ಬೆಳಗಾವಿ: ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ. ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದರು.
ಬೆಳಗಾವಿಯಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿಎಂ ಚೆನ್ನಾಗಿ ಸರ್ಕಾರ ನಡೆಸುತ್ತಿದ್ದಾರೆ. ಹಾಗಾಗಿ, ಅವರ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಗ್ಯಾರಂಟಿ ಸೇರಿದಂತೆ ಒಳ್ಳೆಯ ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ. ಮುಂದೆ ಬಜೆಟ್ ಇದೆ, ಒಳ್ಳೆಯ ಬಜೆಟ್ ಅನ್ನು ಮುಖ್ಯಮಂತ್ರಿಗಳು ನೀಡಲಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ, ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದರು.
ಮುಂದಿನ ಸಿಎಂ ಡಿಕೆಶಿ ಎಂಬ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಈಗಾಗಲೇ ಕೆಪಿಸಿಸಿ ಅಧ್ಯಕ್ಷರಾಗಿ ಹಾಗೂ ಡಿಸಿಎಂ ಆಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ, ಆ ಪ್ರಶ್ನೆ ಈಗ ನಮ್ಮ ಮುಂದೆ ಇಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ನವೆಂಬರ್ ಅಂತ್ಯದ ವೇಳೆಗೆ ಅಧಿಕಾರದಿಂದ ಕೆಳಗಿಳಿಯಬಹುದು ಎಂಬ ಪ್ರತಿಪಕ್ಷ ನಾಯಕ ಆರ್.ಅಶೋಕ ಅವರ ಹೇಳಿಕೆಗೆ, ಅದು ಹೇಳೋರಿಗೆ ಗೊತ್ತು. ನನಗೆ ಗೊತ್ತಿಲ್ಲ ಎಂದು ತಿಳಿಸಿದರು.
ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಖಾಯಂ ಸಂಚಾರಿ ಪೀಠವನ್ನು ಬೆಳಗಾವಿಯಲ್ಲಿ ಆರಂಭಿಸುತ್ತಿದ್ದೇವೆ. ಇದರಿಂದ 7 ಜಿಲ್ಲೆಯ ಜನರಿಗೆ ಪರಿಹಾರ ಸಿಗಲಿದೆ. ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸಿ ನ್ಯಾಯ ದೊರಕಿಸುವ ಕೆಲಸ ಆಗಲಿದೆ. ಅದೇ ರೀತಿ ಇಂದು ಮಧ್ಯಾಹ್ನ ಸುವರ್ಣ ವಿಧಾನಸೌಧದಲ್ಲಿ ಬೆಳಗಾವಿ ವಲಯದ ಏಳು ಜಿಲ್ಲೆಗಳ ನಮ್ಮ ಇಲಾಖೆಗಳ ಉಪ ನಿರ್ದೇಶಕರು, ಮೌಲ್ಯಮಾಪನ ಇಲಾಖೆ ಮತ್ತು ಆಹಾರ ನಿಗಮದ ಅಧಿಕಾರಿಗಳ ಸಭೆ ಕರೆದಿದ್ದೇನೆ ಎಂದರು.
ತೂಕದಲ್ಲಿ ಮೋಸ ಮಾಡುತ್ತಿರುವ ನ್ಯಾಯಬೆಲೆ ಅಂಗಡಿಗಳಿಗೆ ದಂಡ ವಿಧಿಸುತ್ತೇವೆ. ಅದೇ ರೀತಿ ಅಂಗಡಿಗಳನ್ನು ಸೀಜ್ ಮಾಡುತ್ತೇವೆ. ಸಾರ್ವಜನಿಕರ ಹಿತದೃಷ್ಟಿಯಿಂದ ಮೌಲ್ಯಮಾಪನ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಲಿದೆ. ಅದೇ ರೀತಿ ಕಬ್ಬಿನ ತೂಕದಲ್ಲಿ ಆಗುತ್ತಿರುವ ಮೋಸ ತಡೆಯಲು ಎಪಿಎಂಸಿಗಳಲ್ಲಿ ತೂಕದ ಯಂತ್ರ ಅಳವಡಿಸುತ್ತೇವೆ. ಅಲ್ಲದೇ ಎಲ್ಲಾ ಕಾರ್ಖಾನೆಗಳಲ್ಲೂ ಸರ್ಕಾರದಿಂದಲೇ ತೂಕದ ಯಂತ್ರ ಅಳವಡಿಸಿ 1 ಕೆ.ಜಿ ಕೂಡ ತೂಕದಲ್ಲಿ ವ್ಯತ್ಯಾಸ ಆಗದಂತೆ ಕ್ರಮ ವಹಿಸುತ್ತೇವೆ ಎಂದು ಮುನಿಯಪ್ಪ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯ ನವೆಂಬರ್ ಅಂತ್ಯದ ವೇಳೆಗೆ ಅಧಿಕಾರದಿಂದ ಕೆಳಗಿಳಿಯಬಹುದು: ಅಶೋಕ್ - R ASHOK