ದಾವಣಗೆರೆ: ಹರಿಹರದ ತಾಲೂಕಿನ ಎರೆಹೊಸಹಳ್ಳಿ ಗ್ರಾಮದ ವೃದ್ಧ ದಂಪತಿ ಭೂಮಿಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ತಮಗೆ ಅನ್ನವನ್ನು ಕೊಡುವ ಭೂಮಿಗೆ ಸಾವಯವ ಗೊಬ್ಬರ ಬಳಸಿ ಬಂಗಾರದಂತ ಬೆಳೆ ಬೆಳೆಯುತ್ತಿದ್ದಾರೆ.
ತರಹೇವಾರಿ ಬೆಳೆಗಳನ್ನು ಬೆಳೆಯುತ್ತಿರುವ ವೃದ್ಧ ದಂಪತಿಗೆ ಕೈಗೆ ಭರಪೂರ ಆದಾಯ ಬರುತ್ತಿದೆ. ನೋನಿ ಹಣ್ಣು, ಸುವರ್ಣ ಗಡ್ಡೆ, ಕೆಂಪು ಬೆಂಡಿ, ಹಾಲು ಗೆಣಸು ಹೀಗೆ ಔಷಧೀಯುಕ್ತ ಬೆಳೆಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಎರೆಹೊಸಳ್ಳಿ ಗ್ರಾಮದ ರೈತ ದಂಪತಿಗಳಾದ ಸಂಜೀವಪ್ಪ ರೆಡ್ಡಿ ಜಿ.ಹೆಚ್, ರೇಣುಕಮ್ಮ ಸಂಜೀವಪ್ಪ ರೆಡ್ಡಿ ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಕೇವಲ 18 ಗುಂಟೆ ಭೂಮಿಯಲ್ಲಿ ಸಾವಯವ ಗೊಬ್ಬರ ಬಳಕೆ ಮಾಡಿ 28 ಕ್ಕೂ ಹೆಚ್ಚು ಬೆಳೆಗಳನ್ನು ಬೆಳೆದು ಮಾದರಿ ರೈತ ದಂಪತಿಗಳಾಗಿದ್ದಾರೆ. ಖರ್ಚು ಇಲ್ಲದೆ ವರ್ಷಕ್ಕೆ 80 ಸಾವಿರದಿಂದ 1 ಲಕ್ಷದ ತನಕ ಆದಾಯ ಗಳಿಸುತ್ತಿದ್ದಾರೆ. ಇವರ ಜಮೀನಿಗೆ ಬೇರೆ ಬೇರೆ ರೈತರು ದಿನನಿತ್ಯ ಭೇಟಿ ನೀಡಿ ಸಾವಯವ ಕೃಷಿ ಬಗ್ಗೆ, ಬೆಳೆಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ದಾವಣಗೆರೆ ಶಿವಮೊಗ್ಗ, ಮೈಸೂರು, ಧಾರವಾಡ, ತುಮಕೂರು, ಹುಬ್ಬಳಿ ಸೇರಿದಂತೆ ರಾಜ್ಯದ ವಿವಿಧ ಸ್ಥಳಗಳಲ್ಲಿ ನಡೆದ ಸಾವಯವ ಗೊಬ್ಬರ ಬಳಕೆಯಿಂದ ಬೆಳೆದ ಬೆಳೆಗಳ ಪ್ರದರ್ಶನದಲ್ಲಿ, ಈ ರೈತ ದಂಪತಿಗಳು ಭಾಗವಹಿಸಿದ್ದಾರೆ. ಅಲ್ಲದೆ ತಾವು ಬೆಳೆದ ಕೆಂಪು ಬೆಂಡೆ, ರಸತಾಳೆ ಕಬ್ಬು, ತರಕಾರಿ ಪ್ರದರ್ಶನಕ್ಕಿಟ್ಟಿದ್ದಾರೆ. ಇವರು ಪ್ರದರ್ಶನಕ್ಕಿಡುವ ಬೆಳೆಗಳ ಬೀಜಗಳಿಗೆ ಭಾರಿ ಬೇಡಿಕೆ ಇದ್ದು, ವಿವಿಧ ಬೆಳೆಗಳ ಬೀಜಗಳ ಮಾರಾಟವನ್ನು ಕೂಡ ಮಾಡುತ್ತಾರೆ.
ಪುಟ್ಟ ತೋಟದಲ್ಲಿದೆ, 28 ತರಹೇವಾರಿ ಬೆಳೆಗಳು : ಸಂಜೀವಪ್ಪ ರೆಡ್ಡಿ ಅವರ 18 ಗುಂಟೆ ಜಮೀನಿನಲ್ಲಿ ಪಪ್ಪಾಯ, ದಾಳಿಂಬೆ, ಪೇರಲ, ತೆಂಗು, ಅಡಕೆ, ಮಾವು, ಕೆಂಪು ಬಾಳೆ, ರಸತಾಳೆ ಕಬ್ಬು, ನುಗ್ಗೆ, ಕೆಂಪು ಬೆಂಡಿಕಾಯಿ, ಸುವರ್ಣಗಡ್ಡೆ, ಗೆಣಸು, ಮರಗೆಣಸು, ನೋನಿ ಹಣ್ಣು, ಕರಿಬೇವು, ಲಿಂಬೆ, ಪರಂಗಿ, ದಾಳಿಂಬೆ, ಅಡುಗೆ ಅರಿಶಿಣ, ಉಪ್ಪಿನಕಾಯಿ ಶುಂಠಿ, ಡ್ರ್ಯಾಗನ್ ಫ್ರೂಟ್ ಈರೀತಿಯ ಬೆಳೆಯು ಹುಲುಸಾಗಿ ಬೆಳೆದಿದೆ. ಅದರಲ್ಲಿನ ಲಾಭವು ಕೃಷಿಕ ದಂಪತಿಗಳನ್ನು ಕೈಹಿಡಿದಿದೆ.
ಇವರ ಜಮೀನಿನಲ್ಲಿ ತರಕಾರಿ ಬೆಳೆಗಳಾದ ಕ್ಯಾರೆಟ್, ಮೂಲಂಗಿ, ಮಲ್ಲಾಡ ಅವರೆ, ಅವರೆ, ಬಳ್ಳಿಯಲ್ಲಿ ಬಿಡುವ ವಿಶೇಷ ಅಲೂಗಡ್ಡೆ, ಹಾಲು ಕುಂಬಳಕಾಯಿ, ಸಿಹಿ ಕುಂಬಳಕಾಯಿ, ಈರುಳ್ಳಿ, ಛೋಟಾ ಮೆಣಸು, ಹೂ ಕೋಸ್, ಎಲೆ ಕೋಸು, ಹಿರೇಕಾಯಿ, ಹಾಗಲಕಾಯಿ, ಕೆಂಪು ಬೆಂಡೆಕಾಯಿ, ಬದನೆಕಾಯಿ, ಟೊಮೆಟೊ ಬೆಳೆಗಳನ್ನು ಬೆಳೆದಿದ್ದಾರೆ. ಈಗಾಗಲೇ ಈ ಎಲ್ಲಾ ಬೆಳೆಗಳು ಇಳುವರಿ ನೀಡಿದ್ದು ಸಂಜೀವಪ್ಪ ರೆಡ್ಡಿ ಅವರಿಗೆ ಸಂತಸ ತಂದಿದೆ. ಹೊಲದಲ್ಲಿನ ಕೀಟಗಳನ್ನು ತಿನ್ನುವುದಕ್ಕಾಗಿ ಬರುವ ಹಕ್ಕಿಪಕ್ಷಿಗಳು ನೆಲೆಸುವುದಕ್ಕಾಗಿ ಹೊಲದ ಸುತ್ತಲೂ ಔಡಲ, ಬೇವಿನ ಮರ, ಬನ್ನಿಮರಗಳನ್ನು ಬೆಳೆಸಿರುವುದು ವಿಶೇಷವಾಗಿದೆ.
ಸಾವಯವ ಗೊಬ್ಬರ, ಜೀವಮೃತ ಬಳಕೆ : ಸಂಜೀವಪ್ಪ ರೆಡ್ಡಿ ದಂಪತಿ ಇಬ್ಬರೂ ಕಷ್ಟಪಟ್ಟು ಸಾವಯವ ಗೊಬ್ಬರವನ್ನು ಮನೆಯಲ್ಲೇ ತಯಾರು ಮಾಡುತ್ತಾರೆ. ಮನೆ ಗೊಬ್ಬರ, ಗೋಮೂತ್ರ, ಸಗಣಿ, ಕಡಲೆ ಹಿಟ್ಟು, ಜೋಳದ ಹಿಟ್ಟನ್ನು ಬೆರಸಿ ಗೊಬ್ಬರ ತಯಾರಿಸುತ್ತಾರೆ. ಇದೇ ಗೊಬ್ಬರವನ್ನು ಬೆಳೆಗಳಿಗೆ ಬಳಸಲಾಗುತ್ತದೆ. ಬಳಿಕ ಗಿಡಗಳಿಗೆ ಸ್ಪ್ರೇ ಮಾಡುವುದರಿಂದ ಗಿಡಗಳು ಶೈನಿಂಗ್ ಬರಲಿವೆ ಎಂದು ಸಂಜೀವಪ್ಪ ರೆಡ್ಡಿ ಈಟಿವಿ ಭಾರತ್ಗೆ ಮಾಹಿತಿ ನೀಡಿದರು. ಕೊತ್ತಂಬರಿ, ಪುದಿನ, ಉಳಿಚಿಕ್ಕು, ಸಬ್ಬಸಗಿ, ಹೆಸರು, ಅಲಸಂದಿಯನ್ನು ಕೂಡ ಇವರು ಬೆಳೆಯುತ್ತಿರುವುದು ವಿಶೇಷ.
ಇನ್ನು, ಬೋರ್ವೆಲ್ ಇರುವ ಕಾರಣ ಜಮೀನಿಗೆ ಭರಪೂರ ನೀರು ದೊರೆಯುತ್ತದೆ. ಅಲ್ಲದೆ ಮಳೆ ಬಿದ್ದರೆ ಜಮೀನಿನಲ್ಲಿ ಬಿದ್ದ ಮಳೆಯ ನೀರು ಭೂಮಿಯಲ್ಲೇ ಇಂಗುವಂತೆ ರೈತ ಸಂಜೀವರೆಡ್ಡಿ ಅವರು ಮಾಡಿದ್ದಾರೆ. ಅಲ್ಲದೆ ಭೂಮಿಯಲ್ಲಿ ಬೆಳೆದ ಮಿಶ್ರ ಬೆಳೆಗಳ ಮಧ್ಯದಲ್ಲಿ ಅಲ್ಲಲ್ಲಿ ಕಾಣುವ ಕಳೆ-ಕಸವನ್ನು ನಾಶಪಡಿಸಲು ಇವರು ಕಳೆ ನಾಶಕವನ್ನು ಬಳಸುವುದಿಲ್ಲ. ಕಳೆ ತೆಗೆಯಲು ಕೃಷಿ ವಿಶ್ವ ವಿದ್ಯಾಲಯ ಸಿದ್ಧಪಡಿಸಿರುವ ಕಳೆ ನಾಶಕ ಯಂತ್ರ ಬಳಸುತ್ತಾರೆ.
ಔಷಧಿಯುಕ್ತ ಬೆಳೆಗಳೇ ಹೆಚ್ಚು : "ಸುವರ್ಣಗಡ್ಡೆಗೆ ಹೊಟ್ಟೆಯಲ್ಲಿರುವ ಕಲ್ಲು ಕರಗಿಸುವ ಶಕ್ತಿ ಇದೆ, ಅಲ್ಲದೆ ಇವರು ಬೆಳೆದಿರುವ ನೋನಿ ಹಣ್ಣು ಸಕ್ಕರೆ ಕಾಯಿಲೆಗೆ ಉಪಯುಕ್ತವಾಗಿದೆ. ಮರಗೆಣಸು, ಪಪ್ಪಾಯಿ, ಡ್ರ್ಯಾಗನ್ ಫ್ರೂಟ್ ಕೂಡ ಆರೋಗ್ಯಕ್ಕೆ ಒಳ್ಳೆಯದು. ಇನ್ನು ಕೆಂಪು ಬೆಂಡೆ ಗ್ಯಾಸ್ಟ್ರಿಕ್, ಮಲಬದ್ಧತೆ ದೂರ ಮಾಡುವ ಶಕ್ತಿ ಹೊಂದಿದೆ. ಬೆಂಡಿಯ ಬೀಜವನ್ನು ಮಾರಾಟ ಮಾಡಲಾಗುತ್ತದೆ. ಒಂದು ಸಿಂಗಲ್ ಕೆಂಪು ಬೆಂಡಿಕಾಯಿ 40 ರೂಪಾಯಿಗೆ ಮಾರಾಟ ಆಗುತ್ತದೆ. ಇದರಿಂದಲೇ 40 ಸಾವಿರಕ್ಕೂ ಹೆಚ್ಚು ಹಣಗಳಿಸಿದ್ದೇನೆ" ಎನ್ನುತ್ತಾರೆ ರೈತ ಸಂಜೀವಪ್ಪ ರೆಡ್ಡಿ.
ಕೈ ತುಂಬ ಆದಾಯ, ಖರ್ಚು ಮಾತ್ರ ಶೂನ್ಯ : ಈಟಿವಿ ಭಾರತ ಜೊತೆ ರೈತ ಸಂಜೀವಪ್ಪ ರೆಡ್ಡಿ ಪ್ರತಿಕ್ರಿಯಿಸಿ " 18 ಗುಂಟೆ ಜಮೀನಿನಲ್ಲಿ 28 ಬೇರೆ ಬೇರೆ ಬೆಳೆಗಳನ್ನು ಬೆಳೆದಿದ್ದೇವೆ. ರಸತಾಳೆ ಕಬ್ಬು, ಕೆಂಪು ಬೆಂಡಿ, ನುಗ್ಗೆ, ಮೂಲಂಗಿ, ಬಿಟ್ರೂಟ್, ಕ್ಯಾರೆಟ್, ಹಾಲು ಗೆಣಸು, ಸಿಹಿ ಗೆಣಸು, ಮರ ಗೆಣಸು, ನೋನಿ ಹಣ್ಣು, ಇದಕ್ಕೆ ಸಾವಯವ ಗೊಬ್ಬರ ಬಳಸಿ ಬೆಳೆಯುತ್ತೇವೆ. ಮನೆ ಗೊಬ್ಬರ, ಗೋಮೂತ್ರ, ಸಗಣಿ, ಕಡಲೆ ಹಿಟ್ಟು, ಜೋಳದ ಹಿಟ್ಟು ಬೆರಸಿ ಗೊಬ್ಬರ ತಯಾರು ಮಾಡುತ್ತೇವೆ. ವರ್ಷಕ್ಕೆ 80 ಸಾವಿರದಿಂದ 1 ಲಕ್ಷ ರೂಪಾಯಿ ಆದಾಯ ಗಳಿಸುತ್ತೇವೆ. ಸಿಹಿ ಕುಂಬಳಕಾಯಿ, ಹಾಲು ಕುಂಬಳ, ಉಪ್ಪಿನಕಾಯಿ ಶುಂಠಿ, ಶುಂಠಿ ಕೂಡ ಬೆಳೆದಿದ್ದೇವೆ. ಖರ್ಚು ಕಮ್ಮಿ. ಜೀವಾಮೃತ ಬಳಸಿದರೆ ಸಮಸ್ಯೆ ಇರುವುದಿಲ್ಲ. ಗಿಡಗಳಿಗೆ ಸ್ಪ್ರೇ ಮಾಡಿದ್ರೇ ಹುಳು ಕಾಟ ಇರಲ್ಲ. ಇಷ್ಟೆಲ್ಲ ಮಾಡಲು ಮನೆಯವರ ಸಪೋರ್ಟ್ ಇದೆ" ಎಂದರು.