ಹಾವೇರಿ: 'ಕರ್ನಾಟಕದ ವಿರುದ್ಧ ಇರುವುದೇ ಬಿಜೆಪಿ ಡಿಎನ್ಎ' ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರದ ಅಜೆಂಡಾ ರಾಜ್ಯದ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿದೆ. ಆ ಸರ್ಕಾರ ಕನ್ನಡಿಗರಿಗೆ ಅನ್ಯಾಯ ಎಸಗಿದೆ. ರಾಜ್ಯ ಸರ್ಕಾರದ ಅಧಿಕಾರವನ್ನು ಮೊಟಕುಗೊಳಿಸಲು ಹೊರಟಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಕರ್ನಾಟಕದ ನೆಲದ ಮೇಲೆ ಕಾಲಿಡುವ ನೈತಿಕತೆ ಇಲ್ಲ. ಶಾ ರಾಜ್ಯಕ್ಕೆ ಬಂದರೆ ಗೋ ಬ್ಯಾಕ್ ಎನ್ನುವ ವಾತಾವರಣ ನಿರ್ಮಾಣವಾಗಿದೆ ಎಂದು ಟೀಕಿಸಿದರು.
ಮೋದಿ ಸರ್ಕಾರಕ್ಕೆ ಕರ್ನಾಟಕದ ಪವಿತ್ರ ಭೂಮಿಗೆ ನ್ಯಾಯ ಕೊಡಲು ಆಗಿಲ್ಲ. ರಾಜ್ಯ ಸರ್ಕಾರ ಸೆಪ್ಟೆಂಬರ್ ತಿಂಗಳಲ್ಲಿ ಬರಗಾಲ ಘೋಷಿಸಿದೆ. ನಮ್ಮ ಮಂತ್ರಿಗಳು ಶಾ ಅವರನ್ನು ಭೇಟಿಯಾದರು. ಕೃಷಿ ಸಚಿವರು, ಕಂದಾಯ ಸಚಿವರು ಮತ್ತು ಪ್ರಿಯಾಂಕ್ ಖರ್ಗೆ ಅವರು ಅಮಿತ್ ಶಾ ಮತ್ತು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ, ಬರ ಪರಿಹಾರದ ಹಣಕ್ಕಾಗಿ ಮನವಿ ಸಲ್ಲಿಸಿದರು.
ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಬರ ಪರಿಹಾರದ ಹಣಕ್ಕೆ ಬೇಡಿಕೆ ಸಲ್ಲಿಸಿದರು.18,172 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲು ಮನವಿ ಮಾಡಿದರು. ಕರ್ನಾಟಕದ ತೆರಿಗೆ ಹಣವನ್ನೂ ಬಿಡುಗಡೆ ಮಾಡಲಿಲ್ಲ. ಪ್ರಕೃತಿ ವಿಕೋಪ ಸಮಯದಲ್ಲಿ ಹಣ ಬಿಡುಗಡೆ ಮಾಡಬೇಕು. ಆದರೆ ಆ ಹಣವನ್ನೂ ಬಿಡುಗಡೆ ಮಾಡಲಿಲ್ಲ ಎಂದು ಆರೋಪಗಳ ಮಳೆಯನ್ನೇ ಹರಿಸಿದರು.
ಕರ್ನಾಟಕದ ರೈತರ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ಬರ ಪರಿಹಾರದ ಹಣಕ್ಕಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕಾಯಿತು. ರಸ್ತೆ, ಕೆರೆ, ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಮೋದಿ ಸರ್ಕಾರ ಹಣ ಕೊಡಲಿಲ್ಲ. ಹಾಗಾಗಿ, ರಾಜ್ಯದ ಜನರು ಬಿಜೆಪಿಗೆ ಏಕೆ ಮತ ಹಾಕಬೇಕು? ಎಂದು ಪ್ರಶ್ನಿಸಿದರು.