ಬೆಳಗಾವಿ : ಜನ ಶುದ್ಧವಾದ ನೀರು ಕುಡಿಯಲಿ ಎನ್ನುವ ಉದ್ದೇಶದಿಂದ ಸ್ಮಾರ್ಟ್ ಸಿಟಿ ಯೋಜನೆಯಡಿ ಬೆಳಗಾವಿ ನಗರದಲ್ಲಿ 1.20 ಕೋಟಿ ರೂ. ವೆಚ್ಚದಲ್ಲಿ 12 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಆದರೆ ಕಳೆದ ಮೂರು ವರ್ಷದಿಂದ ಅವು ಸ್ಥಗಿತಗೊಂಡಿವೆ. ಆದ್ರೂ ಕೂಡ ಅಧಿಕಾರಿಗಳು ಇತ್ತ ಗಮನಹರಿಸಿಲ್ಲವೆಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೌದು, ಬೆಳಗಾವಿ ನಗರದಲ್ಲಿ ಮಹಾನಗರ ಪಾಲಿಕೆ ವತಿಯಿಂದ 2 ಮತ್ತು ಸ್ಮಾರ್ಟ್ ಸಿಟಿ ಯೋಜನೆಯಡಿ 12 ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ಇವುಗಳ ಪೈಕಿ ಕೇವಲ ಎರಡು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಬೇಸಿಗೆಯಲ್ಲಿ ಬೆಳಗಾವಿ ಜನರ ದಾಹ ತಣಿಸಬೇಕಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳು ಸಂಪೂರ್ಣ ಬಂದ್ ಆಗಿವೆ. ಅದರಲ್ಲೂ ನಿತ್ಯ ಸಾವಿರಾರು ರೋಗಿಗಳು ಬರುವ ಜಿಲ್ಲಾಸ್ಪತ್ರೆ ಆವರಣದಲ್ಲಿನ ಘಟಕ ಇದ್ದೂ ಇಲ್ಲದಂತಾಗಿದೆ. ಅವು ಧೂಳು ತಿನ್ನುತ್ತಿದ್ದು, ಗ್ಲಾಸ್ಗಳು ಒಡೆದು ಹೋಗಿವೆ. ಶುದ್ಧ ನೀರಿಗಾಗಿ ಜನ ಹೆಚ್ಚಿಗೆ ದುಡ್ಡು ಕೊಟ್ಟು ನೀರಿನ ಬಾಟಲ್ ಖರೀದಿಸುವ ಸ್ಥಿತಿಯಿದೆ.
ಜಿಲ್ಲಾಧಿಕಾರಿ ಕಚೇರಿ ಆವರಣ, ಜಿಲ್ಲಾಸ್ಪತ್ರೆ ಆವರಣ, ಧರ್ಮವೀರ ಸಂಭಾಜಿ ವೃತ್ತ, ಚವ್ಹಾಟಗಲ್ಲಿ, ಶ್ರೀನಗರ ಸೇರಿ ನಗರದ ವಿವಿದೆಡೆ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿವೆ. ನೀರು ಬರುತ್ತದೆ ಎಂದು ನಾಣ್ಯ ಹಾಕಿದರೂ, ನೀರಿಲ್ಲದ್ದರಿಂದ ಜನ ಬರೀಗೈಯಲ್ಲಿ ವಾಪಸಾಗುವುದು ಸಾಮಾನ್ಯವಾಗಿದೆ. ಒಂದೊಂದು ಘಟಕ ನಿರ್ಮಿಸಲು 8 ರಿಂದ 10 ಲಕ್ಷ ರೂ. ಖರ್ಚಾಗಿದೆ. ಲಕ್ಷ ಲಕ್ಷ ದುಡ್ಡು ಖರ್ಚು ಮಾಡಿ ನಿರ್ಮಿಸಿದರೂ ಮಹಾನಗರ ಪಾಲಿಕೆ ಮತ್ತು ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದ ಇವು ಜನರ ಉಪಯೋಗಕ್ಕೆ ಬರುತ್ತಿಲ್ಲ. ಅಲ್ಲದೇ ಡಿಸ್ಟಲರಿ ಫ್ಯಾಕ್ಟರಿಗಳ ಮಾಫಿಯಾದಿಂದ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿಗೆ ಅಧಿಕಾರಿಗಳು ಮುಂದಾಗುತ್ತಿಲ್ಲವಾ? ಎಂಬ ಅನುಮಾನ ಮೂಡಿದೆ.