ಮಳೆಯಿಂದಾದ ಹಾನಿ ಬಗ್ಗೆ ಅರ್ಚಕ ಗುರು ರಾಘವೇಂದ್ರ ಕುಲಕರ್ಣಿ ಮಾಹಿತಿ ನೀಡಿದರು (ETV Bharat) ಹಾವೇರಿ : ಜಿಲ್ಲೆಯಲ್ಲಿ ಹರಿಯುತ್ತಿರುವ ತುಂಗಭದ್ರಾ, ವರದಾ, ಧರ್ಮಾ ಮತ್ತು ಕುಮದ್ವತಿ ನದಿಗಳ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಪರಿಣಾಮ ಹಾವೇರಿ ಜಿಲ್ಲೆಯಲ್ಲಿ ಹರಿಯುವ ತುಂಗಭದ್ರಾ, ವರದಾ, ಧರ್ಮಾ ಮತ್ತು ಕುಮದ್ವತಿ ನದಿಗಳು ಮೈದುಂಬಿ ಹರಿಯುತ್ತಿವೆ.
ಕೆಲವು ಕಡೆ ಅಪಾಯದಮಟ್ಟ ಮೀರಿ ನದಿಗಳು ಹರಿಯುತ್ತಿರುವುದು ರೈತರಲ್ಲಿ ಆತಂಕ ತಂದಿದೆ. ವರದಾ ನದಿಯಂತೂ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಹಾನಗಲ್ ಮತ್ತು ಹಾವೇರಿ ತಾಲೂಕಿನ ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ.
ರಾಘವೇಂದ್ರ ಮಠಕ್ಕೆ ಜಲದಿಗ್ಬಂಧನ (ETV Bharat) ಈ ಮಧ್ಯೆ ಹಾವೇರಿ ತಾಲೂಕು ಹೊಸರಿತ್ತಿಯಲ್ಲಿರುವ ರಾಘವೇಂದ್ರಮಠ ಜಲದಿಗ್ಬಂಧನಕ್ಕೆ ಒಳಗಾಗಿದೆ. ಮಠದ ಸುತ್ತ ವರದಾ ನದಿ ಆವರಿಸಿದ್ದು, ಮಠಕ್ಕೆ ಬರುವ ಭಕ್ತರಿಗೆ ಅನಾನುಕೂಲವಾಗಿದೆ. 500 ವರ್ಷಗಳ ಇತಿಹಾಸವಿರುವ ಈ ಮಠದ ಫಲಪುಷ್ಪಗಳ ತೋಟ ಶ್ರೀರಾಘವೇಂದ್ರ ಸುಶೀಲೇಂದ್ರ ಶ್ರೀ ಧೀರೇಂದ್ರ ತೀರ್ಥರ ವೃಂದಾವನ ಸಂಪೂರ್ಣ ಜಲಾವೃತವಾಗಿದೆ.
ದೇಶದಲ್ಲಿ ಎರಡನೇಯ ಮಂತ್ರಾಲಯವೆಂದು ಖ್ಯಾತಿ ಪಡೆದಿರುವ ಹೊಸರಿತ್ತಿ ರಾಘವೇಂದ್ರ ಮಠಕ್ಕೆ ದೂರದ ಮುಂಬೈಯಿಂದ, ಬೆಂಗಳೂರು, ಹೈದರಾಬಾದ್ ಸೇರಿದಂತೆ ದೂರ ದೂರದಿಂದ ಭಕ್ತರು ಆಗಮಿಸುತ್ತಾರೆ. ಮಂತ್ರಾಲಯದ ಶ್ರೀಗಳಾದ ಸುಭುದೇಂದ್ರರಿಗೆ ಇಲ್ಲಿಯೇ ಪಟ್ಟಾಭಿಷೇಕವಾಗಿತ್ತು. ಈ ಮಠಕ್ಕೂ ಮಂತ್ರಾಲಯ ರಾಘವೇಂದ್ರಸ್ವಾಮಿ ಮಠಕ್ಕೂ ಹಲವು ಸಾಮ್ಯತೆಗಳಿವೆ ಎನ್ನುತ್ತಾರೆ ಇಲ್ಲಿಯ ಭಕ್ತರು.
ಹೊಸರಿತ್ತಿ ರಾಘವೇಂದ್ರಮಠ ಜಲಾವೃತ (ETV Bharat) ಮಠದಲ್ಲಿ ಶ್ರೀ ಧೀರೇಂದ್ರ ಗುರುಕುಲ ಪಾಠಶಾಲೆ ಸಹ ನಡೆಯುತ್ತಿದೆ. ಮಂತ್ರಾಲಯ ರಾಘವೇಂದ್ರ ಮಠದ ಶಾಖಾಮಠದಲ್ಲಿ ರಾಯರ ಯಾವುದೇ ಪೂಜೆ ಪುನಸ್ಕಾರಗಳಿಗೆ ಧಕ್ಕೆ ಬರದಂತೆ ಅರ್ಚಕರು ನೋಡಿಕೊಳ್ಳುತ್ತಿದ್ದಾರೆ. ಆದರೆ ಹೊಸರಿತ್ತಿ ಮಠದ ಸ್ನಾನಘಟ್ಟ ಭಕ್ತರಿಗೆ ಮಾಡಿರುವ ಹಲವು ವ್ಯವಸ್ಥೆಗಳು ಮಳೆಯಿಂದ ಅಸ್ತವ್ಯಸ್ತಗೊಂಡಿವೆ.
'ಮಳೆಯಿಂದಾಗಿ ಮಠದ ಸಭಾಭವನ ಸೇರಿದಂತೆ ಧಾರ್ಮಿಕ ಸ್ಥಳಗಳಿಗೆ ತೆರಳುವುದು ಭಕ್ತರಿಗೆ ಕಷ್ಟಕರವಾಗಿದೆ. ಹಲವು ಐತಿಹಾಸಿಕ ಹಿನ್ನೆಲೆ ಇರುವ ಮಠದಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ಭಕ್ತರು ಸಮಸ್ಯೆ ಅನುಭವಿಸುತ್ತೇವೆ. ಈ ಕುರಿತಂತೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ ಯಾವ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಈ ಕುರಿತಂತೆ ಗಮನಹರಿಸಿಲ್ಲ' ಎಂದು ಭಕ್ತರಾದ ಸಿದ್ದು ಅಂಕಲಕೋಟಿ ಬೇಸರ ವ್ಯಕ್ತಪಡಿಸಿದ್ದಾರೆ.
ಹೊಸರಿತ್ತಿ ರಾಘವೇಂದ್ರಮಠದ ಆವರಣ (ETV Bharat) 'ಪ್ರತಿವರ್ಷ ಮಳೆಗಾಲದಲ್ಲಿ ವರದೆ ರಾಯರಮಠವನ್ನ ಸುತ್ತುವರಿಯುತ್ತಾಳೆ. ಇದಕ್ಕೆ ಸ್ಥಳೀಯ ಶಾಸಕರು ಮಠದ ಸುತ್ತ ತಡೆಗೋಡೆಯನ್ನು ಹಾಗೂ ಇದಕ್ಕೆ ಪರಿಹಾರವನ್ನು ಒದಗಿಸಬೇಕೆಂದು ನಿಮ್ಮಲ್ಲಿ ಕೋರಿಕೊಳ್ಳುತ್ತೇನೆ. ಮಳೆ ಬಂದಾಗ ಭಕ್ತರು ಮಠಕ್ಕೆ ಬರುವುದಿಲ್ಲ, ಮಠದ ಮುಂಭಾಗದಲ್ಲಿರುವ ಹಣ್ಣಿನ ಗಿಡ, ತೋಟ ಎಲ್ಲವೂ ನಾಶವಾಗಿವೆ. ಅದಕ್ಕೆ ಪರಿಹಾರ ಕೊಡಿಸಬೇಕಾಗಿ ವಿನಂತಿ' ಎಂದು ಅರ್ಚಕ ಗುರುರಾಘವೇಂದ್ರ ಕುಲಕರ್ಣಿ ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ :ಕುಮುದ್ವತಿ ನದಿ ಪಾತ್ರದಲ್ಲಿ ಭಾರಿ ಮಳೆ: ಹಾವೇರಿಯ ಎಲಿವಾಳ ಸೇತುವೆ ಸಂಪೂರ್ಣ ಮುಳುಗಡೆ - Elivala bridge submerged