ಕರ್ನಾಟಕ

karnataka

ETV Bharat / state

ಎನ್​ಡಿಎ ನಾಯಕರ ಮೇಲೂ ಪ್ರಾಸಿಕ್ಯೂಷನ್ ಅನುಮತಿಗೆ ಆಗ್ರಹಿಸಿ ಕಾಂಗ್ರೆಸ್​ನಿಂದ ರಾಜಭವನ ಚಲೋ ಪ್ರತಿಭಟನೆ - Congress Rajabhavan Chalo protests

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವ ರಾಜ್ಯಪಾಲರು ಎನ್​ಡಿಎ ನಾಯಕರ ವಿರುದ್ಧದ ಪ್ರಕರಣಗಳ ಪ್ರಾಸಿಕ್ಯೂಷನ್​ಗೂ ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್​ ನಾಯಕರು ವಿಧಾನಸೌಧ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಿ, ಬಳಿಕ ರಾಜಭವನ ಚಲೋ ಕೈಗೊಂಡರು.

Congress Protest
ಕಾಂಗ್ರೆಸ್​ನಿಂದ ರಾಜಭವನ ಚಲೋ (ETV Bharat)

By ETV Bharat Karnataka Team

Published : Aug 31, 2024, 11:19 AM IST

ಕಾಂಗ್ರೆಸ್​ನಿಂದ ರಾಜಭವನ ಚಲೋ ಪ್ರತಿಭಟನೆ (ETV Bharat)

ಬೆಂಗಳೂರು: ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ತನಿಖೆಗೆ ಪೂರ್ವಾನುಮತಿ ಕೊಟ್ಟಿರುವ ಹಿನ್ನೆಲೆ ಕಾಂಗ್ರೆಸ್ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷ ಹೆಚ್ಚಾಗಿದೆ. ಇದೀಗ ಸಿಎಂ ಸಿದ್ದರಾಮಯ್ಯ ಪ್ರಕರಣದಂತೆಯೇ ಬಿಜೆಪಿ, ಜೆಡಿಎಸ್ ನಾಯಕರ ಮೇಲಿನ ಪ್ರಕರಣಗಳ ಸಂಬಂಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡುವಂತೆ ಒತ್ತಾಯಿಸಿ ಹೋರಾಟಕ್ಕೆ ಇಳಿದಿದೆ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಜನಾರ್ದನ ರೆಡ್ಡಿ, ಮುರುಗೇಶ್ ನಿರಾಣಿ ಹಾಗೂ ಶಶಿಕಲಾ ಜೊಲ್ಲೆಯವರ ಮೇಲಿನ ಪ್ರಕರಣದಲ್ಲೂ ಪ್ರಾಸಿಕ್ಯೂಷನ್ ಅನುಮತಿಗಾಗಿ ಆಗ್ರಹಿಸಿ ಕಾಂಗ್ರೆಸ್ ನಾಯಕರು ರಾಜಭವನ ಚಲೋ ನಡೆಸಿದೆ.

ಡಿಸಿಎಂ ಡಿ.ಕೆ.ಶಿವಕುಮಾರ್ (ETV Bharat)

ವಿಧಾನಸೌಧ ಗಾಂಧಿ ಪ್ರತಿಮೆಯ ಮುಂಭಾಗ ಕಾಂಗ್ರೆಸ್ ನಾಯಕರು ಪ್ರತಿಭಟನೆ ಕೈಗೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರು, ಶಾಸಕರು, ಸಂಸದರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ರಾಜ್ಯಪಾಲರ ವಿರುದ್ಧ ಧಿಕ್ಕಾರ ಕೂಗುತ್ತಿರುವ ಕೈ ನಾಯಕರು ಎನ್​ಡಿಎ ನಾಯಕರ ಮೇಲೂ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡುವಂತೆ ಆಗ್ರಹಿಸಿದರು. ಪ್ರತಿಭಟನೆಯ ಬಳಿಕ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮೂಲಕ ರಾಜಭವನದತ್ತ ತೆರಳಿದರು.

ಕಾಂಗ್ರೆಸ್​ನಿಂದ ರಾಜಭವನ ಚಲೋ (ETV Bharat)

ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಕೆ:ಚಾರ್ಜ್ ಶೀಟ್ ಸಲ್ಲಿಕೆಯಾದರೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ಜನಾರ್ದನ ರೆಡ್ಡಿ ಪ್ರಕರಣಗಳ ವಿರುದ್ಧ ತನಿಖೆಗೆ ಅನುಮತಿ ಕೊಟ್ಟಿಲ್ಲ. ಕೂಡಲೇ ಈ ಪ್ರಕರಣಗಳ ಬಗ್ಗೆ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​ ಅವರಿಗೆ ಆಗ್ರಹಿಸಿದರು. ಬಳಿಕ ಕಾಲ್ನಡಿಗೆ ಮೂಲಕ ರಾಜಭವನಕ್ಕೆ ತೆರಳಿ, ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಕಾಂಗ್ರೆಸ್​ನಿಂದ ರಾಜಭವನ ಚಲೋ (ETV Bharat)

ಪ್ರತಿಭಟನೆಯ ಮೂಲಕವೇ ರಾಜ್ಯಪಾಲರ ಮೇಲೆ ಒತ್ತಡ ತರುವ ಪ್ರಯತ್ನಕ್ಕೆ ಕಾಂಗ್ರೆಸ್ ಸರ್ಕಾರ ಕೈಹಾಕಿದೆ. ಒಂದು ವೇಳೆ, ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ಕೊಡದೇ ಹೋದರೆ ರಾಷ್ಟ್ರಪತಿಗಳ ಎದುರು ಸಂಸದರು, ಶಾಸಕರು ಪರೇಡ್ ನಡೆಸಲು ಕಾಂಗ್ರೆಸ್​ ಚಿಂತನೆ ನಡೆಸಿದೆ. ರಾಜ್ಯಪಾಲರು ಕೇಂದ್ರದ ಒತ್ತಡದಿಂದ ಸಿಎಂ ವಿರುದ್ಧ ತನಿಖೆಗೆ ಅನುಮತಿ ಕೊಟ್ಟಿದ್ದಾರೆ. ಆದರೆ, ಲೋಕಾಯುಕ್ತರು ತನಿಖೆ ಮಾಡಿ ಚಾರ್ಜ್ ಶೀಟ್ ಹಾಕಿದ್ರೂ ಹೆಚ್.ಡಿ. ಕುಮಾರಸ್ವಾಮಿ ಮೇಲೆ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿಲ್ಲ. ಜೊತೆಗೆ ನಿರಾಣಿ, ಜನಾರ್ದನ್​ ರೆಡ್ಡಿ ಹಾಗೂ ಶಶಿಕಲಾ ಜೊಲ್ಲೆಯವರ ಮೇಲಿನ ಪ್ರಕರಣಗಳ ಸಂಬಂಧ ಕೂಡ ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟಿಲ್ಲ. ರಾಜ್ಯಪಾಲರು ರಾಷ್ಟ್ರಪತಿಗಳ ಪ್ರತಿನಿಧಿಯಂತೆ ನಡೆದುಕೊಳ್ಳುತ್ತಿಲ್ಲ. ಅವರು ಕೇಂದ್ರದ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದರು.

ಕಾಂಗ್ರೆಸ್​ನಿಂದ ರಾಜಭವನ ಚಲೋ (ETV Bharat)

ಇದನ್ನೂ ಓದಿ:ಸಿಎಂ ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್: ಆ.31ಕ್ಕೆ ವಿಚಾರಣೆ ಮುಂದೂಡಿಕೆ, ಸಿದ್ದರಾಮಯ್ಯಗೆ ಮತ್ತೆರಡು ದಿನ ರಿಲೀಫ್ - Muda Scam

ABOUT THE AUTHOR

...view details