ಮೈಸೂರು:ಮಹಿಷ ದಸರಾದ ಹಿನ್ನೆಲೆ ಸೆಪ್ಟೆಂಬರ್ 29 ರಂದು ಬೆಳಗ್ಗೆ 8:30 ಗಂಟೆಗೆ ಚಾಮುಂಡಿಬೆಟ್ಟದಲ್ಲಿನ ಮಹಿಷಾಸುರನ ಪ್ರತಿಮೆಗೆ ಪುಷ್ಪಾರ್ಚನೆ ಕಾರ್ಯಕ್ರಮ ಮತ್ತು ಬೆಳಗ್ಗೆ 10:30 ಗಂಟೆಗೆ ನಗರದ ಪುರ ಭವನದ ಹೊರಾವರಣದಲ್ಲಿ ಮಹಿಷ ಮಂಡಲೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಾನೂನು ಮತ್ತು ಸುವ್ಯಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಮೈಸೂರು ನಗರದ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿನ ಚಾಮುಂಡಿಬೆಟ್ಟ ಸೇರಿದಂತೆ (ಟೌನ್ ಹಾಲ್ ಒಳ ಆವರಣ ಹೊರತುಪಡಿಸಿ) ಸೆ.28 ರ ಮಧ್ಯರಾತ್ರಿ 12 ಗಂಟೆಯಿಂದ ಸೆ. 30ರ ಬೆಳಗ್ಗೆ 06 ಗಂಟೆಯವರೆಗೆ ಮಹಿಷ ಮಂಡಲೋತ್ಸವ / ಮಹಿಷ ದಸರಾದ ಪರ - ವಿರೋಧವಾಗಿ ನಡೆಸುವ ಈ ಕೆಳಕಂಡವುಗಳನ್ನು ನಿಷೇಧಿಸಿ, ಕಲಂ 163 ಬಿ.ಎನ್.ಎಸ್.ಎಸ್ ಕಾಯ್ದೆ-2023 ರೀತ್ಯ ನಿಷೇಧಾಜ್ಞೆಯನ್ನು ಹೊರಡಿಸಲಾಗಿದೆ.
ಈ ಸಂದರ್ಭದಲ್ಲಿ ಯಾವುದೇ ಮೆರವಣಿಗೆ, ಪ್ರತಿಭಟನೆ ಬೈಕ್ ರ್‍ಯಾಲಿ ನಡೆಸುವುದು, ಪರ - ವಿರೋಧ ಘೋಷಣೆ ಕೂಗುವುದು, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಆಚರಿಸುವುದು, 05 ಜನರಿಗಿಂತ ಹೆಚ್ಚಿನ ಜನ ಗುಂಪು ಸೇರುವುದು, ಯಾವುದೇ ಬಹಿರಂಗ ಸಭೆ ಸಮಾರಂಭಗಳನ್ನು ನಡೆಸುವುದು ಹಾಗೂ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಪ್ರಚಾರ, ದ್ವನಿವರ್ಧಕ ಬಳಸುವುದು, ಫ್ಲೆಕ್ಸ್, ಬ್ಯಾನರ್ ಅಳವಡಿಸುವುದು, ಕರಪತ್ರಗಳನ್ನು ಹಂಚುವುದು, ಮೂರ್ತಿ ಮೆರವಣಿಗೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿರುತ್ತದೆ.