ಬೆಂಗಳೂರು: "ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಸಿಗುವುದಿಲ್ಲ ಎಂದು ಗೊತ್ತಿತ್ತು. ಏಕೆಂದರೆ ಸಂಸತ್ ಭವನದ ಒಳಗೆ ಗ್ಯಾಸ್ ಬಾಂಬ್ ಹಾಕಿದವರಿಗೆ ಇವರೇ ಪಾಸ್ ನೀಡಿದ್ದರು" ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, "ನಮ್ಮ ಸರ್ಕಾರದ ವಿರುದ್ಧ ವಿರೋಧ ಮಾಡ್ಬೇಕು ಅಂತಾನೆ ಪ್ರತಾಪ್ ಸಿಂಹ ವಿರೋಧ ಮಾಡುತ್ತಿದ್ದರು. ತಾಲಿಬಾನ್ ಸರ್ಕಾರ ಎಂದು ಸುಮ್ಮನೆ ಟೀಕಿಸುತ್ತಿದ್ದರು. ಅವರನ್ನು ಯಾರೂ ಒಪ್ಪಿಲ್ಲ" ಎಂದರು. "ಮೈಸೂರಿನ ಬಿಜೆಪಿಯಲ್ಲಿ 20-30 ವರ್ಷ ಕೆಲಸ ಮಾಡಿದ ಹಲವಾರು ನಾಯಕರು ಇದ್ದರು. ಆದರೆ ರಾಜ ಮನೆತನದವರಿಗೆ ಕರೆದು ಟಿಕೆಟ್ ನೀಡಿದ್ದಾರೆ. ಇದರಿಂದ ಬಿಜೆಪಿ ದಿವಾಳಿಯಾಗಿದೆ ಅನ್ನೋದು ಗೊತ್ತಾಗುತ್ತದೆ"ಎಂದು ಹೇಳಿದರು. "ಡಿ.ಕೆ.ಸುರೇಶ್ ಅವರು ಸಮರ್ಥರಿದ್ದಾರೆ. ನಾನು ರಾಮನಗರ ಜಿಲ್ಲಾ ಮಂತ್ರಿಯಾಗಿರುವುದರಿಂದ ಪ್ರಚಾರಕ್ಕೆ ಹೋಗುತ್ತೇನೆ. ಅದೇ ರೀತಿ, ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಪ್ರಕಟಿಸಿದ ನಂತರ ಅಲ್ಲೂ ಪ್ರಚಾರ ಮಾಡುತ್ತೇನೆ" ಎಂದರು.
ಸಚಿವ ಸಂತೋಷ್ ಲಾಡ್ ವ್ಯಂಗ್ಯ: "ದುರದೃಷ್ಟವಶಾತ್ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಸಿಕ್ಕಿಲ್ಲ. ಅವರು ನನಗೂ ಒಳ್ಳೆಯ ಫ್ರೆಂಡ್, ನನಗೂ ಬೇಜಾರಿದೆ" ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ವ್ಯಂಗ್ಯವಾಡಿದರು.
"I wish him good luck ಎಂದ ಲಾಡ್, ಪ್ರತಾಪ್ ಸಿಂಹ ಅವರಿಗೆ ಈ ರೀತಿ ಆಗಬಾರದಿತ್ತು. ಆದರೆ, ರಾಜಕಾರಣದಲ್ಲಿ ಈ ರೀತಿ ಆಗುತ್ತಿರುತ್ತದೆ. ಸಿದ್ದರಾಮಯ್ಯ ಅವರಿಗೆ ಬೈದರೆ ಶಹಬಾಶ್ ಗಿರಿ ಸಿಗುತ್ತದೆಂದು ಅಂದುಕೊಂಡಿದ್ರೋ ಏನೋ? ಅವರ ವಿಚಾರದಲ್ಲಿ ನನಗೆ ತುಂಬಾ ದುಃಖ ಇದೆ. ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಕಳೆದುಕೊಳ್ಳಲಿದೆ" ಎಂದು ಹೇಳಿದರು.
ಬೈರತಿ ಸುರೇಶ್ ವ್ಯಂಗ್ಯ: "ಸಂಸದ ಪ್ರತಾಪ್ ಸಿಂಹ ಅವರಿಗೆ ಇಂತಹ ದಯನೀಯ ಸ್ಥಿತಿ ಬರಬಾರದಿತ್ತು. ಚಾಮುಂಡೇಶ್ವರಿ ತಾಯಿ ಇನ್ನು ಮುಂದೆ ಅವರಿಗೆ ಸದ್ಬುದ್ಧಿ ಕೊಡಲಿ. ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಇಲ್ಲ ಅಂತಿದ್ರು. ಈಗ ಅವರ ಪರಿಸ್ಥಿತಿ ನೋಡಿದ್ರೆ ಅಯ್ಯೋ ಅನ್ನಿಸುತ್ತದೆ. ಅಧಿಕಾರ ಇದ್ದಾಗ ಹಿಗ್ಗಬಾರದೆಂದು ಪ್ರತಾಪ್ ಸಿಂಹ ಅವರನ್ನು ನೋಡಿ ಕಲಿಯಬೇಕು" ಎಂದು ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ವ್ಯಂಗ್ಯವಾಡಿದ್ದಾರೆ.