ದಾವಣಗೆರೆ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮತ್ತು ಸಿಎಂ ಸಿದ್ದರಾಮಯ್ಯರಿಗೆ ಸುಳ್ಳು ಹೇಳುವುದರಲ್ಲಿ ನೊಬೆಲ್ ಪ್ರಶಸ್ತಿ ಕೊಡಬೇಕು ಎಂದು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು. ದಾವಣಗೆರೆ ನಗರದ ಬಿಜೆಪಿ ಕಚೇರಿಯಲ್ಲಿ ಹಿಂದುಳಿದವರಿಗೆ, ದಲಿತರಿಗೆ ರಾಮಮಂದಿರ ಕಾರ್ಯಕ್ರಮಕ್ಕೆ ಅಹ್ವಾನ ನೀಡಿಲ್ಲ ಎಂದು ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಮಾರಂಭದ ದಿದ ಹಲವು ಹಿಂದುಳಿದ, ದಲಿತ ಮಠಾಧೀಶರು ಭಾಗಿಯಾಗಿದ್ದರು. ಆದ್ರೆ ರಾಹುಲ್ ಸುಳ್ಳು ಹೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ದಾವಣಗೆರೆ, ಚಿತ್ರದುರ್ಗದಿಂದಲೇ ಹಿಂದುಳಿದ ಸಮಾಜಗಳ ಮಠಾಧೀಶರಾದ ಮದಾರ ಚೆನ್ನಯ್ಯ, ನಿರಂಜನಾನಂದ ಶ್ರೀಸ್ವಾಮೀಜಿ ಭಾಗಿಯಾಗಿದ್ದರು. ಸಿಎಂ ಸಿದ್ದರಾಮಯ್ಯ ರಾಹುಲ್ ಗಾಂಧಿ ಇಬ್ಬರು ಸುಳ್ಳು ಹೇಳುವುದರಲ್ಲಿ ಎತ್ತಿದ ಕೈ. ಸಿದ್ದರಾಮಯ್ಯನವರು ಹಿಜಾಬ್ ಬಗ್ಗೆ ಹೇಳಿಕೆ ಕೊಟ್ಟು ಯೂ ಟರ್ನ್ ಹೊಡೆದು ಸುಳ್ಳು ಹೇಳಿದ್ದರು ಎಂದರು.
ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ ಎಂಬ ವಾಕ್ಯವನ್ನು, ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು ಎಂಬುದಾಗಿ ಸರ್ಕಾರ ಬದಲಾವಣೆ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹಾಸ್ಟೆಲ್ ಹಾಗು ಶಾಲೆಗಳಲ್ಲಿ ಕೆಟ್ಟ ಊಟ ಕೊಡ್ತಿದ್ದಾರೆ. ಅದನ್ನು ಧೈರ್ಯವಾಗಿ ಪ್ರಶ್ನಿಸಬೇಕಾ, ಅದೇ ಹಾಸ್ಟೆಲ್ಗಳಲ್ಲಿ ಮೂಲಸೌಕರ್ಯ ಇಲ್ಲ. ಅದನ್ನು ಪ್ರಶ್ನಿಸಬೇಕಾ?. ಕುವೆಂಪು ಅವರು ವರ್ಣಿಸಿದ ವಾಕ್ಯ ಇದು. ಬದಲಾವಣೆ ಮಾಡಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಇದೇ ವಿಚಾರವಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ವಾಗತ ಮಾಡಿದ್ದಾರೆ. ಸಚಿವ ಮಧು ಬಂಗಾರಪ್ಪ ಸಹ ಸ್ವಾಗತ ಮಾಡಿದ್ದಾರೆ. ಬದಲಾವಣೆ ಮಾಡಿದರಲ್ಲಿ ಸಮಾಜ ಕಲ್ಯಾಣ ಸಚಿವರ ಕೈವಾಡ ಇದೆನಾ, ಇಲ್ಲ ಅಧಿಕಾರಿಗಳು ಈ ರೀತಿ ಮಾಡಿದ್ದಾರೋ ಗೊತ್ತಿಲ್ಲ. ಅಧಿಕಾರಿಗಳು ಮಾಡಿದಲ್ಲಿ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದರು.
ಸರ್ಕಾರ ಪಾಪರ್ ಆಗಿದೆ:ನುಡಿದಂತೆ ನಡೆದ ಸರ್ಕಾರ ಎಂದು ಘೋಷವಾಕ್ಯ ಬಳಕೆ ಮಾಡುವ ಸಿದ್ದರಾಮಯ್ಯನವರು ಪದವೀಧರರಿಗೆ ಇವರು ಒಂದು ರೂಪಾಯಿ ಕೊಟ್ಟಿಲ್ಲ. ರೈತರಿಗೆ ಮತ್ತು ವಿದ್ಯುತ್ ಬಳಕೆದಾರರಿಗೆ ಅನ್ಯಾಯ ಆಗಿದೆ. ಇಲ್ಲಿಯವರೆಗೆ ಎಷ್ಟು ವಿದ್ಯುತ್ ಕೊಟ್ಟಿದ್ದೀರಾ. ಇನ್ನು ಹೆಣ್ಣು ಮಕ್ಕಳ ಬ್ಯಾಂಕ್ ಖಾತೆಗೆ ಹಣ ಸರಿಯಾಗಿ ಬರುತ್ತಿದೆಯಾ. ಈ ಕಾಂಗ್ರೆಸ್ ಸರ್ಕಾರ ಪಾಪರ್ ಆಗಿದೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಕೇವಲ ಒಂದು ಸೀಟ್ ಗೆದ್ದಿತ್ತು. ಈ ಬಾರಿ ಚುನಾವಣೆಯಲ್ಲಿ ಒಂದೂ ಸೀಟ್ ಗೆಲ್ಲುವುದಿಲ್ಲ. ನಾವು ಕಾಂಗ್ರೆಸ್ನವರಂತೆ ಸುಳ್ಳು ಹೇಳುವುದಿಲ್ಲ. ನಾವು ಮೋದಿ ಗ್ಯಾರಂಟಿಯಲ್ಲಿ ಸಾಧನೆಗಳನ್ನು ಜನರಿಗೆ ತಿಳಿಸುತ್ತಾ ನೇರವಾಗಿ ಹೇಳ್ತಾ ಹೋಗ್ತಿದ್ದೇವೆ. ಇನ್ನು ನನ್ನ ಪುತ್ರ ಹಾವೇರಿ ಟಿಕೆಟ್ಬೇಕೆಂದು ಕೇಳ್ತಿದ್ದಾನೆ. ಕ್ಷೇತ್ರದಲ್ಲಿ ಓಡಾಟ ನಡೆಸಿದ್ದಾನೆ. ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲಿಸುತ್ತೇವೆ. ಅಂತಿಮ ತೀರ್ಮಾನ ಹೈಕಮಾಂಡ್ ಮಾಡುತ್ತೆ ಎಂದರು.
‘ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಗೆ ತನ್ನಿ’: ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಗೆ ತನ್ನಿ ಎಂದು ಹೇಳಿಕೆ ನೀಡಿದ್ದು ಸರಿ ಇದೆ ಎಂದು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ತಮ್ಮ ಹೇಳಿಕೆ ಸಮರ್ಥಿಸಿಕೊಂಡರು. ಸಂಸದ ಡಿಕೆ ಸುರೇಶ್ ಹೇಳಿದ್ದು ತಪ್ಪು ಎಂದು ಹೇಳಿದ್ದು ಸಿದ್ದರಾಮಯ್ಯ ನವರು. ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಈ ದೇಶ ಒಡೆಯಲು ಬಿಡಲ್ಲ ಎಂದು ಹೇಳಿದ್ದು ಖರ್ಗೆಯವರು. ಎಫ್ಐಆರ್ ಹಾಕಿದ್ದಕ್ಕೆ ನ್ಯಾಯಾಲಯದಲ್ಲಿ ಸ್ಟೇ ಕೊಟ್ಟಿದ್ದಾರೆ. ನಾನು ಹೇಳಿದ್ದು ಸರಿ ಇದೆ ಎಂದು ಇಡೀ ದೇಶ ಒಪ್ಪುತ್ತೆ ಎಂದು ಹೇಳಿದರು.
ಈ ವಿಚಾರದಲ್ಲಿ ಡಿಕೆಶಿ ಹಾಗು ಡಿಕೆ ಸುರೇಶ್ ಅವರು ಸಮಾಧಾನವಾಗಿ ಇದ್ದಾರೋ, ಇಲ್ವೋ ಎಂಬುದು ಗೊತ್ತಿಲ್ಲ. ಡಿಕೆಶಿಯವರು ಜೈಲಿಗೆ ಹೋಗಿ ಬಂದರೂ ಜಾಮೀನಿನ ಮೇಲೆ ಇದ್ದಾರೆ. ಮೊದಲ ಸೆಟಲ್ಮೆಂಟ್ ಆಗಿದೆ. ಇನ್ನುಳಿದ ಸೆಟಲ್ಮೆಂಟ್ ಮತ್ತೊಮ್ಮೆ ಜೈಲಿಗೆ ಹೋಗುವ ಮೂಲಕ ಆಗುತ್ತೆ. ಡಿಸಿಎಂ ಆದವರು ಮುಂದುವರೆಸುತ್ತಿದ್ದಾರೆ. ನ್ಯಾಯಾಲಯದಲ್ಲಿ ಒಬ್ಬ ಸಿಎಂ ದಂಡ ಕಟ್ಟುವ ಪರಿಸ್ಥಿತಿ ಕಾಂಗ್ರೆಸ್ಗೆ ಬಂದಿದೆ. ಡಿಕೆ ಸುರೇಶ್ ಮೇಲೆ ವೈಯಕ್ತಿಕ ದ್ವೇಷ ಇಲ್ಲ, ಜಿನ್ನಾ ಸಂಸ್ಕೃತಿಯ ದೇಶ ವಿಭಜನೆ ಮಾಡುವವರ ಮೇಲೆ ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು ಎಂದಿದ್ದು ನಿಜ. ಹಿಂದೆ ಹಿಂದೂಸ್ಥಾನ ಪಾಕಿಸ್ತಾನದ ವಿಭಜನೆ ಮಾಡಿದ್ರು. ಇದೀಗ ಉತ್ತರ ಭಾರತ ದಕ್ಷಿಣ ಭಾರತ ಎಂದು ಒಡೆಯುವ ಪ್ರಯತ್ನ ನಡೆಯುತ್ತಿದೆ. ಇಂತಹ ದೇಶದ್ರೋಹಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಓದಿ:'ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ' ಪುನಃ ಬರೆಸದಿದ್ದರೆ ಪರಿಣಾಮ ಎದುರಿಸಿ: ಬಿಜೆಪಿ ಎಚ್ಚರಿಕೆ