ಬೆಂಗಳೂರು:ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ, ಹಿಂಸಾಚಾರ ಖಂಡಿಸಿ ಹಿಂದೂ ಹಿತರಕ್ಷಣಾ ವೇದಿಕೆ ವತಿಯಿಂದ ನಗರದ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಬಾಂಗ್ಲಾದೇಶ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿ, ಬಾಂಗ್ಲಾದೇಶದ ರಾಷ್ಟ್ರಧ್ವಜ ಮತ್ತು ಪ್ರಧಾನಿ ಮಹಮ್ಮದ್ ಯೂನಸ್ ಭಾವಚಿತ್ರವನ್ನು ಬೂಟಿನಲ್ಲಿ ತುಳಿದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಬೇಲಿ ಮಠದ ಶಿವರುದ್ರ ಮಹಾಸ್ವಾಮಿ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ತಡೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಶಾಂತಿ, ಸೌಹಾರ್ದತೆ ನೆಲೆಸಲು ವಿಶ್ವಸಂಸ್ಥೆಗೆ ಪತ್ರ ಬರೆಯಬೇಕು. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸೆ, ದೌರ್ಜನ್ಯ ಖಂಡನೀಯ. ಹಿಂದೂ ಸಮಾಜ ಜಾಗೃತರಾಗಿ ಸಂಘಟಿತರಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಮಗೂ ಇಂತಹ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದರು.
ಪ್ರಜಾಪ್ರಭುತ್ತ ಮತ್ತು ರಾಜಪ್ರಭುತ್ವಕ್ಕೆ ವ್ಯತ್ಯಾಸವಿದೆ. ಒಂದು ರಾಜ್ಯವನ್ನು ಕಾಪಾಡಬೇಕಾದರೆ ರಾಜರು ಮತ್ತು ಸೈನ್ಯ ಎಚ್ಚರವಿದ್ದರೆ ಸಾಕು. ಆದರೆ ಪ್ರಜಾಪ್ರಭುತ್ವದಲ್ಲಿ ನಾವೆಲ್ಲರೂ ರಾಜರು, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರೂ ಅಧಿಕಾರಿಗಳು, ಈ ಲೆಕ್ಕದಲ್ಲಿ ನಾವೆಲ್ಲ ನಮ್ಮ ಬಹುಮತವನ್ನು ಸರ್ಕಾರಕ್ಕೆ ತಲುಪಿಸಿ, ಸರ್ಕಾರದ ಹಿಂದೆ ಬೆಂಬಲವಾಗಿ ನಿಂತು ಇಡೀ ವಿಶ್ವದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ದರ್ಪ, ದೌರ್ಜನ್ಯಗಳನ್ನು ವಿರೋಧಿಸುವತ್ತ ನಾವು ಒಂದಾಗಬೇಕಿದೆ ಎಂದು ಕರೆ ನೀಡಿದರು.
ಕ್ಯಾಥೋಲಿಕ್ ಕ್ರಿಶ್ಚಿಯನ್ ಅಸೋಸಿಯೇಶನ್ ರಾಜ್ಯ ಸಂಯೋಜಕ ಶಾಂತಕುಮಾರ್ ಕನಡಿ ಮಾತನಾಡಿ, ಮಾನವೀಯ ಹಾಗೂ ನೈತಿಕ ಮೌಲ್ಯಗಳಿಗೆ ಧಕ್ಕೆಯಂಟಾದಾಗ ಎಲ್ಲ ಹಿಂದೂಗಳು ಒಂದುಗೂಡಬೇಕು. ಬಾಂಗ್ಲಾ ದೇಶದಲ್ಲಿ ಜನಾಂಗೀಯ ಹಿಂಸೆ ಮಿತಿ ಮೀರಿದ್ದು, ಆ ನೆಲೆಯಲ್ಲಿ ಶಾಂತಿಗೆ ಭಂಗ ತರುವ ಕೆಲಸವಾಗುತ್ತಿದೆ. ಆದರೆ, ಇಲ್ಲಿನ ಮುಸಲ್ಮಾನ ಬಾಂಧವರು ಇಂತಹ ವಿಚಾರದಲ್ಲಿ ಮೌನವಹಿಸಿರುವುದು ಸರಿಯಲ್ಲ ಎಂದು ಖಂಡನೆ ವ್ಯಕ್ತಪಡಿಸಿದರು.
ಸಾಮಾಜಿಕ ಕಾರ್ಯಕರ್ತ ಗಿರಿಧರ್ ಉಪಾಧ್ಯಾಯ ಮಾತನಾಡಿ, ಬೆಂಗಳೂರಿನಲ್ಲಿಯೂ ಅಕ್ರಮ ಬಾಂಗ್ಲಾ ವಲಸಿಗರಿದ್ದಾರೆ. ಅವರನ್ನು ಪತ್ತೆ ಹಚ್ಚಿ, ಹೊರಗಟ್ಟುವ ಕೆಲಸವಾಗಬೇಕು. ಇಲ್ಲವಾದಲ್ಲಿ ಬಾಂಗ್ಲಾದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಲಿದೆ. ಬಾಂಗ್ಲಾದಲ್ಲಿ 1,400 ಹಿಂದೂ ಶಿಲ್ಪಗಳು, ದೇವಾಲಯಗಳನ್ನು ನಾಶಪಡಿಸಲಾಗಿದ್ದು, ಸಾವಿರಕ್ಕೂ ಹೆಚ್ಚು ಹಿಂದೂಗಳ ಮೇಲೆ ಹಲ್ಲೆ, ದೌರ್ಜನ್ಯ ಎಸಗಲಾಗಿದೆ. ನರಮೇಧ ನಡೆಯುತ್ತಿದ್ದರೂ, ಕೇಂದ್ರ ಸರ್ಕಾರ ರಕ್ಷಣೆಗೆ ಮುಂದಾಗಿಲ್ಲ. ಈ ಕುರಿತು ಹಿಂದೂಗಳು ಎಚ್ಚರಗೊಳ್ಳಬೇಕು ಎಂದು ಎಚ್ಚರಿಸಿದರು.