ಕರ್ನಾಟಕ

karnataka

ETV Bharat / state

ಸುರಕ್ಷತಾ ಷರತ್ತುಗಳ ಪಾಲನೆಗೆ ಖಾಸಗಿ ಶಾಲೆಗಳಿಗೆ ಮುಂದಿನ ಶೈಕ್ಷಣಿಕ ವರ್ಷದವರೆಗೂ ಅವಕಾಶ

ಖಾಸಗಿ ಶಾಲೆಗಳಿಗೆ ಕಡ್ಡಾಯಗೊಳಿಸಿರುವ ಷರತ್ತುಗಳು ಸರ್ಕಾರಿ ಶಾಲೆಗಳಿಗೂ ಅನ್ವಯವಾಗುತ್ತದೆ ಎಂದು ಹೈಕೋರ್ಟ್ ತಿಳಿಸಿದೆ.

ಹೈಕೋರ್ಟ್
ಹೈಕೋರ್ಟ್ (ETV Bharat)

By ETV Bharat Karnataka Team

Published : Dec 2, 2024, 10:51 PM IST

ಬೆಂಗಳೂರು: ಮಾನ್ಯತೆ ಪಡೆದುಕೊಳ್ಳಲು ಹಾಗೂ ಮಾನ್ಯತೆ ನವೀಕರಣ ಮಾಡಿಕೊಳ್ಳಲು ಕಟ್ಟಡ ಸುರಕ್ಷತೆ ಮತ್ತು ಅಗ್ನಿ ಸುರಕ್ಷತಾ ಪ್ರಮಾಣಪತ್ರಗಳ ಕಡ್ಡಾಯವಾಗಿ ಪಡೆದುಕೊಳ್ಳುವುದು ಸೇರಿದಂತೆ ಕೆಲವು ಷರತ್ತುಗಳ ಪಾಲನೆಗೆ, ಖಾಸಗಿ ಅನುದಾನರಹಿತ ಶಾಲೆಗಳಿಗೆ ಮುಂದಿನ ಶೈಕ್ಷಣಿಕ ವರ್ಷದವರೆಗೆ ಕಾಲಾವಕಾಶ ನೀಡಿ ಹೈಕೋರ್ಟ್ ಆದೇಶಿಸಿದೆ.

ಶಾಲೆಗಳಿಗೆ ಮಾನ್ಯತೆ ಪಡೆದುಕೊಳ್ಳಲು ಅಥವಾ ಮಾನ್ಯತೆ ನವೀಕರಣಕ್ಕೆೆ ಕಟ್ಟಡ ಸುರಕ್ಷತೆ ಹಾಗೂ ಅಗ್ನಿ ಸುರಕ್ಷತೆ ಪ್ರಮಾಣಪತ್ರ ಕಡ್ಡಾಯಗೊಳಿಸಿ 2022ರ ಜೂನ್ 6ರಂದು ಶಿಕ್ಷಣ ಇಲಾಖೆ ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಿ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ಅವರ್ಸ್ ಸ್ಕೂಲ್) ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.

ಖಾಸಗಿ ಶಾಲೆಗಳಿಗೆ ಕಡ್ಡಾಯಗೊಳಿಸಿರುವ ಷರತ್ತುಗಳು ಸರ್ಕಾರಿ ಶಾಲೆಗಳಿಗೂ ಅನ್ವಯವಾಗುತ್ತದೆ. ಕಟ್ಟಡ ಸುರಕ್ಷತೆ ಮತ್ತು ಅಗ್ನಿ ಸುರಕ್ಷತೆಯ ಕ್ರಮಗಳನ್ನು ಖಾಸಗಿ ಶಾಲೆಗಳಲ್ಲಿ ಬಯಸುವ ಸರ್ಕಾರ, ಅದನ್ನು ತನ್ನ ಅಧೀನದಲ್ಲಿರುವ ಸರ್ಕಾರಿ ಶಾಲೆಗಳಲ್ಲೂ ಬಯಸಬೇಕು. ಈ ವಿಚಾರದಲ್ಲಿ ಸರ್ಕಾರಿ ಶಾಲೆಗಳಿಗೆ ವಿನಾಯಿತಿ ಸಲ್ಲದು. ಶಾಲೆಗಳಲ್ಲಿ ಕಟ್ಟಡ ಸುರಕ್ಷತೆ, ಅಗ್ನಿ ಸುರಕ್ಷತೆ ಸೇರಿದಂತೆ ಉಳಿದ ಷರತ್ತುಗಳ ಪಾಲನೆ, ಕ್ರಮಗಳ ಅಳವಡಿಕೆಯಲ್ಲಿ ಸರ್ಕಾರ ‘ಮಾದರಿ ನಾಗರಿಕ’ನಾಗಿ ನಡೆದುಕೊಳ್ಳಬೇಕು ಎಂದು ತಿಳಿಸಿದೆ.

ಸರ್ಕಾರದ ಸುತ್ತೋಲೆಯಲ್ಲಿ ಹೊಸ ಷರತ್ತುಗಳನ್ನು ವಿಧಿಸಲಾಗಿಲ್ಲ. ಸುತ್ತೋಲೆಯಲ್ಲಿರುವುದು ಹೊಸ ನಿಯಮಗಳೂ ಅಲ್ಲ. ಆದರೆ, ಅವುಗಳನ್ನು ಪಾಲಿಸಲು ಅಥವಾ ಅಳವಡಿಸಿಕೊಳ್ಳಲು ಕಾಲಾವಕಾಶಬೇಕು. ಖಾಸಗಿ ಶಾಲೆಗಳು ಶಿಕ್ಷಣ ನೀಡುವಂತೆ ಉದಾತ್ತ ಸೇವೆ ಸಲ್ಲಿಸುತ್ತಿರುವುದರಿಂದ ಮಾನವೀಯ ಆಧಾರದಲ್ಲಿ ಪರಿಗಣಿಸಬೇಕು. ಮುಖ್ಯವಾಗಿ, ಇದರಲ್ಲಿ ಆರ್ಥಿಕ ವಿಚಾರ ಒಳಗೊಂಡಿರುವುದರಿಂದ ಮಾನ್ಯತೆ ಅಥವಾ ಮಾನ್ಯತೆ ನವೀಕರಣಕ್ಕೆ ಕಟ್ಟಡ ಸುರಕ್ಷತೆ, ಅಗ್ನಿ ಸುರಕ್ಷತೆ ಪ್ರಮಾಣ ಪತ್ರ ಪಡೆದುಕೊಳ್ಳುವುದು ಸೇರಿದಂತೆ ಕೆಲವು ಕ್ರಮಗಳನ್ನು ಅಳವಡಿಸಿಕೊಳ್ಳಲು ಮುಂದಿನ ಶೈಕ್ಷಣಿಕ ವರ್ಷ (2025-26)ರವರೆಗೆ ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಕಾಲಾವಕಾಶ ನೀಡುವಂತೆ ರಾಜ್ಯ ಸರ್ಕಾರಕ್ಕೆೆ ನಿರ್ದೇಶನ ನೀಡಿ, ಅರ್ಜಿಯನ್ನು ಇತ್ಯರ್ಥಪಡಿಸಿತು.

ಇದನ್ನೂ ಓದಿ:ಬಿಎಸ್​ವೈ ವಿರುದ್ಧದ ಪೋಕ್ಸೋ ಪ್ರಕರಣ: ಶುಕ್ರವಾರಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್

ABOUT THE AUTHOR

...view details