ಕಾರವಾರ(ಉತ್ತರ ಕನ್ನಡ): ಒಂಟಿ ಮಹಿಳೆಯರ ಬಳಿ ಹಣ, ಒಡವೆ ಇರುವುದನ್ನು ಗಮನಿಸಿ ಕೊಲೆಗೈದು ಶವದ ಮುಂದೆ ಅಮಾಯಕರಂತೆ ನಟಿಸಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲೆಯ ಸಿದ್ದಾಪುರ ಹಾಗೂ ಜೋಯಿಡಾ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣ -1: ಸಿದ್ದಾಪುರದ ಕೋಲಸಿರ್ಸಿಯಲ್ಲಿ ಪಿಗ್ಮಿ ಕಲೆಕ್ಷನ್ ಮಾಡುತ್ತಿದ್ದ ಗೀತಾ ಹುಂಡೇಕರ್ (72) ಎಂಬವರ ಕೊಲೆ ನಡೆದಿತ್ತು. ಪ್ರಕರಣದಲ್ಲಿ ಸಿದ್ದಾಪುರ ತಾಲೂಕಿನ ಕೊಂಡ್ಲಿ ಕೆಳಗಿನಕೇರಿಯ ಅಭಿಜಿತ್ ಮಡಿವಾಳ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ.
ಪ್ರಕರಣ-2: ಜೋಯಿಡಾ ತಾಲೂಕಿನ ಕ್ಯಾಸಲ್‌ರಾಕ್‌ನಲ್ಲಿ ರಾಮನಗರದ ಶಾಹಿಜಹಾನ್ ಉಸ್ಮಾನ್ ಶೇಖ್ (60) ಎಂಬ ಮಹಿಳೆಯನ್ನು ಹತ್ಯೆಗೈಯ್ಯಲಾಗಿತ್ತು. ಈ ಸಂಬಂಧ ರಾಮನಗರ ಕೆಪಿಸಿ ಕಾಲೋನಿಯ ಆರೋಪಿ ಪ್ರತಿಮಾ ಮರಾಠೆ ಎಂಬಾಕೆಯನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪ್ರಕರಣಗಳ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಸಿದ್ದಾಪುರದ ಕೋಲಸಿರ್ಸಿಯಲ್ಲಿ ಪಿಗ್ಮಿ ಕಲೆಕ್ಷನ್ ಮಾಡುತ್ತಿದ್ದ ಗೀತಾ ಹುಂಡೇಕರ್ ಕೊಲೆ ಬಗ್ಗೆ ಮೃತಳ ಅಳಿಯ ನೀಡಿದ್ದ ದೂರಿನ ಆಧಾರದ ಮೇಲೆ ಸಿದ್ದಾಪುರ ಸಿಪಿಐ ಜೆ.ಬಿ.ಸೀತಾರಾಮ್ ನೇತೃತ್ವದಲ್ಲಿ ತನಿಖೆ ನಡೆದಿತ್ತು. ಆದರೆ, ಮೂರು ದಿನಗಳವರೆಗೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ, ಈ ಹಿಂದೆ ಮನೆಯ ಹೆಂಚು ತೆಗೆದು, ಒಳಗೆ ಪ್ರವೇಶಿಸಿ ಅಪರಾಧ ಎಸಗಿದ್ದ ಪ್ರಕರಣಗಳನ್ನು ಪೊಲೀಸರು ಜಾಲಾಡಿದ್ದರು.
ಹಂತಕರು ಸಿಕ್ಕಿದ್ದು ಹೀಗೆ: ಈ ಹಿಂದೆ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಭಿಜಿತ್ ಮಡಿವಾಳ್ ಊರಿನಲ್ಲಿ ಕಾರ್ತಿಕೋತ್ಸವದ ವೇಳೆ ಭರ್ಜರಿ ಬಾಡೂಟ ಹಾಕಿರುವುದು ಪೊಲೀಸರ ಗಮನಕ್ಕೆ ಬಂದಿತ್ತು. ಈ ಸುಳಿವು ಬೆನ್ನತ್ತಿದ ಪೊಲೀಸರಿಗೆ ಅವನ ವರ್ತನೆಗಳು ಕೂಡ ಅನುಮಾನ ಮೂಡಿಸಿದ್ದವು. ಕೊನೆಗೆ ಪೊಲೀಸರು ಠಾಣೆಗೆ ಕರೆತಂದು ಬಾಡೂಟಕ್ಕೆ ಹಣ ಎಲ್ಲಿಂದ ಬಂತು ಎಂಬುದರ ಬಗ್ಗೆ ವಿಚಾರಣೆ ನಡೆಸಿದಾಗ, ಸ್ನೇಹಿತರಿಂದ ಸಾಲ ಪಡೆದಿರುವುದಾಗಿ ಕಥೆ ಕಟ್ಟಿದ್ದ. ಆದರೆ ಅವನ ಸ್ನೇಹಿತರನ್ನು ಕರೆತಂದು ವಿಚಾರಣೆ ಮಾಡಿದಾಗ ಅಸಲಿ ಸತ್ಯ ಹೊರಬಿದ್ದಿತ್ತು. ಅಷ್ಟರಲ್ಲಾಗಲೇ ಆರೋಪಿಯು ಸಿದ್ದಾಪುರ ಮುತ್ತೂಟ್ ಫೈನಾನ್ಸ್ನಲ್ಲಿ ಅಡವು ಇಟ್ಟಿದ್ದ 4 ಗ್ರಾಂ ಕಿವಿ ಓಲೆ ಪತ್ತೆ ಮಾಡಿದ್ದ ಪೊಲೀಸರು, ಬಳಿಕ ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ ಎಂದು ಎಸ್ಪಿ ಮಾಹಿತಿ ನೀಡಿದರು.
ಹೆಂಚು ತೆಗೆದು ಮನೆಯೊಳಗೆ ಸೇರಿದ್ದ ಆರೋಪಿ:ಆರೋಪಿಯು ಮಹಿಳೆ ತನ್ನ ಮನೆಗೆ ಬರುವ ಮುನ್ನವೇ ಹೆಂಚು ತೆಗೆದು ಮನೆಯೊಳಗೆ ಪ್ರವೇಶಿಸಿ ಕಾದು ಕುಳಿತು, ಕೊಲೆ ಮಾಡಿದ್ದಾನೆ. ಬಳಿಕ ಅಲ್ಲಿಂದ ನಗದು ಹಾಗೂ ಬಂಗಾರವನ್ನು ಕದ್ದು ಪರಾರಿಯಾಗಿದ್ದ. ಆದರೆ ಎರಡು ದಿನಗಳ ಬಳಿಕ ಮಹಿಳೆ ಕೊಲೆಯಾಗಿರುವುದು ಎಲ್ಲರಿಗೂ ಗೊತ್ತಾದಾಗ, ಘಟನಾ ಸ್ಥಳಕ್ಕೆ ಬಂದು ಅವರು ಒಳ್ಳೆಯವರಾಗಿದ್ದರು ಎಂದು ನಾಟಕವಾಡಿದ್ದ ಎಂದು ಎಸ್ಪಿ ತಿಳಿಸಿದರು.
ಸಹಾಯ ಮಾಡಿದವಳಿಗೆ ಸ್ಕೆಚ್ ಹಾಕಿ ಕೊಲೆ:ಜೋಯಿಡಾ ತಾಲೂಕಿನ ರಾಮನಗರದ ಕ್ಯಾಸಲ್‌ರಾಕ್-ಕಣಂಗಿನಿ ರಸ್ತೆ ಬಳಿ ನ.18ರಂದು ರಾಮನಗರದ ಶಾಹಿಜಹಾನ್ ಉಸ್ಮಾನ್ ಶೇಖ್(60) ಎಂಬ ಮಹಿಳೆ ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದರು. ಆರಂಭದಲ್ಲಿ ಅವರ ವಿಳಾಸವೇ ಪತ್ತೆ ಆಗಿರಲಿಲ್ಲ. ಬಳಿಕ ಜೋಯಿಡಾ ಪೊಲೀಸರು ವಿಳಾಸದ ಜೊತೆಗೆ, ಆರೋಪಿ ಮಹಿಳೆಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಎಂ.ನಾರಾಯಣ ಮಾಹಿತಿ ನೀಡಿದರು.