ಬೆಂಗಳೂರು: ಕಂಪನಿಯೊಂದು ತಯಾರಿಸಿದ ಕಳಪೆ ಗುಣಮಟ್ಟದ ಕೀಟನಾಶಕಗಳನ್ನು ಮಳಿಗೆಯೊಂದರಲ್ಲಿ ಮಾರಾಟಕ್ಕಾಗಿ ಪ್ರದರ್ಶನಕ್ಕಿಟ್ಟಿದ್ದ ಆರೋಪದಲ್ಲಿ ಮಳಿಗೆ ಮಾಲೀಕರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.
ಮಳಿಗೆಯ ಮಾಲೀಕರಾದ ದೇವಾನಂದ್ ಪಾಟೀಲ್ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅರ್ಜಿದಾರರು ಕಂಪನಿಯ ಉತ್ಪನ್ನಗಳನ್ನು ದಾಸ್ತಾನು ಮಾಡಿದ ಹಾಗೂ ಮಾರಾಟಕ್ಕಾಗಿ ಪ್ರದರ್ಶಿಸಿದ ಅಂಗಡಿ ಮಾಲೀಕರಾಗಿದ್ದಾರೆ. ಆದರೆ, ಉತ್ಪಾದನಾ ಪ್ರಕ್ರಿಯೆಯಲ್ಲಿ ಭಾಗಿಯಾಗಿಲ್ಲ. ಹೀಗಾಗಿ ಆ ಉತ್ಪನ್ನದ ತಪ್ಪು ಬ್ರಾಂಡ್ಗಾಗಿ ಅವರನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಮತ್ತು ದಂಡ ವಿಧಿಸಲು ಅವಕಾಶವಿಲ್ಲ ಎಂದು ತಿಳಿಸಿದೆ.
ಕೀಟನಾಶಕ ಕಾಯ್ದೆಯ ಸೆಕ್ಷನ್ 33ರ ಪ್ರಕಾರ ಕಳಪೆ ಕೀಟನಾಶಕ ಉತ್ಪಾದಿಸುವ ಕಂಪನಿಯ ವ್ಯವಹಾರದಲ್ಲಿ ಆ ಕಂಪನಿಯ ಜವಾಬ್ದಾರಿಯುತ ಅಧಿಕಾರಿಗಳನ್ನು ಮಾತ್ರ ಕಂಪನಿಯೊಂದಿಗೆ ಆರೋಪಿಗಳನ್ನಾಗಿ ಹೆಸರಿಸಬಹುದು ಮತ್ತು ಕಾಯ್ದೆಯ ಸೆಕ್ಷನ್ 29 ರ ಅಡಿ ಶಿಕ್ಷಾರ್ಹ ಅಪರಾಧಗಳಿಗಾಗಿ ವಿಚಾರಣೆಯನ್ನು ಎದುರಿಸಲು ಕಂಪನಿಯ ಎಲ್ಲಾ ಉದ್ಯೋಗಿಗಳನ್ನು ಆರೋಪಿಗಳಾಗಿ ಮಾಡಲಾಗುವುದಿಲ್ಲ ಎಂದು ತಿಳಿಸಿದೆ.
ಅಲ್ಲದೆ, ಕೀಟನಾಶಕ ಕಾಯ್ದೆಯ ಸೆಕ್ಷನ್ 30 ರ ಉಪ-ಸೆಕ್ಷನ್ (3) ರ ಅಡಿ ಕೀಟನಾಶಕದ ಆಮದುದಾರ ಅಥವಾ ತಯಾರಕ ಅಥವಾ ವಿತರಣೆಗಾಗಿ ಅವನ ಏಜೆಂಟ್ ಅಲ್ಲದ ವ್ಯಕ್ತಿಗೆ ಕೆಲವು ರಕ್ಷಣೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದೆ.
ಕಳಪೆ ಗುಣಮಟ್ಟದ ಕೀಟನಾಶಕವನ್ನು ದಾಸ್ತಾನು ಮಾಡಿದ ಪ್ರತಿಯೊಬ್ಬ ವ್ಯಕ್ತಿಯು ಆರೋಪಿಯಾಗಿದ್ದು, ಕಾನೂನು ಕ್ರಮಕ್ಕೆ ಗುರಿಯಾಗುತ್ತಾನೆ ಎಂಬುದಾಗಿ ಒಪ್ಪಿಕೊಂಡಲ್ಲಿ ಚಿಲ್ಲರೆ ಅಂಗಡಿ ಮಾಲೀಕನ ಜತೆಗೆ, ಕೀಟ ನಾಶಕವನ್ನು ಖರೀದಿಸುವವರು ಸಹ ಕಾನೂನು ಕ್ರಮ ಎದುರಿಸಬೇಕಾಗಬಹುದು. ಆದ್ದರಿಂದ ಅಂತಹ ವಾದ ಒಪ್ಪಲಾಗದು ಎಂದು ಪೀಠ ಅಭಿಪ್ರಾಯಪಟ್ಟಿದೆ.
ಅಪರಾಧಿಕ ಮನಸ್ಸು (ಇಚ್ಛಿಸಿ ಅಪರಾಧ ಮಾಡುವುದು) ಸಿದ್ಧಾಂತ ಕ್ರಿಮಿನಲ್ ನ್ಯಾಯಶಾಸ್ತ್ರದ ಮೂಲಾಧಾರವಾಗಿದೆ. ಅಂದರೆ ತಪ್ಪಿತಸ್ಥ ಮನಸ್ಸು ಅಥವಾ ಉದ್ದೇಶವನ್ನು ಹೊಂದಿರುವುದಾಗಿರಲಿದೆ. ಈ ಪ್ರಕರಣದಲ್ಲಿ ಅಂತಹ ಆರೋಪಗಳು ಇಲ್ಲ. ಹೀಗಾಗಿ ಅರ್ಜಿದಾರರ ವಿರುದ್ಧ ಕಾನುನು ಕ್ರಮ ಜರುಗಿಸಲಾಗದು ಎಂದು ಪೀಠ ತಿಳಿಸಿದೆ.
ಈ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಕಂಪನಿ ತಯಾರಿಸಿದ ಕೀಟನಾಶಕವನ್ನು ಮೊದಲನೇ ಮತ್ತು ಎರಡನೇ ಆರೋಪಿಗಳು ತಮ್ಮ ಚಿಲ್ಲರೆ ಅಂಗಡಿಯಲ್ಲಿ ಮಾರಾಟಕ್ಕಾಗಿ ಸಂಗ್ರಹಿಸಿದ್ದು, ಸೀಲ್ ಮಾಡಿದ ಪೊಟ್ಟಣಗಳನ್ನು ಅಧಿಕಾರಿಗಳು ವಶಪಡಿಸಿಕೊಳ್ಳಲಾಗಿದೆ. ಆದ್ದರಿಂದ ಅರ್ಜಿದಾರರನ್ನು ವಿಚಾರಣೆಗೆ ಒಳಪಡಿಸಲು ತನಿಖಾಧಿಕಾರಿಗಳಿಗೆ ಅವಕಾಶ ನೀಡಿದರೆ, ಅದು ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗುತ್ತದೆ. ಹೀಗಾಗಿ, ಅರ್ಜಿದಾರರ ವಿರುದ್ಧದ ವಿಚಾರಣೆ ರದ್ದುಗೊಳಿಸಲಾಗುತ್ತಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ ಏನು? ಅರ್ಜಿದಾರರ ಅಂಗಡಿಯಲ್ಲಿ ಮಾರಾಟಕ್ಕಾಗಿ ಪ್ರದರ್ಶಿಸಲಾದ ಕೀಟನಾಶಕವು ಕಳಪೆ ಗುಣಮಟ್ಟದ್ದಾಗಿದೆ ಎಂದು ಆರೋಪಿಸಿ ಕೃಷಿ ಅಧಿಕಾರಿ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಕೀಟನಾಶಕ ಕಾಯ್ದೆ, 1968 ರ ಸೆಕ್ಷನ್ 3 (ಕೆ), 13, 17 ಮತ್ತು 29 ರ ಅಡಿಯಲ್ಲಿ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲರು, ಅರ್ಜಿದಾರರ ಮಳಿಗೆಯಲ್ಲಿ ಕೃಷಿ ಅಧಿಕಾರಿ ಕೀಟನಾಶಕ ವಶಪಡಿಸಿಕೊಂಡಿದ್ದಾರೆ. ಆದರೆ ಆ ಕೀಟನಾಶಕವನ್ನು ಅವರು ತಯಾರಿಸಿಲ್ಲ ಅಥವಾ ಈ ಕೀಟನಾಶಕವು ಕಳಪೆ ಗುಣಮಟ್ಟದ್ದಾಗಿದೆ ಎಂದು ಅವರಿಗೆ ತಿಳಿದಿಲ್ಲ. ಹೀಗಾಗಿ ಅವರ ವಿರುದ್ಧ ಪ್ರಕರಣ ಮುಂದುವರೆದು ವಿಚಾರಣೆಗೆ ಒಳಪಡಿಸಲಾಗುವುದಿಲ್ಲ ಎಂದು ಪೀಠಕ್ಕೆ ತಿಳಿಸಿದ್ದರು.
ಇದಕ್ಕೆ ಆಕ್ಷೇಪಿಸಿದ ಪ್ರಾಸಿಕ್ಯೂಷನ್ ಪರ ವಕೀಲರು, ಅರ್ಜಿದಾರರ ಚಿಲ್ಲರೆ ಅಂಗಡಿಯಿಂದ ಕೀಟನಾಶಕವನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಸಕ್ಷಮ ಪ್ರಯೋಗಾಲಯದ ರಾಸಾಯನಿಕ ಪರೀಕ್ಷಾ ವರದಿಯು ವಶಪಡಿಸಿಕೊಂಡ ಕೀಟನಾಶಕವು ಕಳಪೆ ಗುಣಮಟ್ಟದ್ದಾಗಿದೆ ಎಂದು ಪ್ರಮಾಣೀಕರಿಸಿದೆ. ಆದ್ದರಿಂದ ಅರ್ಜಿದಾರರ ವಿರುದ್ದದ ಪ್ರಕರಣ ಮುಂದುವರೆಯಬೇಕಾಗಿದ್ದು, ಅರ್ಜಿ ವಜಾಗೊಳಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.
ಇದನ್ನೂ ಓದಿ: '30 ವರ್ಷ ಸೇವೆ ಬಳಿಕವೂ ದಿನಗೂಲಿ ನೌಕರರ ಖಾಯಂಗೊಳಿಸದ ಸರ್ಕಾರದ ಕ್ರಮ ಮಾನವನ ಶ್ರಮ ಶೋಷಣೆ'
ಇದನ್ನೂ ಓದಿ: ತೃತೀಯ ಲಿಂಗಿಗಳ ಮೀಸಲಾತಿ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಣೆ