ಹುಬ್ಬಳ್ಳಿ:ಸಾಮಾನ್ಯವಾಗಿ ತಿರುಪತಿ ತಿಮ್ಮಪ್ಪ, ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ತಲೆಗೂದಲು ಮುಡಿ ಕೊಡುವುದನ್ನು ನೋಡಿದ್ದೇವೆ. ಆದ್ರೆ ಹುಬ್ಬಳ್ಳಿಯ ಆರ್ಎಸ್ಎಸ್ ಸ್ವಯಂ ಸೇವಕ ಹಾಗೂ ಹಿಂದೂ ಮುಖಂಡರೊಬ್ಬರು ಶ್ರೀರಾಮ ಮಂದಿರ ನಿರ್ಮಾಣವಾದ್ರೆ ಮುಡಿಕೊಡುವುದಾಗಿ ಸಂಕಲ್ಪ ತೊಟ್ಟು ಈಗ ತಮ್ಮ ಮುಡಿ ಅರ್ಪಿಸಿದ್ದಾರೆ.
ನಗರದ ಗಣು ಜರತಾರಘರ, ಮುಡಿ ಹರಕೆ ಸಮರ್ಪಣೆ ಮಾಡಿದ ಹಿಂದೂ ಮುಖಂಡರಾಗಿದ್ದಾರೆ. ಇವರು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಗೊಳ್ಳಲಿ ಎಂದು ಕಳೆದ 15 ವರ್ಷಗಳ ಹಿಂದೆ ಮಾಡಿದ್ದ ಸಂಕಲ್ಪದಂತೆ ಇಲ್ಲಿಯ ಕಮರಿಪೇಟ ಶ್ರೀರಾಮ ಮಂದಿರದಲ್ಲಿ ಗುರುವಾರ ಸರಳ ಕಾರ್ಯಕ್ರಮದಲ್ಲಿ ಮುಡಿ ಹರಕೆ ಪೂರ್ಣಗೊಳಿಸಿದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡ ವಿಠಲ ಲದವಾ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಮಾಜಿ ಉಪ ಮೇಯರ್ ನಾರಾಯಣ ಜರತಾರಘರ ಸಾಕ್ಷಿಯಾದರು.
ಗಣು ಜರತಾರಘರ್ ಅವರು ಮುಡಿ ಬಿಡಲಿಕ್ಕೆ ಏನು ಕಾರಣ ಎಂಬುದನ್ನು ಬಿಚ್ಚಿಟ್ಟಿದ್ದಾರೆ. 2003ರಲ್ಲಿ ಹುಬ್ಬಳ್ಳಿಯಿಂದ 50 ಜನ ರೈಲಿನಲ್ಲಿ ಅಯೋಧ್ಯೆಗೆ ತೆರಳುತ್ತಿದ್ದಾಗ ಸುಲ್ತಾನಪುರದಲ್ಲಿ ಇವರನ್ನು ತಡೆ ಹಿಡಿಯಲಾಗಿತ್ತು. ಬಳಿಕ ಕಾಲ್ನಡಿಗೆಯಲ್ಲಿ ಅಯೋಧ್ಯೆಗೆ ತೆರಳಿದರೂ ಶ್ರೀರಾಮನ ದರ್ಶನ ಸಾಧ್ಯವಾಗಲಿಲ್ಲ. ಬಳಿಕ ಹುಬ್ಬಳ್ಳಿಗೆ ಬಂದು ಹಿಂದೂ ಸಂಘಟನೆಯನ್ನು ಬಲಪಡಿಸುವ ಕೆಲಸದಲ್ಲಿ ನಿರತಗಿದ್ದರು. ಆಗ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುವವರೆಗೂ ತಲೆ ಕೂದಲು ತೆಗೆಯುವುದಿಲ್ಲ ಎಂದು 2009 ರಲ್ಲಿ ಸಂಕಲ್ಪ ಮಾಡಿದ್ದರು. ಆ ಸಂಕಲ್ಪದಂತೆ ಈಗ ಮುಡಿ ನೀಡುವ ಮೂಲಕ ತಮ್ಮ ಹರಕೆಯನ್ನು ಪೂರ್ಣಗೊಳಿಸಿದ್ದಾರೆ.