ಹುಬ್ಬಳ್ಳಿ:ಕಳ್ಳತನ ಪ್ರಕರಣದ ತನ್ನ ಸಹಚರರನ್ನು ತೋರಿಸುತ್ತೇನೆ ಎಂದು ಕರೆದುಕೊಂಡು ಹೋದಾಗ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ ಕಳ್ಳತನದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ತಾರಿಹಾಳ ಬಳಿ ಸೋಮವಾರ ನಡೆದಿದೆ.
ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನೋದ್ ಬೆಂಡಿಗೇರಿ ಎಂಬಾತನನ್ನು ಭಾನುವಾರ ಬಂಧಿಸಲಾಗಿತ್ತು. ಇಂದು ಇತರ ಆರೋಪಿಗಳನ್ನು ತಾರಿಹಾಳ ಸೇತುವೆಯ ಬಳಿ ತೋರಿಸಲು ತನಿಖಾ ತಂಡವನ್ನು ಕರೆದುಕೊಂಡು ಹೋದಾಗ ಆರೋಪಿ ವಿನೋದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾನೆ. ಈ ವೇಳೆ ಬೆಂಡಿಗೇರಿ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಜಯಶ್ರೀ ಚಲವಾದಿ ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರು ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಕೆಎಂಸಿಗೆ ಭೇಟಿ ನೀಡಿದ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಸಿಬ್ಬಂದಿ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದರು. "ಹುಬ್ಬಳ್ಳಿ - ಧಾರವಾಡ ಕಮಿಷನರೇಟ್ ವ್ಯಾಪ್ತಿಯ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಬೆಳಗಿನಜಾವ ಸುಮಾರು ಮೂರು ಗಂಟೆಗೆ ಅಪರಾಧ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಬಂದ ಮೂರರಿಂದ ನಾಲ್ಕು ಜನ ಹೊರವಲಯದಲ್ಲಿದ್ದಂತಹ ಟ್ರಕ್ನ್ನು ಅಡ್ಡಗಟ್ಟಿ ನಿಲ್ಲಿಸಿ ಆ ಚಾಲಕನಿಂದ ಮೊಬೈಲ್, 20 ಸಾವಿರ ಹಣವನ್ನು ದರೋಡೆ ಮಾಡಿ ಪರಾರಿಯಾಗಿದ್ದರು. ಈ ದರೋಡೆ ಟೀಂ ನಲ್ಲಿ 7 ರಿಂದ 8 ಜನರಿದ್ದಾರೆ. ಅವರಲ್ಲಿ ಮೂವರನ್ನು ನಮ್ಮ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಮೂವರು ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಆರೋಪಿಗಳಾಗಿದ್ದಾರೆ" ಎಂದರು.