ಕರ್ನಾಟಕ

karnataka

ETV Bharat / state

ಪಿಲಿಕುಳದಲ್ಲಿ ನ.17 ರಂದು ಕಂಬಳ ಆಯೋಜನೆ ನಿರ್ಧಾರವಾಗಿಲ್ಲ: ಹೈಕೋರ್ಟ್‌ಗೆ ಮಾಹಿತಿ ನೀಡಿದ ಸರ್ಕಾರ - KAMBALA

ಪಿಲಿಕುಳದಲ್ಲಿ ನವೆಂಬರ್ 17 ರಂದು ಕಂಬಳ ಸ್ಪರ್ಧೆ ಆಯೋಜಿಸುವ ಕುರಿತು ಈವರೆಗೆ ಯಾವುದೇ ನಿರ್ಧಾರವಾಗಿಲ್ಲ ಎಂದು ಹೈಕೋರ್ಟ್​ಗೆ ಸರ್ಕಾರ ಮಾಹಿತಿ ನೀಡಿದೆ.

Pilikula Kambala HighCourt
ಪಿಲಿಕುಳದಲ್ಲಿ ಕಂಬಳ ಆಯೋಜನೆ ನಿರ್ಧಾರವಾಗಿಲ್ಲ: ಹೈಕೋರ್ಟ್‌ಗೆ ಮಾಹಿತಿ ನೀಡಿದ ಸರ್ಕಾರ (ETV Bharat)

By ETV Bharat Karnataka Team

Published : Nov 12, 2024, 5:56 PM IST

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳದ ನಿಸರ್ಗ ಧಾಮದ ಬಳಿ ಇದೇ 17ರಂದು ಕಂಬಳ ಸ್ಪರ್ಧೆ ನಡೆಸುವ ಕುರಿತು ಈವರೆಗೂ ನಿರ್ಧಾರವಾಗಿಲ್ಲ ಎಂದು ಹೈಕೋರ್ಟ್​ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳದಲ್ಲಿ ನವೆಂಬರ್ 17ಕ್ಕೆ ನಡೆಯಲಿರುವ ಕಂಬಳ ಸ್ಪರ್ಧೆಯನ್ನು ಪ್ರಾಣಿ ಸಂಗ್ರಹಾಲಯ (ನಿಸರ್ಗ ಧಾಮ)ದ ಸಮೀಪ ನಡೆಸಲಾಗುತ್ತಿರುವುದರಿಂದ ಅಲ್ಲಿನ ಪ್ರಾಣಿಗಳಿಗೆ ಸಮಸ್ಯೆಯಾಗುತ್ತದೆ ಎಂದು ಆಕ್ಷೇಪಿಸಿ ಪೆಟಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ವಿಭಾಗೀಯ ಪೀಠಕ್ಕೆ ಸರ್ಕಾರ ಮಾಹಿತಿ ನೀಡಿತು.

ದಕ್ಷಿಣ ಕನ್ನಡ ಮತ್ತು ಉಡುಪಿಯ ಯಾವುದೇ ಭಾಗದಲ್ಲಿ ಕಂಬಳ ಸ್ಪರ್ಧೆಗೆ ಆಕ್ಷೇಪವಿಲ್ಲ. ಆದರೆ, ನವೆಂಬರ್‌ 17ರಂದು ನಡೆಸಲು ಉದ್ದೇಶಿಸಿರುವ ಸ್ಪರ್ಧೆಯು ಪ್ರಾಣಿ ಸಂಗ್ರಹಾಲಯದ ಸಮೀಪ ನಡೆಯುತ್ತಿದೆ. ಇದರಿಂದ ಅಲ್ಲಿರುವ ವನ್ಯಜೀವಿಗಳಿಗೆ ಸಮಸ್ಯೆಯಾಗುತ್ತದೆ. ಈ ಸಂಬಂಧ ಪ್ರಾಣಿ ಸಂಗ್ರಹಾಲಯದ ನಿರ್ದೇಶಕರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ ಎಂದು ವಿಚಾರಣೆ ವೇಳೆ ಪೇಟಾ ಪರ ವಕೀಲರು ತಿಳಿಸಿದರು.

ಈ ವೇಳೆ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ, ನವೆಂಬರ್‌ 17ಕ್ಕೆ ಪಿಳಿಕುಳದಲ್ಲಿ ಕಂಬಳ ಸ್ಪರ್ಧೆ ನಡೆಸುವುದು ಇನ್ನೂ ನಿರ್ಧಾರವಾಗಿಲ್ಲ. ಪಿಳಿಕುಳ ಅಭಿವೃದ್ಧಿ ಪ್ರಾಧಿಕಾರದ ಸ್ಥಳದಲ್ಲಿ ಕಂಬಳ ಸ್ಪರ್ಧೆ ಆಯೋಜಿಸಲಾಗುತ್ತದೆ. ಅವರು ವರದಿ ನೀಡಬೇಕು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಂಬಳ ಸ್ಪರ್ಧೆ ಉಸ್ತುವಾರಿಯಾಗಿರುತ್ತಾರೆ. ಹೀಗಾಗಿ, ಅವರನ್ನು ಅರ್ಜಿದಾರರು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿಸಬೇಕು ಎಂದು ಕೋರಿದರು.

ನವೆಂಬರ್‌ 5ರಂದು ಬೆಂಗಳೂರು ಮಹಾನಗರದಲ್ಲಿ ಕಂಬಳ ಆಯೋಜಿಸಲು ಬೆಂಗಳೂರು ಕಂಬಳ ಸಮಿತಿಗೆ ಅನುಮತಿ ನೀಡದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಪೆಟಾ ಕೋರಿತ್ತು. ಆಗ ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿ ಕಂಬಳ ಆಯೋಜಿಸುವ ನಿರ್ಧಾರವಾಗಿಲ್ಲ. ಪಿಲಿಕುಳದಲ್ಲಿ ನವೆಂಬರ್‌ 17ರಂದು ಸ್ಪರ್ಧೆ ನಡೆಸಲಾಗುವುದು ಎಂದು ತಿಳಿಸಿತ್ತು. ವಾದ ಆಲಿಸಿದ ಪೀಠ, ಅರ್ಜಿಗೆ ಸಂಬಂಧಿಸಿದಂತೆ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿ ಸೇರಿಸಲು ಅನುಮತಿ ನೀಡಿ ವಿಚಾರಣೆಯನ್ನು ಇದೇ 20 ಕ್ಕೆ ಮುಂದೂಡಿತು.

ಈ ಮೊದಲು ಬೆಂಗಳೂರು ನಗರದಲ್ಲಿ ಕಂಬಳ ಸಮಿತಿಗೆ ಕಂಬಳ ಆಯೋಜಿಸಲು ಅನುಮತಿ ನೀಡದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್​ನಲ್ಲಿ ಪೆಟಾ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

ಇದನ್ನೂ ಓದಿ:ಪಿಲಿಕುಳ ಕಂಬಳಕ್ಕೆ ವಿಘ್ನ: 'ಸೈಲೆಂಟ್ ಝೋನ್' ಮಾಡುವಂತೆ ಜಿಲ್ಲಾಡಳಿತಕ್ಕೆ ಪತ್ರ - Pilikula Kambala

ಇದನ್ನೂ ಓದಿ: ಶಿವಮೊಗ್ಗ ಕಂಬಳ ಆಯೋಜನೆಗೆ 'ಕಾಂತಾರ' ಸಿನಿಮಾ ಪ್ರೇರಣೆ - Shivamogga Kambala

ABOUT THE AUTHOR

...view details