ಶಾಸಕ ಹೆಬ್ಬಾರ್ ಕಾಂಗ್ರೆಸ್ಗೆ ಬಂದರೆ ಸ್ವಾಗತ: ಸಿಎಂ ಸಿದ್ಧರಾಮಯ್ಯ ಶಿರಸಿ:ಕಾಂಗ್ರೆಸ್ ಸೇರ್ಪಡೆ ಬಗ್ಗೆ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಚರ್ಚೆ ಮಾಡಿಲ್ಲ. ಆದರೆ, ಕಾಂಗ್ರೆಸ್ ಸಿದ್ದಾಂತ ಒಪ್ಪಿ ಪಕ್ಷಕ್ಕೆ ಬಂದರೆ ಅವರಿಗೆ ಸ್ವಾಗತ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಹೆಬ್ಬಾರ್ ಕಾಂಗ್ರೆಸ್ನಲ್ಲಿದ್ದರು. ನಂತರ ಬಿಜೆಪಿಗೆ ಹೋಗಿದ್ದಾರೆ. ಈಗ ಬಿಜೆಪಿಯಲ್ಲಿ ಬೇಸರ ಆಗಿದೆ ಎನ್ನುತ್ತಿದ್ದಾರೆ. ಕಾರಣ ಏನಾಗುತ್ತದೆ ಎಂದು ನೋಡಬೇಕು ಎಂದರು.
ಬಳಿಕ ಅನಂತ್ ಕುಮಾರ್ ಹೆಗಡೆ ವಿಚಾರವಾಗಿ ಮಾತನಾಡಿದ ಅವರು, ಹೆಗಡೆಗೆ ಸಂಸ್ಕೃತಿ ಇಲ್ಲ. ಅವರು ಹಿಂದುತ್ವ, ಮನುವಾದಿಗಳು. ನನ್ನನ್ನ ಟಾರ್ಗೆಟ್ ಮಾಡಿದಾಗ ಹಿಂದುತ್ವ ಬರುತ್ತದೆ. ನಾಲ್ಕು ವರ್ಷದಿಂದ ಅನಂತ್ ಕುಮಾರ್ ಎಲ್ಲಿ ಹೋಗಿದ್ದರು? ಅಂತವರನ್ನ ನೀವೇ ಆಯ್ಕೆ ಮಾಡಿದ್ದೀರಿ. ಅಭಿವೃದ್ಧಿ ಕೆಲಸ ಜನರ ಕೆಲಸ ಮಾಡದ ವ್ಯಕ್ತಿ ಎಂದರೆ ಅನಂತಕುಮಾರ್ ಹೆಗಡೆ ಎಂದು ಕಿಡಿಕಾರಿದರು.
ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದಾರೆ. ಅದಕ್ಕೆ ಬಿಜೆಪಿ ಏನು ಹೇಳುತ್ತದೆ? ಎಂದು ಪ್ರಶ್ನಿಸಿದ ಅವರು, ನಾವು ಈಗಾಗಲೇ ವಿಧಾನಸೌಧದಲ್ಲಿ ಘೋಷಣೆ ಕೂಗಿದವರನ್ನು ಬಂಧಿಸಿದ್ದೇವೆ. ಆದರೆ, ಬಿಜೆಪಿ ಈ ಹಿಂದೆ ಪ್ರಕರಣವನ್ನೇ ಮುಗಿಸಿತ್ತು. ಈಗ ಹೇಳಿ ಯಾರು ದೇಶದ್ರೋಹಿಗಳು ಎಂದು ತಿರುಗೇಟು ನೀಡಿದರು.
ಬಳಿಕ ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪೊಲೀಸರು, ಸಿಸಿಬಿ, ಎನ್ಐಎ ತನಿಖೆ ನಡೆಸುತ್ತಿದೆ. ಸದ್ಯ ಐವರ ಬಂಧನ ಎಂದು ಮಾಧ್ಯಮದಲ್ಲಿ ನೋಡಿದ್ದೇನೆ. ಈ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಯಾರನ್ನು ಬಂಧಿಸಲಾಗಿದೆ ಎಂದು ತಿಳಿದಿಲ್ಲ ಎಂದರು. ಈ ಸಂದರ್ಭದಲ್ಲಿ ಸಚಿವ ಮಂಕಾಳು ವೈದ್ಯ, ಶಾಸಕರಾದ ಆರ್.ವಿ.ದೇಶಪಾಂಡೆ, ಸತೀಶ ಸೈಲ್, ಭೀಮಣ್ಣ ನಾಯ್ಕ ಇದ್ದರು.
ಇದನ್ನೂ ಓದಿ:ಬಾಂಬ್ ಸ್ಫೋಟ ನಡೆದ ಬೆಂಗಳೂರಿನ ರಾಮೇಶ್ವರಂ ಕೆಫೆಗೆ ಎನ್ಐಎ ಅಧಿಕಾರಿಗಳ ಭೇಟಿ, ಪರಿಶೀಲನೆ