ಕರ್ನಾಟಕ

karnataka

ETV Bharat / state

ಚಿನ್ನದಂಗಡಿ ಮಾಲೀಕನ ಮನೆಯಲ್ಲಿ ₹15.15 ಕೋಟಿ ಮೌಲ್ಯದ ಕಳ್ಳತನ: ಆರೋಪಿಗಳ ಪತ್ತೆಗೆ ಇಂಟರ್ಪೋಲ್ ನೆರವು ಕೋರಿಕೆ - POLICE SEEK INTERPOL HELP

ಚಿನ್ನದಂಗಡಿ ಮಾಲೀಕನ ಮನೆಯಲ್ಲಿ ನಗದು, ಚಿನ್ನಾಭರಣ ಸೇರಿದಂತೆ 15.15 ಕೋಟಿ ರೂ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾದ ಆರೋಪಿಗಳ ಪತ್ತೆಗೆ ಇಂಟರ್ಪೋಲ್ ಅಧಿಕಾರಿಗಳ ಸಹಾಯ ಕೋರಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ.

ಬೆಂಗಳೂರು ಪೊಲೀಸ್​
ಬೆಂಗಳೂರು ಪೊಲೀಸ್​ (ETV Bharat)

By ETV Bharat Karnataka Team

Published : Jan 8, 2025, 2:27 PM IST

ಬೆಂಗಳೂರು: ಉದ್ಯೋಗ, ಆಶ್ರಯ ಒದಗಿಸಿದ್ದ ಮಾಲೀಕನ ಮನೆಯಲ್ಲಿ ನಗದು, ಚಿನ್ನಾಭರಣ ಸೇರಿದಂತೆ 15.15 ಕೋಟಿ ರೂ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾದ ಆರೋಪಿಗಳ ಪತ್ತೆಗೆ ಇಂಟರ್ಪೋಲ್ ಅಧಿಕಾರಿಗಳ ಸಹಾಯ ಕೋರಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ.

ಆರೋಪಿ ನಮ್ರಾಜ್ ಮತ್ತು ಆತನ ಪತ್ನಿ ತಮ್ಮ ತವರು ರಾಷ್ಟ್ರ ನೇಪಾಳದಲ್ಲಿ ತಲೆಮರೆಸಿಕೊಂಡಿರುವುದು ಖಚಿತವಾದ ಬೆನ್ನಲ್ಲೇ ಅವರನ್ನು ಸ್ಥಳೀಯ ಪೊಲೀಸರ ಮೂಲಕ ಪತ್ತೆ ಹಚ್ಚಿ ಹಸ್ತಾಂತರ ಮಾಡುವಂತೆ ಇಂಟರ್ಪೋಲ್ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಅರಿಹಂತ್ ಜ್ಯೂವೆಲ್ಲರ್ಸ್ ಶಾಫ್ ಮಾಲೀಕ ಸುರೇಂದ್ರ ಕುಮಾರ್ ಜೈನ್ ಅವರ ಮನೆಯಲ್ಲಿ ನೇಪಾಳ ಮೂಲದ ನಮ್ರಾಜ್ ಹಾಗೂ ಆತನ ಪತ್ನಿ 6 ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದರು. ಉಳಿದುಕೊಳ್ಳಲು ಮನೆ ವ್ಯವಸ್ಥೆ ಇರದ ನಮ್ರಾಜ್ ಹಾಗೂ ಆತನ ಪತ್ನಿಗೆ ತಮ್ಮದೇ ಮನೆಯಲ್ಲಿ ಸುರೇಂದ್ರ ಕುಮಾರ್ ಜೈನ್ ಒಂದು ರೂಂ ಸಹ ನೀಡಿದ್ದರು. ನಮ್ರಾಜ್ ಜ್ಯುವೆಲ್ಲರಿ ಶಾಫ್ ಸೆಕ್ಯೂರಿಟಿ ಗಾರ್ಡ್ ಕೆಲಸದ ಜೊತೆಗೆ ಸುರೇಂದ್ರ ಕುಮಾರ್ ಜೈನ್ ಅವರ ಮನೆಯ ಗಾರ್ಡನ್‌ನಲ್ಲಿ ಗಿಡಗಳಿಗೆ ನೀರು ಹಾಕುವುದು ಸೇರಿದಂತೆ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ.

ಆತನ ಪತ್ನಿ ಸುರೇಂದ್ರ ಕುಮಾರ್ ಜೈನ್ ಅವರ ಮನೆಯ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದಳು. ನವೆಂಬರ್ 1ರಂದು ಜಾತ್ರೆಯ ನಿಮಿತ್ತ ಸುರೇಂದ್ರ ಕುಮಾರ್ ಜೈನ್ ಅವರ ಕುಟುಂಬ ಗುಜರಾತ್‌ನ ಗಿರ್ನಾರಿಗೆ ತೆರಳಿತ್ತು. ಈ ವೇಳೆ ಮನೆಯಲ್ಲಿದ್ದ ಚಿನ್ನಾಭರಣ ನಗದು ಸೇರಿದಂತೆ ಸುಮಾರು 15.15 ಕೋಟಿ ರೂ ಮೌಲ್ಯದ ವಸ್ತುಗಳನ್ನು ದೋಚಿರುವ ನಮ್ರಾಜ್ ಪತ್ನಿಯೊಂದಿಗೆ ಪರಾರಿಯಾಗಿದ್ದ. ನವೆಂಬರ್ 7ರಂದು ಸುರೇಂದ್ರ ಕುಮಾರ್ ಜೈನ್ ಅವರ ಕುಟುಂಬ ಮನೆಗೆ ಮರಳಿದಾಗ ಮನೆಯಲ್ಲಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು. ಬಳಿಕ ವಿಜಯನಗರ ಪೊಲೀಸ್ ಠಾಣೆಗೆ ಸುರೇಂದ್ರ ಕುಮಾರ್ ಜೈನ್ ದೂರು ನೀಡಿದ್ದರು.

ಕೃತ್ಯ ಬೆಳಕಿಗೆ ಬರುವಷ್ಟರಲ್ಲಿ ಪರಾರಿಯಾಗಿರುವ ಆರೋಪಿಗಳು, ಬಸ್, ರೈಲ್ವೇ ಮಾರ್ಗಗಳನ್ನು ಬಳಸಿ ನೇಪಾಳಕ್ಕೆ ತೆರಳಿರುವುದು ಕಂಡುಬಂದಿದೆ. ಪುನಃ ಯಾವುದಾದರೂ ಕೆಲಸ ಅರಸಿ ಅಥವಾ ಕಳ್ಳತನದ ಉದ್ದೇಶದಿಂದ ಭಾರತಕ್ಕೆ ಬಂದರೆ ಬಂಧಿಸಲು ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆರೋಪಿಗಳು ನೇಪಾಳದಲ್ಲಿರುವುದರಿಂದ ನೇರವಾಗಿ ಬಂಧಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಇಂಟರ್ಪೋಲ್ ಅಧಿಕಾರಿಗಳ ನೆರವು ಕೋರಲು ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು‌ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಇದನ್ನೂ ಓದಿ:ಬಳ್ಳಾರಿಯಲ್ಲಿ ಕಳ್ಳತನವಾಗಿದ್ದ ಎರಡೂವರೆ ಕೆಜಿ ಚಿನ್ನಾಭರಣ ಜಪ್ತಿ; ವಾರಸುದಾರರಿಗೆ ಹಸ್ತಾಂತರಿಸಿದ ಪೊಲೀಸರು

ಇದನ್ನೂ ಓದಿ:ಸಾಲ ತೀರಿಸಲು ತಂದೆಯ ಹೆಸರಲ್ಲಿ ಎರಡು ವಿಮೆ ಮಾಡಿಸಿ ಕೊಲ್ಲಿಸಿದ ಪುತ್ರ: ನಾಲ್ವರ ಬಂಧನ

ABOUT THE AUTHOR

...view details