ರಂಜಾನ್ ಮಾಸ: ಕುಂದಾನಗರಿ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಸಂಭ್ರಮ ಬೆಳಗಾವಿ: ಮುಸ್ಲಿಂ ಸಮುದಾಯದ ಪವಿತ್ರ ಹಬ್ಬ ರಂಜಾನ್ ಸಮೀಪಿಸುತ್ತಿದ್ದು, ಕುಂದಾನಗರಿ ಬೆಳಗಾವಿ ಹಬ್ಬ ಆಚರಣೆಗೆ ಸಜ್ಜಾಗುತ್ತಿದೆ. ರಂಜಾನ್ ಮಾಸದ ಪ್ರಯುಕ್ತ ಗಡಿನಾಡು ಮಾರುಕಟ್ಟೆಗಳು ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿವೆ. ಕಣ್ಣು ಹಾಯಿಸಿದಲ್ಲೆಲ್ಲಾ ಖರೀದಿಗೆ ಬಂದ ಜನ, ಬಾಯಲ್ಲಿ ನೀರು ತರಿಸುವಂತಹ ವಿವಿಧ ಬಗೆಯ ಖಾದ್ಯಗಳು ಒಂದೆಡೆಯಾದರೆ, ಹೊಸ ಬಟ್ಟೆ- ಬರೆ, ಅಲಂಕಾರಿಕ ವಸ್ತುಗಳ ಖರೀದಿಗೆ ಜನ ಮುಗಿಬೀಳುತ್ತಿರುವ ದೃಶ್ಯಗಳು ಬೆಳಗಾವಿಯಲ್ಲಿ ಕಂಡು ಬರುತ್ತಿವೆ.
ಹೌದು, ಬೆಳಗಾವಿಯ ದರ್ಬಾರ್ ಗಲ್ಲಿ ಮತ್ತು ಖಡೇ ಬಜಾರ್ನಲ್ಲಿ ಮುಸ್ಲಿಂ ಧರ್ಮಿಯರ ಪವಿತ್ರ ರಂಜಾನ್ ಮಾಸದ ಸಂಭ್ರಮ ಕಳೆಗಟ್ಟಿದೆ. ಕಳೆದ 20 ದಿನಗಳಿಂದ ಭರ್ಜರಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಮಧ್ಯಾಹ್ನ ಶುರುವಾಗುವ ವ್ಯಾಪಾರ ಬೆಳಗಿನ ಜಾವದವರೆಗೂ ನಡೆಯೋದು ಇಲ್ಲಿನ ವಿಶೇಷತೆ.
ರಂಜಾನ್ ಮಾಸ: ಕುಂದಾನಗರಿ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಸಂಭ್ರಮ ಸಾಮರಸ್ಯ ಮತ್ತು ಭಾವೈಕ್ಯತೆಗೆ ಹೆಸರುವಾಸಿಯಾಗಿರುವ ಬೆಳಗಾವಿಯಲ್ಲಿ ಎಲ್ಲ ಹಬ್ಬಗಳನ್ನು ವಿಶಿಷ್ಟ ಮತ್ತು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈಗ ರಂಜಾನ್ ಮಾಸವನ್ನೂ ಕೂಡ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ದಿನವಿಡೀ ಉಪವಾಸವಿರುವ ಮುಸ್ಲಿಂ ಬಾಂಧವರು ಸಂಜೆಯಾಗುತ್ತಲೇ ರೋಜಾ ಬಿಟ್ಟು ಕುಟುಂಬ ಸಮೇತ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಾರೆ. ಇಲ್ಲಿ ತಮ್ಮಿಷ್ಟದ ತಿಂಡಿ ತಿನಿಸು, ಖರ್ಜೂರ, ಹಣ್ಣು-ಹಂಪಲ, ಸಿಹಿ ಪದಾರ್ಥ, ಜ್ಯೂಸ್, ಡ್ರೈ ಫ್ರ್ಯೂಟ್ಸ್, ಚಿಕನ್-ಮಟನ್ ಖಾದ್ಯಗಳನ್ನು ಸವಿಯುತ್ತಿದ್ದಾರೆ. ಇನ್ನು ಹಬ್ಬಕ್ಕೆ ಹೊಸ ಬಟ್ಟೆ, ಟೋಪಿ, ಬುರ್ಖಾ, ಸೀರೆ, ಬಳೆ, ಅಲಂಕಾರಿಕ ವಸ್ತುಗಳು, ಸುಗಂಧ ದ್ರವ್ಯಗಳು, ಮೆಹೆಂದಿ ಖರೀದಿ ಕೂಡ ಜೋರಾಗಿದೆ. ಮಾರುಕಟ್ಟೆಯಲ್ಲಿ ಕಾಲಿಡಲು ಕೂಡ ಆಗದಷ್ಟು ಜನದಟ್ಟಣೆ ಕಂಡು ಬರುತ್ತದೆ.
ಬೆಳಕಿನ ಸ್ವರ್ಗ: ಬೆಳಗಾವಿ ಖಡೇ ಬಜಾರ್, ದರ್ಬಾರ್ ಗಲ್ಲಿಯಲ್ಲಿ ಅಕ್ಷರಶಃ ಬೆಳಕಿನ ಸ್ವರ್ಗವೇ ನಿರ್ಮಾಣವಾಗಿದೆ. ಕಲರ್ ಕಲರ್ ವಿದ್ಯುತ್ ದೀಪಗಳಿಂದ ಮಾರುಕಟ್ಟೆ ರಸ್ತೆಗಳು ಕಂಗೊಳಿಸುತ್ತಿವೆ. ಕಿಲೋಮೀಟರ್ಗಟ್ಟಲೆ ಉದ್ದದ ಕಮಾನು ನಿರ್ಮಿಸಿ, ಅದರ ಮೇಲೆ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.
ರಂಜಾನ್ ಮಾಸ: ಕುಂದಾನಗರಿ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಸಂಭ್ರಮ 47 ಬಗೆಯ ಚಿಕನ್ ಖಾದ್ಯ:ವ್ಯಾಪಾರಿ ಅಬ್ದುಲ್ ರಜಾಕ್ ಈಟಿವಿ ಭಾರತ ಜೊತೆಗೆ ಮಾತನಾಡಿ, "ಚಿಕನ್ ಖಾದ್ಯಗಳನ್ನು ಮಾತ್ರ ತಯಾರಿಸುತ್ತೇವೆ. ನಮ್ಮಲ್ಲಿ ಚಿಕನ್ ಸತ್ಯಾ, ಅಂಗಾರಿ, ಕನ್ಯಾಕುಮಾರಿ, ಕೊಲ್ಹಾಪುರಿ, ತಂದೂರಿ ಸೇರಿ 47 ಬಗೆಯ ಚಿಕನ್ ವೆರೈಟಿ ಸಿಗುತ್ತವೆ. ಅಲ್ಲದೇ ಜನರ ರುಚಿಗೆ ತಕ್ಕಂತೆ ಮಾಡಿಕೊಡುತ್ತೇವೆ. 130 ರೂ.ಯಿಂದ 430 ರೂ. ವರೆಗೆ ದರವಿದ್ದು, ನಮ್ಮ ಬಳಿ ಮುಸ್ಲಿಂರಿಗಿಂತ ಹಿಂದೂಗಳೇ ಜಾಸ್ತಿ ಸಂಖ್ಯೆಯಲ್ಲಿ ಬರುತ್ತಾರೆ. ವ್ಯಾಪಾರ ಚೆನ್ನಾಗಿ ಆಗುತ್ತಿದೆ. ಮಧ್ಯಾಹ್ನ 3ರಿಂದ ಬೆಳಗಿನ ಜಾವ 4 ಗಂಟೆವರೆಗೂ ಜನ ಇರುತ್ತಾರೆ" ಎಂದು ಹೇಳಿದರು.
ದರ್ಬಾರ್ ಗಲ್ಲಿಯಲ್ಲಿ ರಂಜಾನ್ ದರ್ಬಾರ್:ಹಿರಿಯ ಪತ್ರಕರ್ತ ಮೆಹಬೂಬ್ ಮಕಾನದಾರ್ ಮಾತನಾಡಿ, "ರಂಜಾನ್ ನಿಮಿತ್ತ ಒಂದು ತಿಂಗಳು ಕಠಿಣ ಉಪವಾಸ ವ್ರತವನ್ನು ಮಾಡಲಾಗುತ್ತದೆ. ಇನ್ನು ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಸೇರಿ ಮತ್ತಿತರ ರಾಜ್ಯಗಳ ಪ್ರಸಿದ್ಧ ತಿನಿಸುಗಳು ಇಲ್ಲಿವೆ. ದರ್ಬಾರ್ ಗಲ್ಲಿಯಲ್ಲಿನ ರಂಜಾನ್ ದರ್ಬಾರ್ ಕಣ್ತುಂಬಿಕೊಳ್ಳಲು ಗೋವಾ, ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳ ಅನೇಕ ನಗರಗಳಿಂದ ಜನ ಇಲ್ಲಿಗೆ ಆಗಮಿಸುತ್ತಾರೆ. ಇನ್ನು ರೋಜಾ ಬಿಡುವ ವೇಳೆ ದೇಶದಲ್ಲಿ ನೆಮ್ಮದಿ, ಸುಖ, ಶಾಂತಿ, ಒಳ್ಳೆಯ ಮಳೆ-ಬೆಳೆ ಬರಲಿ, ಎಲ್ಲ ಜನರೂ ಸಮೃದ್ಧಿ ಹೊಂದಲಿ ಎಂದು ಪ್ರಾರ್ಥಿಸುತ್ತಾರೆ. ರಂಜಾನ್ ಮತ್ತೊಂದು ವಿಶೇಷತೆ ಎಂದರೆ ನಾವು ಗಳಿಕೆ ಮಾಡಿದ ಹಣ, ಬಂಗಾರ, ಬೆಳ್ಳಿ, ಆಸ್ತಿಯಲ್ಲಿ ಶೇ.2ರಷ್ಟು ದಾನ ಧರ್ಮ(ಜಕಾತ್) ಮಾಡಬೇಕು. ಹಾಗಾಗಿ, ಪ್ರತಿಯೊಬ್ಬ ಬಡವ ಕೂಡ ಈ ಹಬ್ಬ ಆಚರಿಸಬೇಕೆಂದು ಉಳ್ಳವರು ಬಡವರಿಗೆ ನೆರವಿನ ಹಸ್ತ ಚಾಚುತ್ತಾರೆ" ಎಂದು ಹಬ್ಬದ ಮಹತ್ವ ತಿಳಿಸಿದರು.
ರಂಜಾನ್ ಮಾಸ: ಕುಂದಾನಗರಿ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಸಂಭ್ರಮ ಒಟ್ಟಾರೆ ರಂಜಾನ್ ಹಬ್ಬ ಮುಗಿಯೋವರೆಗೂ ಈ ಸಂಭ್ರಮ ಮುಂದುವರಿಯಲಿದ್ದು, ಕೋಟ್ಯಂತರ ರೂ. ವ್ಯಾಪಾರ ವಹಿವಾಟು ಇಲ್ಲಿ ನಡೆಯಲಿದೆ.
ಇದನ್ನೂ ಓದಿ:ರಂಜಾನ್ 2024: ಭಾರತದಲ್ಲಿ ಅರ್ಧಚಂದ್ರ ದರ್ಶನ, ಮಂಗಳವಾರದಿಂದ ಉಪವಾಸ ಪ್ರಾರಂಭ