ಹಾಸನ: ಜಿಲ್ಲೆಯಲ್ಲಿ ದಿನದಿನಕ್ಕೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದೆ. ವರ್ಷದ ಮೊದಲ ವಾರವೇ ಕಾಡಾನೆಯೊಂದು ವಯೋವೃದ್ದನನ್ನು ಬಲಿ ತೆಗೆದುಕೊಂಡಿತ್ತು. ಇದೀಗ ಕಾಡಾನೆಗಳ ಬದಲು ಕಾಟಿಗಳು(ಕಾಡುಕೋಣ) ನಾಡಿಗೆ ನುಗ್ಗುತ್ತಿವೆ.
ಸಕಲೇಶಪುರ ತಾಲೂಕಿನ ದೇವರುಂದ ಗ್ರಾಮಕ್ಕೆ ಕಾಡುಕೋಣ ಬಂದು ಅಡ್ಡಾದಿಡ್ಡಿ ಓಡಾಡಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಠಿಸಿತು. ದೇವರುಂದ ಖಾಸಗಿ ಹೋಂ ಸ್ಟೇ ಸಮೀಪ ಕಾಡುಕೋಣ ಓಡಾಡುವುದನ್ನು ಗಮನಿಸಿದ ಸ್ಥಳೀಯರು ಪಟಾಕಿ ಹಚ್ಚಿ ಕಾಡಿಗಟ್ಟಲು ಪ್ರಯತ್ನಿಸಿದರು. ಆದರೆ, ಅದು ಖಾಸಗಿ ಹೋಂ ಸ್ಟೇ ಬಳಿಯೇ ಕೆಲಕಾಲ ಓಡಾಡುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು, ಕಾಡುಕೋಣಕ್ಕೆ ದೃಷ್ಟಿಹೀನವಾಗಿರುವುದನ್ನು ಮನಗಂಡಿದ್ದಾರೆ. ಕೂಡಲೇ ಈ ವಿಚಾರವನ್ನು ಅರಣ್ಯಾಧಿಕಾರಿಗಳ ಗಮನಕ್ಕೂ ತಂದಿದ್ದು, ಸೆರೆಹಿಡಿದು ಕಣ್ಣಿಗೆ ಚಿಕಿತ್ಸೆ ನೀಡುವಂತೆ ಮನವಿ ಮಾಡಿದ್ದಾರೆ.
ಸ್ಥಳೀಯ ಪತ್ರಕರ್ತ ಸುಧೀರ್ ಮಾತನಾಡಿ, "ಇಂದು ಬೆಳಗ್ಗೆ ನಮ್ಮ ಮನೆಯ ನೆರೆಯ ಸ್ನೇಹಿತ ಮಂಜು ಅವರ ಹೋಂ ಸ್ಟೇ ಸಮೀಪ ಕಾಟಿ ಓಡಾಡುತ್ತಿದ್ದ ದೃಶ್ಯವನ್ನು ಪ್ರವಾಸಿಗರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿಯುತ್ತಿದ್ದರು. ಓಡಿಸಲು ಪಟಾಕಿ ಸಿಡಿಸಿದಾಗ, ಅದು ಅತ್ತಿತ್ತ ಓಡಾಡಿದೆ. ನಂತರ ಅದಕ್ಕೆ ದೃಷ್ಟಿಹೀನವಾಗಿರುವುದು ಗೊತ್ತಾಯಿತು. ಈ ವಿಚಾರವನ್ನು ಸ್ಥಳೀಯ ವಲಯ ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಶೀಘ್ರವೇ ಸೆರೆಹಿಡಿದು ಚಿಕಿತ್ಸೆ ಕೊಡುವ ಭರವಸೆ ಕೊಟ್ಟಿದ್ದಾರೆ. ವನ್ಯಜೀವಿಗಳಿಗೂ ನಮ್ಮಂತೆ ಬದುಕುವ ಸ್ವಾತಂತ್ರ್ಯವಿದೆ. ಮೂಕಪ್ರಾಣಿಗಳ ವೇದನೆ ನಮಗೂ ಅರ್ಥವಾಗುತ್ತದೆ. ಶೀಘ್ರದಲ್ಲಿಯೇ ಅದಕ್ಕೆ ಚಿಕಿತ್ಸೆ ದೊರೆಯಲಿ" ಎಂದು ಹೇಳಿದರು.
ಇದನ್ನೂ ಓದಿ: ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಕಾಡೆಮ್ಮೆ, ಕಾಡಾನೆ ಸಾವು - BISON AND WILD ELEPHANT DIED