ಕರ್ನಾಟಕ

karnataka

ETV Bharat / state

ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಟ್ಟು ನೈತಿಕತೆ ಪ್ರದರ್ಶಿಸಲಿ: ಆರ್. ಅಶೋಕ್ - R ASHOK

ಖರ್ಗೆ ಕುಟುಂಬಕ್ಕೆ ಅಂಬೇಡ್ಕರ್ ಸಂವಿಧಾನ ಅನ್ವಯ ಆಗುವುದಿಲ್ಲವೇ ಎಂದು ವಿಪಕ್ಷ ನಾಯಕ ಆರ್. ​ಅಶೋಕ್​ ಪ್ರಶ್ನಿಸಿದ್ದಾರೆ.

ಆರ್.ಅಶೋಕ್
ಆರ್.ಅಶೋಕ್ (ETV Bharat)

By ETV Bharat Karnataka Team

Published : Dec 29, 2024, 7:47 PM IST

ಬೆಂಗಳೂರು: "ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆಗೆ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಕಾರಣ. ಊರಿಗೆಲ್ಲಾ ಉಪದೇಶ ಮಾಡುವ ಪ್ರಿಯಾಂಕ್ ಖರ್ಗೆ ಮೊದಲು ರಾಜೀನಾಮೆ ಕೊಟ್ಟು ನೈತಿಕತೆ ಪ್ರದರ್ಶನ ಮಾಡಲಿ" ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, "ಖರ್ಗೆ ಕುಟುಂಬಕ್ಕೆ ಅಂಬೇಡ್ಕರ್ ಸಂವಿಧಾನ ಅನ್ವಯ ಆಗುವುದಿಲ್ಲವೇ?. ಪ್ರಿಯಾಂಕ್ ಖರ್ಗೆ ಕಲಬುರಗಿ ನಿಜಾಮನೂ ಅಲ್ಲ, ಅವರ ಅನುಯಾಯಿಗಳು ರಜಾಕಾರರೂ ಅಲ್ಲ. ಗುತ್ತಿಗೆದಾರ ಸಚಿನ್ ಸಾವಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆಯವರ ಆಪ್ತರ ಪಾತ್ರವಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಅವರು ಕೂಡಲೇ ರಾಜೀನಾಮೆ ನೀಡಲಿ" ಎಂದು ಒತ್ತಾಯಿಸಿದ್ದಾರೆ.

"ಈ ಹಿಂದೆ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಾಗ, ಅಂದು ಸಚಿವರಾಗಿದ್ದ ಈಶ್ವರಪ್ಪನವರ ರಾಜೀನಾಮೆ ಕೇಳಲಾಗಿತ್ತು. ಈಗ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಲಿ. ಸಚಿನ್ ಪಾಂಚಾಳ ಅವರು ಡೆತ್​ನೋಟ್​ನಲ್ಲಿ ರಾಜು ಕಪನೂರು ಹೆಸರು ಬರೆದಿಟ್ಟು, ಬಳಿಕ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಂಚನೆ ಹಾಗೂ ಹಣಕ್ಕಾಗಿ ಕೊಲೆ ಬೆದರಿಕೆ ಆರೋಪ ಮಾಡಲಾಗಿದೆ" ಎಂದು ಹೇಳಿದ್ದಾರೆ.

"ಸಚಿನ್ ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಬರೆದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಇದನ್ನು ಗಮನಿಸಿದ ಕುಟುಂಬಸ್ಥರು ಆತಂಕಗೊಂಡು, ಕೂಡಲೇ ಹುಡುಕಿ‌ ಕೊಡುವಂತೆ ಬೀದರ್​ನ ಗಾಂಧಿಗಂಜ್ ಪೊಲೀಸ್ ಠಾಣೆಗೆ ಮನವಿ ಮಾಡಿದ್ದರು. ಆದರೆ ದೂರು ದಾಖಲಿಸುವಲ್ಲಿ ಪೊಲೀಸರು ನಿರ್ಲಕ್ಷ್ಯ ಮಾಡಿದ್ದಾರೆ" ಎಂದು ದೂರಿದ್ದಾರೆ.

"ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು 15 ಲಕ್ಷಕ್ಕೂ ಅಧಿಕ ಹಣ ತೆಗೆದುಕೊಂಡು ಟೆಂಡರ್‌ ನೀಡದೆ ವಂಚನೆ ಮಾಡಿದ್ದು, ಮಾತ್ರವಲ್ಲದೆ 1 ಕೋಟಿ ಹಣ ನೀಡುವಂತೆ ಒತ್ತಡ, ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಡೆತ್​ನೋಟ್​ನಲ್ಲಿ ಉಲ್ಲೇಖವಾಗಿದೆ. ಡೆತ್​ನೋಟ್​ನಲ್ಲಿ ಕಲಬುರಗಿಯ ಮಾಜಿ ಕಾರ್ಪೊರೇಟರ್​ ರವಿ ಕಪನೂರು, ನಂದಕುಮಾರ್ ನಾಗಭುಜಂಗೆ, ಗೋರಖನಾಥ್ ಸೇರಿ 6 ಜನರ ವಿರುದ್ಧ ಜೀವ ಬೆದರಿಕೆ ಆರೋಪ ಮಾಡಲಾಗಿದೆ. ಇಂತಹ ಗೂಂಡಾಗಳನ್ನು ಆಪ್ತರಾಗಿ ಇಟ್ಟುಕೊಂಡ ಸಚಿವರು ಕೂಡ ಇಲ್ಲಿ ಹೊಣೆಗಾರರು" ಎಂದು ಅಶೋಕ್​ ಕಿಡಿಕಾರಿದ್ದಾರೆ.

"ರಾಜು ಕಪನೂರ್, ಖರ್ಗೆ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾನೆ. ಕಲಬುರಗಿ ಮಹಾನಗರ ಪಾಲಿಕೆ ಸದಸ್ಯನೂ ಆಗಿದ್ದ ರಾಜು ಕಪನೂರ್, ಈ ಹಿಂದೆ ಅಕ್ರಮ ಪಿಸ್ತೂಲ್ ಹೊಂದಿರುವ ಆರೋಪದಲ್ಲಿ ಬಂಧಿತನಾಗಿದ್ದ. ಇವೆಲ್ಲ ಗೊತ್ತಿದ್ದರೂ ಸಚಿವ ಪ್ರಿಯಾಂಕ್ ಖರ್ಗೆ ಆಪ್ತರಿಂದ ದೂರವಾಗಿಲ್ಲ. ಇಂತಹ ಗೂಂಡಾ, ಸಚಿವರ ಆಪ್ತ ಎಂದರೆ ನಮ್ಮ ರಾಜ್ಯದಲ್ಲಿ ಗೂಂಡಾಗಳ, ರೌಡಿಗಳ ಸರ್ಕಾರ ನಡೆಯುತ್ತಿದೆ ಎಂದರ್ಥ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಬಿಜೆಪಿ ನಾಯಕರ ಹತ್ಯೆಗೆ ಸುಪಾರಿ ಆರೋಪ: ಸಿಬಿಐ ತನಿಖೆಗೆ ಬಿ.ವೈ. ವಿಜಯೇಂದ್ರ ಆಗ್ರಹ

ABOUT THE AUTHOR

...view details