ಬೆಂಗಳೂರು: ಸದಾ ಬಿಜೆಪಿ ವೇದಿಕೆಯ ಮುಂಭಾಗದಲ್ಲೇ ಇರುತ್ತಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ನಂತರ ವೇದಿಕೆಯಲ್ಲೇ ಕಾಣದಂತಾಗಿದ್ದಾರೆ ಅವರ ಪರಿಸ್ಥಿತಿ ನೋಡಿ ಬೇಸರವಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ. ಶೆಟ್ಟರ್ ಮರಳಿ ಬಿಜೆಪಿ ಸೇರ್ಪಡೆ ಕುರಿತು ಪಕ್ಷದ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮೇಲೆ ನಮಗೆ ಕರುಣೆ ಇದೆ. ಪಾಪ ಅವರು ಕಾಂಗ್ರೆಸ್ನಲ್ಲಿ ಮೂಲೆಗುಂಪಾಗಿ ಹೋಗಿದ್ದಾರೆ ಸರ್ಕಾರ ಬಂದು ಎಂಟು ತಿಂಗಳಾದರೂ ಅವರಿಗೆ ಒಂದು ಅಧಿಕಾರ ಅಥವಾ ಜವಾಬ್ದಾರಿ ಕೊಟ್ಟಿಲ್ಲ ಇದರಿಂದ ಅವರು ಕಾಂಗ್ರೆಸ್ನ ವೇದಿಕೆಯಲ್ಲಿ ಎಲ್ಲಿಯೂ ಕಾಣಿಸುತ್ತಿಲ್ಲ. ನಮ್ಮಲ್ಲಿ ಇದ್ದಾಗ ಇಬ್ಬರೂ ವೇದಿಕೆಯ ಮುಂಭಾಗದಲ್ಲಿ ಕಾಣಿಸುತ್ತಿದ್ದರು. ಕೋರ್ ಕಮಿಟಿ ಸದಸ್ಯರು ಬೇರೆ ಆಗಿದ್ದರು. ಈಗ ಅವರು ಕಾಂಗ್ರೆಸ್ನಲ್ಲಿರುವ ಪರಿಸ್ಥಿತಿ ನೋಡಿ ನನಗೆ ಬೇಸರ ಅನಿಸುತ್ತಿದೆ. ಅವರು ಅಲ್ಲಿ ಹೋಗಿ ನಮ್ಮ ಕಥೆ ಏನಾಯ್ತು ಅಂತಾ ಯೋಚಿಸಲಿ. ಅವರು ಮತ್ತೆ ಬಿಜೆಪಿಗೆ ಬರುವ ಬಗ್ಗೆ ಕೇಂದ್ರದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.
ಜೈ ಟಿಪ್ಪು ಸುಲ್ತಾನ್ ಎನ್ನುತ್ತಿದ್ದ ಸಿದ್ದರಾಮಯ್ಯ ಬಾಯಲ್ಲಿ ಜೈ ಶ್ರೀರಾಮ್ ಬಂದಿರೋದೆ ಆಶ್ಚರ್ಯವಾಗಿದೆ. ರಾಮಮಂದಿರ ವಿವಾದಿತ ಜಾಗ ಎಂದಿದ್ದ ಸಿದ್ದರಾಮಯ್ಯ ಈಗ ನಾನು ಅಯೋಧ್ಯೆಗೆ ಹೋಗುತ್ತೇನೆ ಎನ್ನುವುದಕ್ಕೆ ಕಾರಣ ಚುನಾವಣೆಯ ಒತ್ತಡ ಅಷ್ಟೇ. ಇವರು ರಾಮ ಕಾಲ್ಪನಿಕ ಎಂದವರು. ಅದರ ದಾಖಲೆ ಇದೆ. ಕೋರ್ಟ್ ನಲ್ಲಿ ಅಫಿಡವಿಟ್ ಕೂಡಾ ಹಾಕಿದ್ದರು, ರಾಮನ ಜನ್ಮ ದಿನದ ಸರ್ಟಿಫಿಕೆಟ್ ಇದೆಯಾ ಎಂದು ಕೇಳಿದ್ದರು, ಗಾಂಧಿ ರಾಮ ಬೇರೆ ಬಿಜೆಪಿ ರಾಮ ಬೇರೆ ಎಂದು ಹೇಳುತ್ತಿದ್ದವರು ಈಗ ಲೋಕಸಭೆಯಲ್ಲಿ ಒಂದು ಸೀಟಾದರೂ ಉಳಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಜೈ ಶ್ರೀರಾಮ ಎನ್ನುತ್ತಾರೆ. ಈಗ ಟಿಪ್ಪುವನ್ನು ಎಲ್ಲಿ ಬಿಟ್ಟಿರಿ ಸಿದ್ದರಾಮಯ್ಯ ಅವರೇ? ಸಮುದ್ರದಲ್ಲಿ ಟಿಪ್ಪು ಬಿಟ್ಟಿರಾ ಎಂದು ಅಶೋಕ್ ವ್ಯಂಗ್ಯವಾಡಿದರು.