ಕರ್ನಾಟಕ

karnataka

ETV Bharat / state

ಎಸ್ಐಟಿ ಅಲ್ಲ ಅದು ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ರಬ್ಬರ್ ಸ್ಟ್ಯಾಂಪ್; ಪೆನ್ ಡ್ರೈವ್ ಪ್ರಕರಣ ಸಿಬಿಐಗೆ ವಹಿಸಿ : ಅಶೋಕ್ ಆಗ್ರಹ - R Ashok - R ASHOK

ಪೆನ್ ಡ್ರೈವ್ ಪ್ರಕರಣ ಕುರಿತು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರು ತಿಳಿಸಿದ್ದಾರೆ.

r ashok
ಪ್ರತಿಪಕ್ಷದ ನಾಯಕ ಆರ್ ಅಶೋಕ್ (ETV Bharat)

By ETV Bharat Karnataka Team

Published : May 7, 2024, 3:23 PM IST

ಬೆಂಗಳೂರು :ಪೆನ್ ಡ್ರೈವ್ ಪ್ರಕರಣದ ಸ್ಕ್ರಿಪ್ಟ್ ರೈಟರ್ ಸುರ್ಜೇವಾಲಾ, ಡೈರೆಕ್ಟರ್ ಸಿದ್ದರಾಮಯ್ಯ, ಪ್ರೊಡ್ಯೂಸರ್ ಡಿ ಕೆ ಶಿವಕುಮಾರ್ ಆಗಿದ್ದು, ಎಸ್ಐಟಿ ಸಿಎಂ ಮತ್ತು ಡಿಸಿಎಂಗಳ ರಬ್ಬರ್ ಸ್ಟ್ಯಾಂಪ್ ಆಗಿದೆ. ಹಾಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದರು.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇವರಾಜೇಗೌಡ ಒಬ್ಬ ವಕೀಲ. ಅವರು ಆಡಿಯೋ ದಾಖಲೆ ಸಮೇತ ಪ್ರಕರಣದ ಮಾಹಿತಿ ಬಿಡುಗಡೆ ಮಾಡಿದ್ದಾರೆ. ಆಫರ್ ಕೊಟ್ಟಿರೋ ಬಗ್ಗೆ ಮಾತನಾಡಿದ್ದಾರೆ. ಎಸ್ಐಟಿ ತಂಡ ಯಾರನ್ನು ಬಿಡುಗಡೆ ಮಾಡಬೇಕು, ಯಾರನ್ನು ಬಂಧಿಸಬೇಕು ಎಂದು ತೀರ್ಮಾನ ಮಾಡಿದ್ದಾರೆ ಅಂತ ಆರೋಪ ಮಾಡಿದ್ದಾರೆ.

ಸಿಎಂ ಮೇಲೆ ಆರೋಪ ಮಾಡಿದ್ದಾರೆ. ತ್ರಿಬಲ್ ಎಸ್ ಮೂಲಕ ಪ್ಲಾನ್ ಮಾಡಿ ಮಾಡಿದ್ದಾರೆ. ಸುರ್ಜೇವಾಲ, ಸಿದ್ದರಾಮಯ್ಯ, ಶಿವಕುಮಾರ್ ಮೂವರು ಸೇರಿದ್ದಾರೆ. ಸುರ್ಜೇವಾಲಾ ಅವರೇ ಇದರ ಕಥೆ ಬರೆದಿದ್ದಾರೆ. ಡೈರೆಕ್ಟರ್ ಸಿದ್ದರಾಮಯ್ಯ. ಪ್ರೊಡ್ಯೂಸರ್ ಶಿವಕುಮಾರ್, ಪ್ರಜ್ವಲ್ ರೇವಣ್ಣ ವಿರುದ್ಧ ಆಲ್ ಜಜೀರಾ, ಸಿಂಗಾಪುರ್ ಚಾನೆಲ್‌ನಲ್ಲಿ ಬರುವಂತೆ ಮಾಡಿದ್ದಾರೆ ಎಂದರು.

ಇವರು ಒಕ್ಕಲಿಗ ವಿರೋಧಿಗಳು. ಹಿಂದೆ ವೀರೇಂದ್ರ ಪಾಟೀಲ್ ಅವರನ್ನ ಕೆಳಗೆ ಇಳಿಸಿದರು. ಯಡಿಯೂರಪ್ಪ ಅವರನ್ನ ತನಿಖೆ ಇಲ್ಲದೇ ಅಪರಾಧಿ ಮಾಡಿದ್ದರು. ಇಷ್ಟು ಪೆನ್​ಡ್ರೈವ್ ಮಾಡಿಸಿದ್ದು ಎಲ್ಲಿ?. ಅದಕ್ಕೆ ಡಿ. ಕೆ ಶಿವಕುಮಾರ್​ನ ಪ್ರೊಡ್ಯೂಸರ್ ಅಂತ ಹೇಳಿದ್ದು. ಎಸ್ಐಟಿ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಇಬ್ಬರ ರಬ್ಬರ್ ಸ್ಟಾಂಪ್ ಆಗಿದೆ. ಅವರು ಎಲ್ಲಿ ಹೇಳುತ್ತಾರೋ ಅಲ್ಲಿ ಒತ್ತುತ್ತಾರೆ. ಪೆನ್ ಡ್ರೈವ್ ಶೇಖರಿಸಿದರೆ, ಬಿಡುಗಡೆ ಮಾಡಿದರೆ ಜೈಲಿಗೆ ಹಾಕುತ್ತೇವೆ ಅಂತ ಎಸ್ಐಟಿ ಹೇಳಿದೆ. ಆದರೆ, ಪೆನ್ ಡ್ರೈವ್ ಮಾಡಿದವರನ್ನ ಯಾಕಪ್ಪ ಬಂಧನ ಮಾಡುತ್ತಿಲ್ಲ? ಎಂದು ಪ್ರಶ್ನಿಸಿದರು.

ಡ್ರೈವರ್ ಮೂಲ ವ್ಯಕ್ತಿ ಅಂತ ದೇವರಾಜೇಗೌಡ ಹೇಳಿದ್ದಾರೆ. ಈಗ ಸಿಂಗಾಪುರಕ್ಕೆ ಡ್ರೈವರ್ ಹೋಗಿದ್ದಾನೆ. ಒಬ್ಬ ಡ್ರೈವರ್ ಸಿಂಗಾಪುರಕ್ಕೆ ಹೋಗಿದ್ದಾನೆ ಅಂದರೆ ಹಣ ಎಲ್ಲಿ ಸಿಕ್ತು? ಇದು ಸ್ಪಾನ್ಸರ್ ಅಲ್ಲವಾ? ಅದಕ್ಕೆ ಎಸ್ಐಟಿ ರಬ್ಬರ್ ಸ್ಟಾಂಪ್ ಅಂತ ಹೇಳಿದ್ದು. ಎಸ್ಐಟಿಗೆ ಗೌರವ ಇದ್ದರೆ, ನಮ್ಮ ಮೇಲೆ ಆರೋಪ ಬಂದಿದೆ. ನಾವು ತನಿಖೆ ಮಾಡಲ್ಲ. ಸಿಬಿಐಗೆ ಕೊಡಿ ಅಂತ ಹೇಳಬೇಕು. ಇಲ್ಲ ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.

ಸರ್ಕಾರ ವಜಾಗೊಳಿಸಿ: ಕಾಂಗ್ರೆಸ್ ಸರ್ಕಾರ ಅಬ್ಬೇಪಾರಿ ಆಗಿದೆ. ಸರ್ಕಾರವೇ ಪೆನ್ ಡ್ರೈವ್ ಮಾಡಿ ಹಂಚಿಕೆ‌ ಮಾಡಿದೆ. ಇವರಿಗೆ ಮಾನ ಮರ್ಯಾದೆ‌ ಇಲ್ಲ. ಹೆಣ್ಣು ಮಕ್ಕಳ ಮಾನ, ಪ್ರಾಣ ರಕ್ಷಣೆ ಮಾಡುತ್ತೇವೆ ಅಂತ ಹೇಳಿ ಪ್ರಮಾಣವಚನ ಸ್ವೀಕರಿಸಿದರು. ಅವರೇ ಪೆನ್ ಡ್ರೈವ್ ಮಾಡಿ ಬಿಡುಗಡೆ ಮಾಡಿದ್ದಾರೆ. ಕೂಡಲೇ ರಾಜ್ಯಪಾಲರು ಪ್ರವೇಶ ಮಾಡಿ ಸರ್ಕಾರವನ್ನ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ದೇವರಾಜೇಗೌಡ ನನಗೆ ಯಾವುದೇ ಮಾಹಿತಿ ಕೊಟ್ಟಿಲ್ಲ. ಪತ್ರ ನೀಡಿಲ್ಲ ಎಂದು ರಾಜ್ಯಾಧ್ಯಕ್ಷರು ಹೇಳಿದ್ದಾರೆ. ಅಲ್ಲಿಗೆ ಇದು ಮುಗಿಯಿತು ಎಂದು ಅಶೋಕ್ ಸ್ಪಷ್ಟಪಡಿಸಿದ್ದಾರೆ.

ಸೋನಿಯಾಗೆ ಕಪ್ಪ ಕೊಡಲು ಬಿಡಿಎ ಸ್ವತ್ತು ಲೀಸ್: ರಾಜ್ಯ ಸರ್ಕಾರ ದಿವಾಳಿಯಾಗಿ ಪಾಪರ್ ಆಗಿದೆ. ಕೇರಳದ ರೀತಿ ನಿತ್ಯ ಚಟುವಟಿಕೆಗೆ ಹಣ ಇಲ್ಲದೇ ಬ್ಯಾಂಕ್ ಸಾಲ ಕೂಡ ಸಿಗದಂತೆ ಪಾಪರ್ ಆಗಿದೆ. ದೇಶದಲ್ಲಿ ಆರ್ಥಿಕ ಸ್ಥಿತಿಯಲ್ಲಿ ಎರಡು, ಮೂರನೇ ಸ್ಥಾನದಲ್ಲಿದ್ದೆವು. ಈಗ ಕೊನೆ ಸ್ಥಾನಕ್ಕೆ ಹೋಗಿದ್ದೇವೆ. ಹಿಂದೆ ಮಹಾರಾಜ ಕಾಂಪ್ಲೆಕ್ಸ್ ಹರಾಜು ಹಾಕಿತ್ತು. ಮಹಾಲಕ್ಷ್ಮಿ ಚೇಂಬರ್ಸ್ ಹರಾಜು ಹಾಕಿತ್ತು. ಈಗ ಹೊಸದಾಗಿ ಆರು ಬಿಡಿಎ ಕಾಂಪ್ಲೆಕ್ಸ್​ಗಳನ್ನ ಮಾರಾಟ ಮಾಡಲು ಹೊರಟಿದೆ. 50 ವರ್ಷಗಳ ಕಾಲ ಲೀಸ್ ಕೊಡಲು ಮುಂದಾಗಿದೆ. ಒಂದು ಜನರೇಷನ್ ಲೆಕ್ಕಕ್ಕೆ ಕೊಟ್ಟಿದ್ದಾರೆ. ಕಾಂಗ್ರೆಸ್ ನಾಯಕರು ಲೂಟಿ ಹೊಡೆಯಲು ಮುಂದಾಗಿದ್ದಾರೆ ಎಂದು ಆರ್​ ಅಶೋಕ್​ ಗಂಭೀರ ಆರೋಪ ಮಾಡಿದರು.

ಇದೆಲ್ಲ ಬಿಡಿಎ ಸ್ವತ್ತು. ಆದಾಯ ಬರುತಿತ್ತು. ಈಗ ನುಂಗಣ್ಣರು ಸೇರಿ ಲೂಟಿ ಹೊಡೆಯುತ್ತಿದ್ದಾರೆ. ಹೆಚ್ಎಸ್ಆರ್ ಲೇಔಟ್, ಕೋರಮಂಗಲ, ಇಂದಿರಾನಗರದಲ್ಲಿ ಜನರು ವಿರೋಧ ಮಾಡಿದ್ದಾರೆ. ಇದರಲ್ಲಿ 200 ಕೋಟಿಗೂ ಹೆಚ್ಚು ಕಿಕ್ ಬ್ಯಾಕ್ ಇದೆ. ಇದು 3 ಸಾವಿರ ಕೋಟಿ ಬೆಲೆ ಬಾಳುವ ಆಸ್ತಿ. ಕಾಂಗ್ರೆಸ್ ಅಪ್ಪನ ಮನೆಯ ಆಸ್ತಿ ಅಲ್ಲ. ಹಿಂದಿನವರು ಉಳಿಸಿ, ಬೆಳೆಸಿ ಆದಾಯ ಬರುವಂತೆ ಮಾಡಿದ್ದಾರೆ.

ಮೊಟ್ಟೆ ಬೇಡ, ಕೋಳಿಯೇ ನುಂಗೋಣ ಅಂತ ತೀರ್ಮಾನ ಮಾಡಿದ್ದಾರೆ. ಹೆಚ್ಎಸ್ಆರ್ ಲೇಔಟ್​ನಲ್ಲಿ ಸತೀಶ್ ರೆಡ್ಡಿ ಪ್ರತಿಭಟನೆ ಶುರು ಮಾಡಿದ್ದಾರೆ. ಸರ್ಕಾರ ಇದನ್ನು ನುಂಗಿ ನೀರು ಕುಡಿಯಲು ಬಿಡಲ್ಲ. ಕೂಡಲೇ ಲೀಸ್ ಪ್ರಕ್ರಿಯೆ ಕೈ ಬಿಡಬೇಕು. ಇಲ್ಲದಿದ್ದರೆ ನಾವು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಹಿಂದೆ ನಾವು ಅಧಿಕಾರದಲ್ಲಿ ಇದ್ದಾಗಲೂ ಲೀಸ್​ಗೆ ಕೊಡಿ ಅಂತಾ ಬಂದಿದ್ದರು. ಆಗ ಯಡಿಯೂರಪ್ಪ ಸಿಎಂ‌ ಇದ್ದರು. ಇದು ಲೂಟಿ ಪ್ರಕ್ರಿಯೆ ಅಂತ‌ ಹೇಳಿದ್ದಕ್ಕೆ ಕೈ ಬಿಟ್ಟರು. ಬೊಮ್ಮಾಯಿ ಇದ್ದಾಗಲೂ ಬಂತು. ಆಗಲೂ ಕೈ ಬಿಟ್ಟೆವು. ಈಗ ಮಾಫಿಯಾ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸೋನಿಯಾ ಗಾಂಧಿಗೆ ಕಪ್ಪ ಕೊಡಲು ಇದೆಲ್ಲವನ್ನು ಲೂಟಿ ಮಾಡುತ್ತಿದ್ದಾರೆ. ಇದನ್ನ ತಡೆಯದಿದ್ದರೆ, ನಾಳೆ ಪಾರ್ಕ್‌ಗಳನ್ನೂ ಮಾರಾಟ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಪರಿಹಾರದಲ್ಲಿ ರಾಜ್ಯದ ಪಾಲೆಷ್ಟು?: ಕೇಂದ್ರ ಸರ್ಕಾರ ರಾಜ್ಯದಲ್ಲಿ ನೊಂದಿರೋ ರೈತರಿಗೆ ಬರದ ಹಣ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ ಹಣವನ್ನ ಬಿಡುಗಡೆ ಮಾಡುವಂತೆ ಮನವಿ ಮಾಡಿದೆ. ರಾಜ್ಯ ಸರ್ಕಾರ ರೈತರ ಅಕೌಂಟಿಗೆ ಹಾಕುತ್ತಿದೆ. ಇದು ಕೇಂದ್ರದಿಂದ ಬಂದಿರೋ ಹಣ. ಕೇಂದ್ರದ ಹಣ ರೈತರಿಗೆ ತಲುಪಿದೆ. ಇದರಲ್ಲಿ ನಿಮ್ಮ ಪಾಲೆಷ್ಟು? ರಾಜ್ಯದಿಂದ ರೈತರಿಗೆ ನೀವು ಎಷ್ಟು ಕೊಟ್ಟಿದ್ದೀರಿ ಅಂತ ತಿಳಿಸಬೇಕು. ಕೊಟ್ಟಿರೋ ಎರಡು ಸಾವಿರ ಹಣದಲ್ಲಿ ಮುರಿದುಕೊಳ್ಳಬಾರದು ಎಂದು ಒತ್ತಾಯಿಸಿದರು.

ಆಯೋಗಕ್ಕೆ ಅಭಿನಂದನೆ : ದೇಶದ ಪ್ರಜಾಪ್ರಭುತ್ವ ಹಬ್ಬವಾದ ಸಾರ್ವತ್ರಿಕ ಚುನಾವಣೆ ಕರ್ನಾಟಕದಲ್ಲಿ ಎರಡನೇ ಹಂತ ನಡೆಯುತ್ತಿದೆ. ಮೊದಲ ಹಂತ ಶಾಂತಿಯಿಂದ ನಡೆದಿದೆ. ಎರಡನೇ ಹಂತದ ಮತದಾನ ಇಂದು ನಡೆಯುತ್ತಿದೆ. ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮದು. ವಿಶ್ವವೇ ಇತ್ತ ನೋಡುತ್ತಿದೆ. ಈ ಚುನಾವಣಾ ಹಬ್ಬದಲ್ಲಿ ದೇಶದ ಸುಭದ್ರಕ್ಕೆ, ಉತ್ತಮ‌ ನಾಯಕತ್ವಕ್ಕಾಗಿ ತಾವೆಲ್ಲರೂ ಮತದಾನಕ್ಕೆ ಬರಬೇಕು ಎಂದು ಮನವಿ ಮಾಡುತ್ತೇನೆ. ಎರಡು ಹಂತದ ಚುನಾವಣೆ ಗಲಭೆ ಇಲ್ಲದೇ ನಡೆಸಿದ ಚುನಾವಣಾ ಆಯೋಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಮಾತನಾಡಿ, ಶಿವರಾಮೇಗೌಡ ಕಾಂಗ್ರೆಸ್ ಪರ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡಿದ್ದಾರೆ. ರೇವಣ್ಣ ಅವರು ನಾನು ಇಂಗ್ಲೆಂಡ್ ಹೋಗಿದ್ದಾಗ ಹೀಗೆ ಮಾಡಿದ್ದರು ಅಂತ‌ ಹೇಳಿದ್ದಾರೆ. ಅವರು ಅದೇ ಪಕ್ಷದಲ್ಲಿ ಎಂಪಿ ಆಗಿದ್ದರು. ಅವರು ನಮ್ಮ ಪಕ್ಷದಲ್ಲಿ ಈಗ ಇಲ್ಲ. ಅವರು ಎಡಬಿಡಂಗಿ ಆಗಿದ್ದಾರೆ. ಡಿ ಕೆ ಶಿವಕುಮಾರ್, ದೇವರಾಜೇಗೌಡ ನಡುವೆ ಮಧ್ಯವರ್ತಿ ಕೆಲಸ ಮಾಡುತ್ತಿದ್ದಾರೆ. ಅವರು ಈಗಾಗಲೇ ನಮ್ಮ ಪಕ್ಷ ಬಿಟ್ಟು ಹೋಗಿದ್ದಾರೆ. ಅವರ ಮಗ ಚೇತನ್​ಗೌಡ ನಮ್ಮ ಪಕ್ಷದಲ್ಲಿ ಇದ್ದಾರೆ ಅಷ್ಟೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ :ಹಾಸನ ಪೆನ್​​ಡ್ರೈವ್​ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಸಂಚು ಇದೆ, ಅವರನ್ನು ಸಂಪುಟದಿಂದ ಕೈಬಿಡಬೇಕು: ಹೆಚ್​ಡಿಕೆ ಆಗ್ರಹ - HDK Press Meet

ABOUT THE AUTHOR

...view details