ಕಾರವಾರ(ಉತ್ತರ ಕನ್ನಡ):ಮರಳು ವಿಚಾರ ಸದ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಜನರು ಮತ್ತೆ ಪರದಾಡುವಂತೆ ಮಾಡಿದೆ. ಕಳೆದೊಂದು ವರ್ಷದಿಂದ ಮರಳು ಸರಬರಾಜು ಬಂದ್ ಆಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ತೊಂದರೆಗೆ ಸಿಲುಕಿದ್ದಾರೆ. ಈವರೆಗೂ ಮರಳು ಪ್ರಾರಂಭಕ್ಕೆ ಯಾವುದೇ ಪ್ರಯತ್ನ ನಡೆಯದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಈ ಹಿಂದೆ ಶರಾವತಿ, ಕಾಳಿ, ಅಘನಾಶಿನಿ ಹಾಗೂ ಗಂಗಾವಳಿ ನದಿಯಲ್ಲಿ ಸುಮಾರು ನೂರಕ್ಕೂ ಅಧಿಕ ಲೀಸ್ದಾರರು ಮರಳು ತೆಗೆಯುತ್ತಿದ್ದರಿಂದ ಜನರಿಗೆ ಮರಳಿನ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಮೂರು ವರ್ಷದ ಹಿಂದೆ ಉಡುಪಿಯ ವ್ಯಕ್ತಿಯೊಬ್ಬರು ಕರಾವಳಿಯ ಮರಳುಗಾರಿಕೆ ವಿರುದ್ಧ ರಾಷ್ಟ್ರೀಯ ಹಸಿರುಪೀಠದ ಮೊರೆ ಹೋಗಿದ್ದರು. ಇದರಿಂದ ಸುಮಾರು ಎರಡು ವರ್ಷಕ್ಕೂ ಅಧಿಕ ಸಮಯ ಮರಳಿಲ್ಲದೇ ಜನರು ಪರದಾಡಿದ್ದರು. ಬಳಿಕ, ಕಳೆದ ವರ್ಷ ಮರಳುಗಾರಿಕೆಗಿದ್ದ ತೊಡಕು ಹೋಗಲಾಡಿಸಿ ಅವಕಾಶ ಕೊಡಲಾಗಿತ್ತು. ಆದರೀಗ ಮತ್ತೆ ಹೊನ್ನಾವರದ ವ್ಯಕ್ತಿಯೋರ್ವರು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ (ಎನ್ಜಿಟಿ) ಮೆಟ್ಟಿಲೇರಿದ್ದು, ಮರಳುಗಾರಿಕೆ ಸ್ಥಗಿತ ಮಾಡಲಾಗಿದೆ.
ಇದರಿಂದ, ಸಣ್ಣಪುಟ್ಟ ಮನೆ ಕಟ್ಟುವವರಿಗೂ ಮರಳಿಲ್ಲದೇ ಪರಿತಪಿಸುವಂತಾಗಿದೆ. ಸದ್ಯ ಮಳೆಗಾಲ ಮುಗಿದಿರುವುದರಿಂದ ಮನೆ ನಿರ್ಮಾಣ ಕಾರ್ಯಗಳು ಚುರುಕುಗೊಂಡಿದೆ. ಪ್ಲಾಸ್ಟ್ರಿಂಗ್ ಸೇರಿದಂತೆ ಎಲ್ಲಾ ಕೆಲಸಕ್ಕೆ ಮರಳು ಅನಿವಾರ್ಯವಾಗಿದ್ದು, ಅದಕ್ಕಾಗಿ ಜನರು ಹುಡುಕಾಡುವ ಪರಿಸ್ಥಿತಿ ಇದೆ.
ಈ ಹಿಂದೆ ಮೀಟರ್ ಮರಳನ್ನು 1 ಸಾವಿರದಿಂದ 1,200 ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು. ಸದ್ಯ ಮರಳು ಬಂದ್ ಇರುವ ಹಿನ್ನೆಲೆಯಲ್ಲಿ, ಕದ್ದುಮುಚ್ಚಿ ಮರಳು ತೆಗೆದುಕೊಳ್ಳುವಂತಾಗಿದ್ದು, ಅದು ಮೀಟರ್ ಮರಳಿಗೆ 2 ಸಾವಿರದ ಗಡಿ ದಾಟಿದೆ. ಇನ್ನೊಂದೆಡೆ, ನದಿ ದಡದಲ್ಲಿದ್ದ ಮರಳನ್ನು ತೆಗೆದು ಸಣ್ಣಪುಟ್ಟ ಮನೆ ಕಟ್ಟುವವರಿಗೆ ಕೊಡುವ ಕೆಲಸವನ್ನು ಕೆಲವರು ಮಾಡುತ್ತಿದ್ದರು. ಆದರೆ ಅದಕ್ಕೂ ಪೊಲೀಸರು ಕಡಿವಾಣ ಹಾಕಿದ್ದು, ಜನರಿಗೆ ಸಂಕಷ್ಟ ಎದುರಾಗಿದೆ.