ಬೆಂಗಳೂರು:ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಸಂಬಂಧ ಪೋಕ್ಸೋ ಕಾಯಿದೆಯಡಿ ಆರೋಪ ಎದುರಿಸುತ್ತಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಜುಲೈ 15ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ನಗರದ ವಿಶೇಷ ನ್ಯಾಯಾಲಯ ಇಂದು ಸಮನ್ಸ್ ಜಾರಿ ಮಾಡಿದೆ.
ಯಡಿಯೂರಪ್ಪ ವಿರುದ್ಧ ಸಿಐಡಿ ಸಲ್ಲಿಸಿದ್ದ ಆರೋಪಪಟ್ಟಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಸುಮಾರು 700ಕ್ಕೂ ಹೆಚ್ಚು ಪುಟಗಳ ಆರೋಪಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಪ್ರಕರಣವೇನು?:ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ 2024ರ ಮಾರ್ಚ್ 3ರಂದು ಬಿಎಸ್‌ವೈ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಪ್ರಕರಣದ ಗಂಭೀರತೆ ಪರಿಗಣಿಸಿ ಸರ್ಕಾರ, ತನಿಖೆಯನ್ನು ಸಿಐಡಿಗೆ ವರ್ಗಾಯಿಸಿತ್ತು. ಇತ್ತೀಚೆಗೆ ಸಿಐಡಿ ಅಧಿಕಾರಿಗಳು ಯಡಿಯೂರಪ್ಪಗೆ ಎರಡನೇ ಬಾರಿ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು.
ಆದರೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಬಂಧನ ವಾರೆಂಟ್ ಹೊರಡಿಸುವಂತೆ ಕೋರಿ ಅಧಿಕಾರಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ ಕೋರ್ಟ್, ಬಿಎಸ್‌ವೈ ಬಂಧನಕ್ಕೆ ಜಾಮೀನುರಹಿತ ವಾರೆಂಟ್ ಹೊರಡಿಸಿತ್ತು. ಈ ಕುರಿತು ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್, ಬಿಎಸ್‌ವೈ ಅವರನ್ನು ಬಂಧಿಸದೆ ವಿಚಾರಣೆ ನಡೆಸಬೇಕು ಎಂದು ನಿರ್ದೇಶನ ನೀಡಿತ್ತು. ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಯಡಿಯೂರಪ್ಪ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಮತ್ತೊಂದು ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: 'ಕೌಟುಂಬಿಕ ದೌರ್ಜನ್ಯ ಕಾಯಿದೆಯಡಿ ಸಲ್ಲಿಸಲಾದ ಅರ್ಜಿಯನ್ನು ಪ್ರತಿವಾದಿಗಳ ವಾದ ಆಲಿಸದೇ ವಜಾಗೊಳಿಸುವಂತಿಲ್ಲ' - Domestic Violence Cases