ಕರ್ನಾಟಕ

karnataka

ETV Bharat / state

ಒಡೆದಾಳುವ ನೀತಿಯನ್ನು ರಾಮನ ವಿಷಯಕ್ಕೂ ವಿಸ್ತರಿಸುವ ಪಾಪ ಮಾಡಬೇಡಿ: ಆರ್​ ಅಶೋಕ್ - ಸಿಎಂಗೆ ಅಶೋಕ್ ಸಲಹೆ

ಕಾಂಗ್ರೆಸ್ ಪಕ್ಷದ ನೀತಿಯನ್ನ ರಾಮನ ವಿಷಯದಲ್ಲೂ ವಿಸ್ತರಿಸಿ ಪಾಪ ಕಟ್ಟಿಕೊಳ್ಳಬೇಡಿ ಎಂದು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಆರ್​.ಅಶೋಕ್ ಬರೆದಿಕೊಂಡಿದ್ದಾರೆ.

ಸಿಎಂಗೆ ಅಶೋಕ್ ಸಲಹೆ
ಸಿಎಂಗೆ ಅಶೋಕ್ ಸಲಹೆ

By ETV Bharat Karnataka Team

Published : Jan 23, 2024, 6:48 PM IST

Updated : Jan 23, 2024, 10:46 PM IST

ಬೆಂಗಳೂರು: ತಾವು ರಾಮನ ಭಕ್ತರೂ ಅಲ್ಲ, ಗಾಂಧೀಜಿ ಅವರ ಅನುಯಾಯಿಗಳೂ ಅಲ್ಲ. ತಾವೇನಿದ್ದರೂ ಅಧಿಕಾರದ ಅನುಯಾಯಿಗಳು, ಅಧಿಕಾರ ಕೊಡುವ ಹೈಕಮಾಂಡ್ ಭಕ್ತರು ಕಾಂಗ್ರೆಸ್ ಪಕ್ಷದ ಒಡೆದು ಆಳುವ ನೀತಿಯನ್ನ ರಾಮನ ವಿಷಯದಲ್ಲೂ ವಿಸ್ತರಿಸಿ ಪಾಪ ಕಟ್ಟಿಕೊಳ್ಳಬೇಡಿ ಎಂದು ಸಿಎಂ ವಿರುದ್ಧ ಪ್ರತಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಅಂತು - ಇಂತೂ ತಮ್ಮ ಬಾಯಲ್ಲೂ ರಾಮ ನಾಮ ಹೊರಡುತ್ತಿದೆ. ತೋರಿಕೆಗೊ, ಜನಮೆಚ್ಚುಗೆಗೊ ಅಥವಾ ಸಮಾಜದ ಅಂಜಿಕೆಗೋ, ಒಟ್ಟಿನಲ್ಲಿ ನಿನ್ನೆ ತಾವೂ ಒಂದು ದೇವಸ್ಥಾನಕ್ಕೆ ಹೋಗಿದ್ದೀರಿ. ಇದು ಸಂತೋಷದ ವಿಷಯ. ಆದರೆ, ನಿಮ್ಮ ಕಾಂಗ್ರೆಸ್ ಪಕ್ಷದ ಒಡೆದು ಆಳುವ ನೀತಿಯನ್ನ ರಾಮನ ವಿಷಯದಲ್ಲೂ ವಿಸ್ತರಿಸಿ ಪಾಪ ಕಟ್ಟಿಕೊಳ್ಳಬೇಡಿ.

ನೀವು ಮಹಾತ್ಮ ಗಾಂಧಿಯವರು ಹೇಳಿದ ರಾಮನ ಭಕ್ತರು ಅಂತ ಹೇಳಿದ್ದೀರಿ. ಮಹಾತ್ಮ ಗಾಂಧಿಯವರು ಗೋಹತ್ಯೆ ನಿಷೇಧದ ಅತ್ಯಂತ ದೊಡ್ಡ ಪ್ರತಿಪಾದಕರಾಗಿದ್ದರು. ಆದರೆ, ತಾವು ಗೋಹತ್ಯೆಯ ಪರ. ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷವನ್ನ ವಿಸರ್ಜನೆ ಮಾಡಿ ಅಂತ ಗಾಂಧೀಜಿ ಹೇಳಿದ್ದರು. ಆದರೆ, ತಾವುಗಳು ಕಾಂಗ್ರೆಸ್ ಪಕ್ಷವನ್ನ ಒಂದು ಕುಟುಂಬದ ಜಹಗೀರು ಮಾಡಿಕೊಟ್ಟುಬಿಟ್ಟಿದ್ದೀರಿ. ಇದೇನಾ ತಮ್ಮ ಗಾಂಧೀವಾದ? ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

ರಾಮ ಸತ್ಯವಂತ. ಕೊಟ್ಟ ಮಾತಿಗೆ ಎಂದೂ ತಪ್ಪದ ವ್ಯಕ್ತಿತ್ವ. ಆದರೆ, ತಾವು ಮಾಡಿದ್ದೇನು? ಮಾಡುತ್ತಿರುವುದೇನು? ತಮ್ಮ ಮೊದಲ ಅವಧಿಯಲ್ಲಿ ಜನತೆಗೆ ಕೊಟ್ಟಿದ್ದ ಭರವಸೆಗಳಲ್ಲಿ ಅರ್ಧ ಭಾಗವೂ ಈಡೇರಿಸಲಿಲ್ಲ. ಅದರ ಮೇಲೆ ನುಡಿದಂತೆ ನಡೆದ ಸರ್ಕಾರ ಎಂಬ ಮತ್ತೊಂದು ಸುಳ್ಳು. ಈಗ ಎರಡನೇ ಅವಧಿಯಲ್ಲಿ ತಾವು ಮಾಡುತ್ತಿರುವುದೇನು? ಎಲ್ಲರಿಗೂ 200 ಯೂನಿಟ್ ಕರೆಂಟ್ ಉಚಿತ ಅಂತ ಸುಳ್ಳು ಭರವಸೆ ನೀಡಿ ಕಡೆಗೆ ಸರಾಸರಿ ಎಂದು ವರಸೆ ಬದಲಿಸಿದ್ದೀರಿ.

10 ಕೆಜಿ ಅಕ್ಕಿ ನೀಡುತ್ತೇನೆ ಎಂದು ಹೇಳಿ ಈಗ ಮಾತು ತಪ್ಪಿದ್ದೀರಿ. ರಾಜ್ಯದ ಎಲ್ಲ ನಿರುದ್ಯೋಗಿ ಪದವೀಧರರು, ಡಿಪ್ಲೋಮಾ ಪದವೀಧರರಿಗೆ ಯುವನಿಧಿ ಗ್ಯಾರಂಟಿ ಅಂತ ಸುಳ್ಳು ಹೇಳಿ ಈಗ ಕಂಡೀಷನ್ ಮೇಲೆ ಕಂಡೀಷನ್ ಹಾಕಿ ಕಡೆಗೆ 3,000 ಯುವಕರು ಮಾತ್ರ ಅರ್ಹರು ಎಂದು ಯುವಕರಿಗೆ ಟೋಪಿ ಹಾಕಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.

ತಾವು ರಾಮನ ಭಕ್ತರೂ ಅಲ್ಲ, ಗಾಂಧೀಜಿ ಅವರ ಅನುಯಾಯಿಗಳೂ ಅಲ್ಲ. ತಾವೇನಿದ್ದೇರೂ ಅಧಿಕಾರದ ಅನುಯಾಯಿಗಳು, ಅಧಿಕಾರ ಕೊಡುವ ಹೈಕಮಾಂಡ್ ಭಕ್ತರು. ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿ, ರಾಮ ಮಂದಿರದ ಆಹ್ವಾನ ತಿರಸ್ಕರಿಸಿದ ತಮ್ಮ ಪಕ್ಷಕ್ಕೆ ಶ್ರೀರಾಮನ ಬಗ್ಗೆ, ಕೊಟ್ಟ ಮಾತಿನಂತೆ ರಾಮನ ಮಂದಿರ ನಿರ್ಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಉಳಿದಿಲ್ಲ. ಕನ್ನಡಿಗರ ರಾಮಭಕ್ತಿ, ಹಿಂದೂಗಳ ಒಗ್ಗಟ್ಟು ನೋಡಿ ತಮಗೆ ನಡುಕ ಉಂಟಾಗಿದೆ ಎಂದು ಗೊತ್ತು. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸೀಟು ಗೆಲ್ಲದಿದ್ದರೆ ಪಾಪ ತಮ್ಮ ಕುರ್ಚಿಗೇ ಕಂಟಕ. ಸಿದ್ದರಾಮಯ್ಯನವರೇ ತಮ್ಮ ಪರಿಸ್ಥಿತಿಯ ಬಗ್ಗೆ ನನಗೆ ಕನಿಕರ ಇದೆ. ಇನ್ನಾದರೂ ರಾಮನಿಗೆ ಶರಣಾಗಿ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:ಕಾಂಗ್ರೆಸ್ ಶ್ರೀರಾಮನ ವಿರುದ್ಧವೆಂಬ ಅಪಪ್ರಚಾರವನ್ನು ಖಂಡಿಸುತ್ತೇನೆ: ಸಿಎಂ ಸಿದ್ದರಾಮಯ್ಯ

Last Updated : Jan 23, 2024, 10:46 PM IST

ABOUT THE AUTHOR

...view details