ಬೆಂಗಳೂರು : ಕಬ್ಬನ್ ಪಾರ್ಕ್‌ನಲ್ಲಿ 20 ಜನರನ್ನು ಮೀರಿದ ಯಾವುದೇ ಸಭೆಗೆ ತೋಟಗಾರಿಕಾ ಇಲಾಖೆಯ ಪೂರ್ವಾನುಮತಿಯ ಅಗತ್ಯವಿದೆ ಎಂದು ಕಬ್ಬನ್ ಪಾರ್ಕ್ ಆಡಳಿತ ಮಂಡಳಿ ಹೇಳಿದೆ.
ಕಬ್ಬನ್ ಪಾರ್ಕ್ ಸಂರಕ್ಷಣಾ ಸಮಿತಿಯಲ್ಲಿ ನಿರ್ಧರಿಸಲಾದ ಕಬ್ಬನ್ ಪಾರ್ಕ್ ಮಾರ್ಗಸೂಚಿಗಳು ಮತ್ತು ನಿಯಮಗಳ ಪ್ರಕಾರ 20 ಜನರನ್ನು ಮೀರಿದ ಯಾವುದೇ ಸಭೆಗೆ ತೋಟಗಾರಿಕಾ ಇಲಾಖೆಯ ಪೂರ್ವಾನುಮತಿ ಅಗತ್ಯವಿದೆ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಡಿಸೆಂಬರ್ 21 (ಶನಿವಾರ) ಕಬ್ಬನ್ ರೀಡ್ಸ್ ಎಂಬ ಸಂಸ್ಥೆಯು ಕಬ್ಬನ್ ಪಾರ್ಕ್‌ನಲ್ಲಿ ರಹಸ್ಯ ಸಾಂಟಾ ಚಟುವಟಿಕೆಗಾಗಿ 500 ರಿಂದ 600ಕ್ಕೂ ಹೆಚ್ಚು ಜನರನ್ನು ಸೇರಿಸಿತ್ತು. ಸಾಕಷ್ಟು ಉಡುಗೊರೆ ಪ್ಯಾಕ್‌ಗಳನ್ನೂ ಕೂಡ ಪಾರ್ಕ್ನ ಒಳಗೆ ತರಲಾಗಿತ್ತು. ಮಾರ್ಗಸೂಚಿಯನ್ನು ಸ್ಪಷ್ಟವಾಗಿ ಉಲ್ಲಂಘಿಸುವ ಕಾರ್ಯಕ್ರಮ ಇದಾಗಿತ್ತು. ಇದರಿಂದ ವಾಕಿಂಗ್ ಮಾಡುವವರಿಗೆ/ಸಂದರ್ಶಕರಿಗೆ ತೊಂದರೆ ಉಂಟಾಗಿತ್ತು. ಉದ್ಯಾನವನದಲ್ಲಿ ಉತ್ತಮವಾದ ಹುಲ್ಲುಹಾಸುಗಳನ್ನು ಬೇಕಾಬಿಟ್ಟಿಯಾಗಿ ತುಳಿಯಲಾಗಿತ್ತು. ಇದನ್ನು ತಕ್ಷಣವೇ ಸಂಘಟಕರಿಗೆ ತಿಳಿಸಿದಾಗ ಕಾರ್ಯಕ್ರಮವನ್ನು ತಕ್ಷಣ ಸ್ಥಗಿತಗೊಳಿಸಲಾಗಿತ್ತು ಎಂದು ಮಾಹಿತಿ ನೀಡಿದೆ.
20 ಕ್ಕಿಂತ ಹೆಚ್ಚು ಜನರು ಭಾಗವಹಿಸುವ ಯಾವುದೇ ಕಾರ್ಯಕ್ರಮಕ್ಕೆ ತೋಟಗಾರಿಕಾ ಇಲಾಖೆಯ ಪೂರ್ವಾನುಮತಿ ಅಗತ್ಯವಿದೆ ಎಂದು ಈ ಮೊದಲು ಕೂಡ ಆದೇಶ ಹೊರಡಿಸಲಾಗಿತ್ತು. ಕೆಲವು ಸಂದರ್ಭಗಳಲ್ಲಿ ಪೊಲೀಸರ ಅನುಮತಿಯ ಅಗತ್ಯವನ್ನು ಕೂಡ ಒತ್ತಿಹೇಳಲಾಗಿತ್ತು. ಮಾರ್ಗಸೂಚಿಯನ್ನು ಉಲ್ಲಂಘಿಸಿದರೆ ದಂಡವನ್ನು ವಿಧಿಸುವ ಅಧಿಕಾರ ಆಡಳಿತ ಮಂಡಳಿಗೆ ಇದೆ ಎಂದು ಕಬ್ಬನ್ ಉದ್ಯಾನವನದ ಡೆಪ್ಯುಟಿ ಡೈರೆಕ್ಟರ್ ಜಿ. ಕುಸುಮ ಹೇಳಿದ್ದಾರೆ.