ಬೆಂಗಳೂರು: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿರುವ 250 ವರ್ಷಗಳಿಗೂ ಹಳೆಯದಾದ ಅಲ್ಲಮಪ್ರಭು ಸ್ವಾಮಿ ಮತ್ತು ವಿಠ್ಠಲ ದೇವಸ್ಥಾನವನ್ನು ಪಾರಂಪರಿಕ ಸ್ಮಾರಕ ಎಂದು ಘೋಷಿಸಬೇಕು ಹಾಗೂ ಅದನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಇಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿತು.
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ವಿದ್ಯಾರ್ಥಿ ನಿಖಿಲ್ ವಿಠ್ಠಲ ಪಾಟೀಲ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ ಅವರಿದ್ದ ನ್ಯಾಯಪೀಠ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ನವೆಂಬರ್ 11ಕ್ಕೆ ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರ ನಿಖಿಲ್ ಖುದ್ದು ಹಾಜರಾಗಿ, ಹಿಡಕಲ್ ಜಲಾಶಯದಲ್ಲಿ ಮುಳುಗಡೆಯಾಗುವ ಅಲ್ಲಮ್ಮಪ್ರಭು ಸ್ವಾಮಿ ಮತ್ತು ವಿಠ್ಠಲ ದೇವಾಲಯ ಸೇರಿದಂತೆ ರಾಜ್ಯದಲ್ಲಿ ಶಿಥಿಲಗೊಂಡಿರುವ ಹಾಗೂ ನದಿಗಳ ಮತ್ತು ಅಣೆಕಟ್ಟೆಗಳ ನೀರಿನಲ್ಲಿ ಮುಳುಗಡೆಯಾಗುವಂತಹ ಪುರಾತನ ದೇವಾಲಯಗಳನ್ನು ಸಂರಕ್ಷಣೆ ಮಾಡಬೇಕು. ಕರ್ನಾಟಕ ರಾಜ್ಯದ ಸಾಂಸ್ಕೃತಿಕ ಪರಂಪರೆ ಮತ್ತು ಐತಿಹಾಸಿಕ ಧಾರ್ಮಿಕ ಪಾರಂಪರಿಕ ಸ್ಮಾರಕಗಳನ್ನು ಸಂರಕ್ಷಣೆ ಮಾಡಬೇಕಾಗಿದೆ. ಕನ್ನಡಿಗರ ಸಾಂಸ್ಕೃತಿಕ ಪರಂಪರೆ ಕಾಪಾಡಬೇಕಾಗಿದೆ. ಅದನ್ನು ನೂರಾರು ವರ್ಷಗಳ ಕಾಲ ಉಳಿಯುವಂತೆ ಮಾಡಬೇಕು.