ಬೆಳಗಾವಿ: ಎಲ್ಲಾ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಒಟ್ಟಾಗಿ ಸೇರಿಸಿ ಸರಾಸರಿ ತೆಗೆದು ನೋಡಿದ್ರೂ ಕನಿಷ್ಠ ಪಕ್ಷ ಎನ್ಡಿಎ 340-350 ಸ್ಥಾನ ಗಳಿಸಲಿದೆ. ಮೋದಿಯವರು ಕರೆ ಕೊಟ್ಟಿದ್ದ ಚಾರ್ ಸೋ ಪಾರ್ ಸಮೀಪ ಇದ್ದು, ಅದನ್ನೂ ಪಾರು ಮಾಡಿ ಎನ್ಡಿಎ ಮುಂದಕ್ಕೆ ಹೋದರು ಅಚ್ಚರಿ ಪಡಬೇಕಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
ಖಾಸಗಿ ಕಾರ್ಯಕ್ರಮ ಹಿನ್ನೆಲೆ ಬೆಳಗಾವಿಗೆ ಆಗಮಿಸಿದ್ದ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಎಕ್ಸಿಟ್ ಪೋಲ್ ಬರುವುದಕ್ಕಿಂತ ಮೊದಲೂ ನಾವು ಮತ್ತು ನಮ್ಮ ರಾಷ್ಟ್ರೀಯ ನಾಯಕರು, ನರೇಂದ್ರ ಮೋದಿಯವರ ನೇತೃತ್ವದಲ್ಲಿ ಪ್ರಚಂಡ ಬಹುಮತದಿಂದ ಗೆಲ್ಲುತ್ತೇವೆ ಎಂದು ಎಲ್ಲಾ ಕಡೆ ವಿಶ್ವಾಸ ವ್ಯಕ್ತಪಡಿಸಿದ್ದೇವು. ಈಗ ಎಕ್ಸಿಟ್ ಪೋಲ್ ಫಲಿತಾಂಶ ಬಂದಿದೆ. ಇದರ ಆಧಾರದ ಮೇಲೆ ಮೋದಿಯವರ ನೇತೃತ್ವದಲ್ಲಿ ಎನ್ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ. ಇನ್ನು ರಾಜ್ಯದಲ್ಲಿ ಕಳೆದ ಬಾರಿ 25 ಸ್ಥಾನ ಗೆದ್ದಿದ್ದೆವು. ಈ ಬಾರಿಯೂ 25 ಸ್ಥಾನ ಗೆಲ್ಲುತ್ತೇವೆ. ದೇಶದ ಜನ ಮೋದಿ ನೇತೃತ್ವವನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಆರಂಭದಿಂದ ನಕಾರಾತ್ಮಕ ಧೋರಣೆ ಅನುಸರಿಸಿತ್ತು. ಲೋಕಸಭೆ ಎಂದರೆ ರಾಷ್ಟ್ರೀಯ ಮಟ್ಟದ ಚುನಾವಣೆ. ಪ್ರಧಾನಮಂತ್ರಿ ಮತ್ತು ಭಾರತೀಯ ಸರ್ಕಾರವನ್ನು ಚುನಾಯಿಸುವ ಚುನಾವಣೆ. ಆದರೆ, ಕಾಂಗ್ರೆಸ್ ನಾಯಕರು ಪ್ರತಿ ಹಂತದಲ್ಲೂ ಸ್ಥಳೀಯ ವಿಷಯಗಳನ್ನು ಚರ್ಚಿಸಲು ಪ್ರಯತ್ನಿಸಿದರು. ನಾವು ಉಚಿತ ಭಾಗ್ಯಗಳನ್ನು ಕೊಟ್ಟಿದ್ದೇವೆ ಎಂದಿದ್ದರು. ಆದರೆ, ಇದೆಲ್ಲವನ್ನು ಜನ ಸ್ಪಷ್ಟವಾಗಿ ತಿರಸ್ಕರಿಸಿ, ನಿರಾಕರಿಸಿ ದೇಶದ ಹಿತದೃಷ್ಟಿ, ಸುಭದ್ರತೆ, ಸುರಕ್ಷತೆ ಮತ್ತು ಬಡವರ ಹಿತದ ದೃಷ್ಟಿಯಿಂದ ಬಿಜೆಪಿ ಮತ್ತು ನರೇಂದ್ರ ಮೋದಿಗೆ ಮತ ಹಾಕಿದ್ದಾರೆ ಎಂದು ಜೋಶಿ ತಿಳಿಸಿದರು.
ಎಕ್ಸಿಟ್ ಪೋಲ್ ಬಳಿಕ ಇಂಡಿಯಾ ಒಕ್ಕೂಟ ಸಭೆ ಮಾಡಿ, ನಾವೇ ಅಧಿಕಾರಕ್ಕೆ ಬರುತ್ತೇವೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿರುವ ವಿಚಾರಕ್ಕೆ ಪ್ರತಿಕ್ರಯಿಸಿ, ಅವರು ಮೊದಲಿನಿಂದಲೂ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಅವರ ವಿಶ್ವಾಸದ ಹಣೆ ಬರಹ ಏನಾಗಿದೆ ಎಂದು ಎಲ್ಲರಿಗೂ ಗೊತ್ತಾಗುತ್ತಿದೆ. ನಾಳೆ ಲೋಕಸಭೆ ಫಲಿತಾಂಶ ಬಂದ ಬಳಿಕ ಇನ್ನೂ ನಿಚ್ಚಳವಾಗಿ ಗೊತ್ತಾಗುತ್ತದೆ.