ಬಿಜೆಪಿ ಮುಖಂಡ ರಾಜೂಗೌಡ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಕಲಬುರಗಿ: 2024ರ ಲೋಕಸಭೆ ಚುನಾವಣೆ ಕಾವು ಆರಂಭವಾಗಿದೆ. ಕಳೆದ ಸಲ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿಯಿಂದ ಪ್ರಚಾರ ಆರಂಭಿಸಿದ್ದ ಪ್ರಧಾನಿ ನರೇಂದ್ರ ಮೋದಿ ಈ ಬಾರಿಯೂ ಕೂಡ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿಯಿಂದಲೇ ಲೋಕ ಸಮರಕ್ಕೆ ಮತಬೇಟೆ ಶುರು ಮಾಡ್ತಿದ್ದಾರೆ.
ಇಂದು ಕಲಬುರಗಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದು, ನಮೋ ಸ್ವಾಗತಕ್ಕೆ ತೊಗರಿ ಕಣಜ ಕಲಬುರಗಿಯಲ್ಲಿ ಭರಪೂರ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ತವರು ಜಿಲ್ಲೆಯಿಂದಲೇ ನಮೋ ಲೋಕ ಎಲೆಕ್ಷನ್ ಕದನಕ್ಕೆ ರಣಕಹಳೆ ಮೊಳಗಿಸ್ತಿದ್ದಾರೆ.
ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಈ ಬಾರಿಯೂ ಕರ್ನಾಟಕ ರಾಜ್ಯದಲ್ಲಿ ನಮೋ ಪತಾಕೆ ಹಾರಿಸಲು ಕೇಸರಿ ಬ್ರಿಗೇಡ್ ಸಜ್ಜಾಗಿದೆ. ಮಾರ್ಚ್ 16 ರಂದು ಕರ್ನಾಟಕದಿಂದಲೇ ಲೋಕಸಭಾ ಚುನಾವಣೆ ರಣಕಹಳೆ ಮೊಳಗಿಸಲು ಕಲಬುರಗಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಹಿನ್ನೆಲೆ ನಗರದ ಎನ್ ವಿ ಕಾಲೇಜು ಮೈದಾನದಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗಿದೆ.
ಇಂದು ಮಧ್ಯಾಹ್ನ ಪಕ್ಕದ ತೆಲಂಗಾಣದಿಂದ ನೇರವಾಗಿ ಕಲಬುರಗಿ ಏರ್‌ಪೋರ್ಟ್‌ಗೆ ವಿಶೇಷ ವಿಮಾನ ಮೂಲಕ ಮೋದಿ ಆಗಮಿಸುವರು. ಏರ್‌ಪೋರ್ಟ್‌ನಿಂದ ಸೇನಾ ಹೆಲಿಕಾಪ್ಟರ್ನಲ್ಲಿ ನಗರದ ಡಿಎಆರ್ ಪೊಲೀಸ್ ಮೈದಾನಕ್ಕೆ ಆಗಮಿಸುತ್ತಾರೆ. ಬಳಿಕ ಹೆಲಿಪ್ಯಾಡ್ನಿಂದ ಸಮಾವೇಶ ನಡೆಯುವ ಸ್ಥಳ ಎನ್‌ವಿ ಮೈದಾನದವರೆಗೆ 10 ರಿಂದ 12 ನಿಮಿಷಗಳ ಕಾಲ 2.5 ಕಿ.ಮೀ ವರೆಗೆ ಸೆಮಿ ರೋಡ್ ಶೋ ನಡೆಸುವರು. ನಂತರ ಎನ್ ವಿ ಕಾಲೇಜು ಮೈದಾನದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುವರು.
ಕಲಬುರಗಿ ಎನ್ ವಿ ಕಾಲೇಜು ಮೈದಾನದಲ್ಲಿ ನಡೆಯುವ ಬೃಹತ್ ಸಮಾವೇಶದ ವೇದಿಕೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಆಸನದ ವ್ಯವಸ್ಥೆ ಮಾಡಲಾಗಿದೆ. ಪ್ರಚಾರ ಕಾರ್ಯಕ್ರಮದಲ್ಲಿ ಬೀದರ್ ಹಾಗೂ ಕಲಬುರಗಿ ಲೋಕಸಭೆ ಕ್ಷೇತ್ರದ ಸುಮಾರು 2 ಲಕ್ಷಕ್ಕೂ ಅಧಿಕ ಜನರು ಭಾಗಿಯಾಗುವ ನಿರೀಕ್ಷೆ ಇದೆ. ವಾಹನಗಳ ಪಾರ್ಕಿಂಗ್ಗಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು 2019ರ ಲೋಕಸಭಾ ಚುನಾವಣೆ ವೇಳೆ ಮೋದಿ ಕರ್ನಾಟಕದಲ್ಲಿ ಕಲಬುರಗಿಯಿಂದಲೇ ಚುನಾವಣೆ ಪಾಂಚಜನ್ಯ ಮೊಳಗಿಸಿದ್ದರು. ಈ ಬಾರಿಯೂ ಶತಾಯ-ಗತಾಯ ಕಲಬುರಗಿಯಲ್ಲಿ ಕೇಸರಿ ಪತಾಕೆ ಹಾರಿಸಿ ರಾಜ್ಯದಲ್ಲಿ 25ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲು ಕಾರ್ಯಕರ್ತರನ್ನು ನಮೋ ಹುರಿದುಂಬಿಸಲಿದ್ದಾರೆ.
ಪೊಲೀಸರ ಸರ್ಪಗಾವಲು:ಪ್ರಧಾನಿ ಮೋದಿ ಅಧ್ಯಕ್ಷತೆಯ ಬಿಜೆಪಿ ಬೃಹತ್ ಸಮಾವೇಶದ ಹಿನ್ನೆಲೆ ಎನ್ ವಿ ಮೈದಾನದ ಸುತ್ತಲೂ ಪೊಲೀಸರ ಸರ್ಪಗಾವಲು ಇರಲಿದ್ದು, ಬಂದೋಬಸ್ತ್ಗೆ ನೂರಾರು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಒಟ್ಟಿನಲ್ಲಿ ಲೋಕಸಭಾ ಚುನಾವಣೆ ಘೋಷಣೆ ಮುನ್ನವೇ ರಾಜ್ಯದಲ್ಲಿ ಎಲೆಕ್ಷನ್ ಫಿವರ್ ಶುರುವಾಗಿದ್ದು, ಈ ಸಮಾವೇಶದಿಂದ ಕೇಸರಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ಸಿಗೋದ್ರಲ್ಲಿ ಡೌಟೇ ಇಲ್ಲ. ಅದೇನೇ ಇದ್ದರೂ ರಾಷ್ಟ್ರದ ಹ್ಯಾಟ್ರಿಕ್ ಅಧಿಕಾರದ ಗದ್ದುಗೆ ಏರಲೂ ಬಿಜೆಪಿ ಅಬ್ಬರದ ಪ್ರಚಾರಕ್ಕೆ ಅಣಿಯಾಗ್ತಿದೆ.
ಇದನ್ನೂಓದಿ:ಚುನಾವಣಾ ಬಾಂಡ್ ಸಂಬಂಧ ಸುಪ್ರೀಂ ನೇತೃತ್ವದಲ್ಲಿ ತನಿಖೆ ನಡೆಸಿ, ಅಲ್ಲಿಯವರೆಗೆ ಬಿಜೆಪಿ ಖಾತೆ ಜಪ್ತಿ ಮಾಡಿ: ಖರ್ಗೆ