾಗುತ್ತಿದ್ದ ಏಲಕ್ಕಿ ಮಾಲೆಗಳಿಗೆ ನಂತರ ಉಲ್ಲನ್ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳು ಸೇರ್ಪಡೆಯಾದವು. ಏಲಕ್ಕಿ ಮಾಲೆಗಳು ಇದರಿಂದ ಮತ್ತಷ್ಟು ಅಂದವಾಗಲಾರಂಭಿಸಿದವು. ಆದರೆ ಇದಕ್ಕೆ ಹೊಸದಾಗಿ ಏಲಕ್ಕಿ ಹೋಲುವ ಪ್ಲಾಸ್ಟಿಕ್ ಏಲಕ್ಕಿಗಳು ಇದೀಗ ಮಾರುಕಟ್ಟೆಗೆ ಆಗಮಿಸಿವೆ.

ನೂರಾರು ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವ ಪ್ಲಾಸ್ಟಿಕ್​ ಮಾಲೆಗಳು : ನೈಜ ಏಲಕ್ಕಿಯಿಂದ ತಯಾರಿಸಿದ ಮಾಲೆಗಳಿಗೆ ಮೂನ್ನೂರು ರೂಪಾಯಿಯಾದರೆ, ಈ ಪ್ಲಾಸ್ಟಿಕ್​ನಿಂದ ತಯಾರಿಸಿದ ಮಾಲೆಗಳು ನೂರು ರೂಪಾಯಿಗೆ ಸಿಗುತ್ತವೆ. ಆರಂಭದಲ್ಲಿ ಸ್ವಲ್ಪ ವಿರೋಧವಿದ್ದರೂ ಬೇಡಿಕೆ ಅಧಿಕವಾಗಿದ್ದರಿಂದ ಏಲಕ್ಕಿಮಾಲೆ ತಯಾರಿಸುವ ಕಲಾವಿದರ ಕುಟುಂಬಗಳೇ ಇದೀಗ ಪ್ಲಾಸ್ಟಿಕ್ ಏಲಕ್ಕಿ ಮಾಲೆಗಳನ್ನು ತಯಾರಿಸುತ್ತವೆ. ನೈಜ ಏಲಕ್ಕಿ ಮಾಲೆಗಳು 10 ರಿಂದ 20 ಮಾರಿದರೆ, ಪ್ಲಾಸ್ಟಿಕ್ ಏಲಕ್ಕಿ ಮಾಲೆಗಳು ನೂರಾರು ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ.

ಏಲಕ್ಕಿ ಹಾರಗಳು (ETV Bharat)

ಈ ರೀತಿಯ ಮಾಲೆಗಳು ಶ್ರಮ ಕಡಿಮೆ ಕೇಳುತ್ತವೆ ಮತ್ತು ಕಡಿಮೆ ವೇಳೆಯಲ್ಲಿ ಅತ್ಯದಿಕ ಮಾಲೆಗಳನ್ನ ತಯಾರಿಸಬಹುದು. ಕಡಿಮೆ ದರ, ಕಡಿಮೆ ಅವಧಿಯಲ್ಲಿ ತಯಾರಾಗುವ ಈ ಮಾಲೆಗಳು ಕ್ರಮೇಣ ನೈಜ ಏಲಕ್ಕಿ ಮಾಲೆಗಳ ಸ್ಥಳ ಆಕ್ರಮಿಸಲಾರಂಭಿಸಿವೆ. ಈ ಮಧ್ಯ ನೈಜ ಏಲಕ್ಕಿದರ ಏರಿಕೆಯಾಗಿದ್ದು, ಕಲಾವಿದರಿಗೆ ಆರ್ಥಿಕ ಲಾಭ ಕಡಿಮೆ ಮಾಡಿದೆ.

ಪ್ಲಾಸ್ಟಿಕ್​ ಮಾಲೆಗೆ ಹೆಚ್ಚಿನ ಮೌಲ್ಯ ಇರುವುದಿಲ್ಲ : ಈ ಬಗ್ಗೆ ಕಲಾವಿದ ಉಸ್ಮಾನಸಾಬ್ ಪಟವೇಗಾರ ಅವರು ಮಾತನಾಡಿ, ಪ್ಲಾಸ್ಟಿಕ್​ ಮಾಲೆಗೆ ಹೆಚ್ಚಿನ ಮೌಲ್ಯ ಇರುವುದಿಲ್ಲ, ಇದಕ್ಕೂ ನೈಜ ಏಲಕ್ಕಿ ಮಾಲೆಗೂ ವ್ಯತ್ಯಾಸವಿದೆ. ಆ ಮಾಲೆ ಎಲ್ಲ ಕಡೆ ಸಿಗುತ್ತವೆ. ಆದರೆ ಏಲಕ್ಕಿ ಮಾಲೆ ಹಾವೇರಿ ಬಿಟ್ಟು ಇಡೀ ಭಾರತದಲ್ಲಿ ಎಲ್ಲಿಯೂ ಸಿಗಲ್ಲ. ಶಾಲಾ ಕಾರ್ಯಕ್ರಮಗಳಿಗೆ ಪ್ಲಾಸ್ಟಿಕ್ ಮಾಲೆ ಕೊಂಡುಕೊಳ್ಳುತ್ತಾರೆ. ಹೀಗಾಗಿ ನಾವು ಮಾರಾಟ ಮಾಡುತ್ತಿದ್ದೇವೆ ಎಂದಿದ್ದಾರೆ.

ಏಲಕ್ಕಿ ಹಾರಗಳು (ETV Bharat)

ಸಭೆ -ಸಮಾರಂಭದಲ್ಲಿ ಮಾತ್ರ ಪ್ಲಾಸ್ಟಿಕ್​ ಮಾಲೆ ಖರೀದಿ: ಈ ಕುರಿತು ಕಲಾವಿದ ಹೈದರಲಿ ಪಟವೇಗಾರ ಅವರು ಮಾತನಾಡಿ, 15 ದಿನದ ಹಿಂದೆ ಕೆಜಿ ಏಲಕ್ಕಿಗೆ ಎರಡೂವರೆ ಸಾವಿರ ರೂಪಾಯಿ ಇತ್ತು. ಈಗ ಮೂರುವರೆಯಿಂದ ನಾಲ್ಕು ಸಾವಿರ ರೂಪಾಯಿವರೆಗೆ ತಲುಪಿದೆ. ಆದರೂ ಜನರು ಏಲಕ್ಕಿ ಮಾಲೆಯನ್ನೇ ಕೊಂಡುಕೊಳ್ಳುತ್ತಾರೆ. ಸಭೆ ಸಮಾರಂಭದಲ್ಲಿ ಮಾತ್ರ ಪ್ಲಾಸ್ಟಿಕ್​ ಮಾಲೆಯನ್ನ ಖರೀದಿಸುತ್ತಾರೆ. ಆದರೆ, ಇಲ್ಲಿನ ಜನ ನೈಜ ಏಲಕ್ಕಿ ಮಾಲೆಯನ್ನೇ ಕೊಂಡುಕೊಳ್ಳುತ್ತಾರೆ ಎಂದು ಹೇಳಿದರು.

ನೈಜ ಏಲಕ್ಕಿ ಮಾಲೆಗಳ ಜೊತೆಗೆ ಪ್ಲಾಸ್ಟಿಕ್ ಏಲಕ್ಕಿಗಳ ಮಾಲೆಗಳನ್ನ ಸಹ ಈ ಕುಟುಂಬಗಳು ತಯಾರಿಸುತ್ತಿವೆ. ಕಾಲಕ್ಕೆ ತಕ್ಕಂತೆ ಗ್ರಾಹಕರ ಬೇಡಿಕೆಗೆ ತಕ್ಕಂತೆ ಕಲಾವಿದರ ಕುಟುಂಬಗಳು ಸಹ ಬದಲಾಗಿವೆ. ಆದರೂ ಸಹ ಸಂಪ್ರದಾಯಸ್ಥ ಕುಟುಂಬಗಳು ನೈಜ ಏಲಕ್ಕಿ ಮಾಲೆಗಳನ್ನ ಖರೀದಿಸುತ್ತಿದ್ದಾರೆ. ಇದರಿಂದ ನಮ್ಮ ಕಲೆಗೆ ಏನೂ ತೊಂದರೆಯಾಗುವುದಿಲ್ಲ ಎನ್ನುವ ಸಮಾಧಾನ ಈ ಕಲಾವಿದರ ಕುಟುಂಬಗಳಿಗಿದೆ.

ಇದನ್ನೂ ಓದಿ :ಹಾವೇರಿ: ಗಣಪನ ಕೊರಳೇರಲು ಸಿದ್ಧಗೊಳ್ತಿವೆ ಬಗೆಬಗೆ ಏಲಕ್ಕಿ ಮಾಲೆ - ಈಟಿವಿ ಭಾರತ ಕನ್ನಡ

Last Updated : 5 hours ago

ABOUT THE AUTHOR

...view details