ಶಿವಮೊಗ್ಗ :ವಾಲ್ಮೀಕಿ ಅಭಿವೃದ್ದಿ ನಿಗಮದ ಹಣ ವರ್ಗಾವಣೆಯಲ್ಲಿ ಸಚಿವರ ಮೊದಲನೇ ವಿಕೆಟ್ ಪತನವಾಗಲಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಶಿವಮೊಗ್ಗದಲ್ಲಿ ಭವಿಷ್ಯ ನುಡಿದಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ವಾಲ್ಮೀಕಿ ಅಭಿವೃದ್ದಿ ನಿಗಮದ ಅಧಿಕಾರಿ ಚಂದ್ರಶೇಖರನ್ ಅವರ ಮನೆಗೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿ ನಂತರ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಚಂದ್ರಶೇಖರನ್ ಸಾವಿನಿಂದ ನಿಷ್ಠಾವಂತ ಅಧಿಕಾರಿಗಳು ಭಯಭೀತರಾಗಿದ್ದಾರೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲಾ ಇದೇ ರೀತಿ ಆಗಿದೆ. ಕೋಲಾರದ ಡಿಸಿ ಆಗಿದ್ದ ರವಿ, ಅನುಪಮ ಶಣೈ, ಮಲ್ಲಿಕಾರ್ಜುನ ಬಂಡೆಯಂತಹ ಅಧಿಕಾರಿಗಳಿಗೆ ನ್ಯಾಯ ಒದಗಿಸಲಿಲ್ಲ ಎಂದರು.
ನಮ್ಮ ರಾಜ್ಯದ ಎಸ್ಟಿ ನಿಗಮದ ಹಣ ಹೈದರಾಬಾದ್ನ ಜುಬಲಿ ಹಿಲ್ಸ್ನ ಐಟಿ ಕಂಪನಿಗೆ ಹೋಗಿದೆ. ವಾಲ್ಮೀಕಿ ನಿಗಮಕ್ಕೂ ಐಟಿ ಕಂಪನಿಗೂ ಏನ್ ಸಂಬಂಧ? ಎಂದು ಪ್ರಶ್ನಿಸಿದರು. ಹಣ ವರ್ಗಾವಣೆಯಲ್ಲಿ ಕೇವಲ ಒಬ್ಬ ಮಂತ್ರಿ ಇದ್ದಾರೆ ಅಂತ ಅನ್ನಿಸುವುದಿಲ್ಲ. ಹೀಗೆ ಹಣ ವರ್ಗಾವಣೆ ಆಗುವಾಗ ಸಿಎಂ ಹಾಗೂ ಅಧಿಕಾರಿಗಳು ಕತ್ತೆ ಕಾಯುತ್ತಿದ್ದಾರಾ? ಎಂದು ಪ್ರಶ್ನಿಸಿದರು.
ಯಾರೂ ಬೇಕಾದರೂ ಸಹ ಹಣ ಲೂಟಿ ಮಾಡಬಹುದಾ? ಎಂದು ಅನ್ನಿಸುತ್ತದೆ. ಚಂದ್ರಶೇಖರ್ರವರ ಮನೆಗೆ ಬಂದು ನೋಡಿ ನನಗೆ ಬೇಸರವಾಯಿತು. ಕೋವಿಡ್ ಬಂದಾಗ ತಮ್ಮ ಮನೆಯ ಒಡವೆ ಅಡವಿಟ್ಟು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅಧಿಕಾರಿ ಭ್ರಷ್ಠಾಚಾರ ಮಾಡಿದರೆ ಒಡವೆಯನ್ನು ಬಿಡಿಸಿಕೊಳ್ಳಬಹುದಾಗಿತ್ತು ಎಂದರು.
ಹಣ ಲೂಟಿ ಮಾಡಿರುವುದು ಸರ್ಕಾರದ ಒಂದು ವರ್ಷದ ಸಾಧನೆ : ಸರ್ಕಾರದ ಒಂದು ವರ್ಷದ ಸಾಧನೆ ಅಂದ್ರೆ ಟಕಾಟಕ್ ಅಂತ ಹಣ ಲೂಟಿ ಮಾಡಿರುವುದು. ಈ ಸರ್ಕಾರದ ಮೊದಲನೇ ವಿಕೆಟ್ ಪತನವಾಗುತ್ತದೆ. ಅಲ್ಲಿಯವರೆಗೂ ನಾವು ಬಿಡೋದಿಲ್ಲ ಎಂದರು.
ಗೃಹ ಸಚಿವರು ಬಂದು ಹೋಗಿದ್ದಾರೆ ಅಷ್ಟೆ. ಅವರು ಯಾವುದೇ ಆಶ್ವಾಸನೆ ನೀಡಿಲ್ಲ. ಹಣ ಲೂಟಿ ಮಾಡಿರುವುದನ್ನು ನೋಡಿ ಇಬ್ಬರು ಸಭೆ ಮೇಲೆ ಸಭೆ ನಡೆಸುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಶೀಘ್ರದಲ್ಲಿಯೇ ಮೊದಲನೆ ವಿಕೆಟ್ ಪತನವಾಗುತ್ತದೆ. ನಾವು ಇದನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸುತ್ತೇವೆ ಎಂದು ತಿಳಿಸಿದರು.
ಸಿಐಡಿ ತನಿಖೆ ಯಾರಿಗಾಗಿ ?: ಸಿಐಡಿ ತನಿಖೆಯನ್ನು ಯಾರಿಗಾಗಿ ಮಾಡುತ್ತಿದ್ದಾರಂತೆ. ಕೇಸ್ ಮುಚ್ಚಿ ಹಾಕಲು ತನಿಖೆ ನಡೆಸುತ್ತಿದ್ದಾರೆ. ಮೃತನ ಕುಟುಂಬದ ಬಳಿ ಯಾವ ರೀತಿ ತನಿಖೆ ನಡೆಯಬೇಕು ಎಂದು ಕೇಳಬೇಕಿತ್ತು. ಈ ಪ್ರಕರಣದಲ್ಲಿ ಇದುವರೆಗೂ ಯಾರನ್ನೂ ಬಂಧಿಸಿಲ್ಲ ಏಕೆ? ಎಂದರು. ಅದೇ ಬೇರೆ ಕೇಸ್ನಲ್ಲಿ ವಿಮಾನ ನಿಲ್ದಾಣಕ್ಕೆ ಫೋರ್ಸ್ ತೆಗೆದುಕೊಂಡು ಹೋಗುತ್ತಾರೆ. ಆದರೆ, ಇಲ್ಲಿ ಏನೂ ಎಂದು ವಾಗ್ದಾಳಿ ನಡೆಸಿದರು.
ಗೃಹ ಇಲಾಖೆಯನ್ನು ಎಲ್ಲರೂ ಹ್ಯಾಂಡಲ್ ಮಾಡ್ತಾರೆ : ಪರಮೇಶ್ವರ್ ಅವರ ಗೃಹ ಇಲಾಖೆಯನ್ನು ಎಲ್ಲರೂ ಹ್ಯಾಂಡಲ್ ಮಾಡುತ್ತಾರೆ. ಈಗ ಬ್ಯಾಂಕ್ ಸಹ ಸಿಬಿಐಗೆ ವಹಿಸಲು ತಿಳಿಸಿದೆ. ಅವರಿಗೆ ಗೃಹ ಇಲಾಖೆಯೇ ಇಷ್ಟವಿಲ್ಲ. 185 ಕೋಟಿ ರೂ. ಹಣ ಬಡ ವಾಲ್ಮೀಕಿ ಜನರಿಗೆ ನೀಡಬೇಕಿತ್ತು. ಇದರಿಂದ ಒಂದು ವರ್ಷ ಯಾರಿಗೂ ಲೋನ್ ಸಿಗುವುದಿಲ್ಲ. ಇದರಿಂದ ಸಿಎಂ ಎಸ್ಟಿ ಜನಾಂಗಕ್ಕೆ ಅನ್ಯಾಯ ಮಾಡಿದಂತೆ ಆಗಿದೆ ಅಲ್ಲವೆ? ಎಂದು ಪ್ರಶ್ನಿಸಿದರು. ನಿಮಗೆ ನ್ಯಾಯ ಕೊಡಬೇಕು ಅಂತ ಇದ್ರೆ ಕೂಡಲೇ ಈ ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದರು.
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ : ಸಂತೆಬೆನ್ನೂರು ಗುತ್ತಿಗೆದಾರರ ಆತ್ಮಹತ್ಯೆ ಪ್ರಕರಣದ ಹಿಂದೆ ಈಶ್ವರಪ್ಪ ವಿರುದ್ದ ಬೀದಿಗೆ ಇಳಿದಿದ್ದವರು ಈಗ ಬಿಲ ಸೇರಿದ್ದಾರೆ. ಇದರಿಂದ ಪ್ರಿಯಾಂಕ ಖರ್ಗೆ ಅವರು ಬಿಲ ಬಿಟ್ಟು ಹೊರಗೆ ಬನ್ನಿ ಎಂದರು. ನಮ್ಮ ರಾಜ್ಯ ನ್ಯಾಷನಲ್ ಕ್ರೈಂ ರೇಟ್ನಲ್ಲಿ ಶೇ. 45 ರಷ್ಟು ಹೆಚ್ಚಳವಾಗಿದೆ. ವಿಧಾನಸಭೆ ಕಲಾಪ ನಡೆಯಬೇಕು, ನಡೆಯಬಾರದು ಎನ್ನುವುದನ್ನು ಸರ್ಕಾರ ತೀರ್ಮಾನ ಮಾಡಬೇಕು. ಒಟ್ಟಾರೆ, ಈ ಸರ್ಕಾರ ಗಂಟು ಮೂಟೆ ಕಟ್ಟುತ್ತದೆ ಎಂದು ಹೇಳಿದರು.
ಹೋಮದ ವಿಚಾರ : ಯಾರಾದರೂ ಒಂದು ಹೋಮ ಮಾಡಿಸಿದರೆ ಅದಕ್ಕೆ ಹತ್ತು ಹೋಮ ನಡೆಸುವವರು ಡಿ. ಕೆ ಶಿವಕುಮಾರ್. ಇವರು ಫಲಿತಾಂಶಕ್ಕೂ ಮುನ್ನವೇ ಸಿಂಪತಿ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಸಿದ್ದರಾಮಯ್ಯ ಸಿಎಂ ಆದಾಗ ಒಂದು ಹಿಂದೂಗಳ ಹತ್ಯೆ ಹಾಗೂ ಬರ ಬರುತ್ತದೆ. ಇವರ ಆಡಳಿತದಲ್ಲಿ ನಿಷ್ಠಾವಂತ ಅಧಿಕಾರಿಗಳಿಗೆ ಉಳಿಗಾಲವಿಲ್ಲ. ಒಂದು ಅವರು ಕೆಲಸ ಬಿಡಬೇಕು, ಇಲ್ಲ ಅವರು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ :ರಾಜ್ಯ ಸರ್ಕಾರದ ಭ್ರಷ್ಟಾಚಾರ ಬಹಿರಂಗ ಮಾಡಿ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿರುವುದು ದುರ್ದೈವ: ಕೆ ಎಸ್ ಈಶ್ವರಪ್ಪ - KS Eshwarappa