ಶಿರಸಿ: ಕಳೆದ 15-20 ದಿನಗಳಿಂದ ಶಿರಸಿಯಲ್ಲಿ ಮಕ್ಕಳಿಗೆ ಕುಡಿಯುವ ನೀರಿಗಾಗಿ ಬಾವಿ ತೋಡಲು ಸೃಷ್ಟಿಯಾಗಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ. ನೀರು ಬರುವವರೆಗೆ ಬಾವಿ ತೋಡಲು ಅವಕಾಶ ನೀಡಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ. ಸ್ಥಳಕ್ಕೆ ಭೇಟಿ ನೀಡಿದ ಸಂಸದ ಅನಂತಕುಮಾರ ಹೆಗಡೆ, ಜಿಲ್ಲಾಧಿಕಾರಿಗಳು ಬಾವಿ ತೋಡಲು ಸೂಚಿಸಿರುವುದಾಗಿ ತಿಳಿಸಿದರು.
ಶಿರಸಿಯ ಗಣೇಶ ನಗರದ ಅಂಗನವಾಡಿ ಕೇಂದ್ರ 6ರಲ್ಲಿ ಗೌರಿ ನಾಯ್ಕ ಎಂಬ ಮಹಿಳೆ ಅಂಗನವಾಡಿ ಮಕ್ಕಳಿಗಾಗಿ ಕುಡಿಯುವ ನೀರು ನೀಡಲು ಬಾವಿ ತೋಡಲು ಮುಂದಾಗಿದ್ದರು. 30 ಅಡಿ ಆಳದ ಬಾವಿಯನ್ನು ಒಬ್ಬರೇ ತೆಗೆದಿದ್ದಾರೆ. ಬಳಿಕ ಇದಕ್ಕೆ ಸರ್ಕಾರದ ಅನುಮತಿ ಇಲ್ಲ ಎಂದು ಕೆಲಸ ನಿಲ್ಲಿಸಲಾಗಿತ್ತು. ನೀವು ಬಾವಿ ತೋಡುವುದು ಬೇಡ, ಸರ್ಕಾರದಿಂದಲೇ ಈ ಕೆಲಸವನ್ನು ಮಾಡಿಸುತ್ತೇವೆ ಎಂದು ಸಚಿವ ಮಂಕಾಳು ವೈದ್ಯ ಹೇಳಿದ್ದರು. ಬಳಿಕ ಗೌರಿ ನಾಯ್ಕ ಅವರಿಗೆ ಸನ್ಮಾನ ಕೂಡ ಮಾಡಿದ್ದರು. ಈ ವೇಳೆ ಅಧಿಕಾರಿಗಳು ಸಹ ಹಾಜರಿದ್ದರು. ಇದರ ಬೆನ್ನಲ್ಲೇ ಕಂದಾಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಬಾವಿಯನ್ನು ಬಂದ್ ಮಾಡಲಾಗಿತ್ತು.
ಇದರಿಂದ ಬುಧವಾರ ಗಣೇಶ ನಗರ ಭಾಗದ ಜನರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ತಹಶೀಲ್ದಾರ ಕಚೇರಿಗೆ ತೆರಳಿ ಬಾವಿ ತೆಗೆಯಲು ಅನುಮತಿ ನೀಡುವಂತೆ ಪಟ್ಟು ಹಿಡಿದಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಸಂಸದ ಅನಂತಕುಮಾರ ಹೆಗಡೆ, ಈ ಬಗ್ಗೆ ಮಾಹಿತಿ ಪಡೆದರು. ಅಲ್ಲದೇ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರೊಂದಿಗೆ ದೂರವಾಣಿ ಮುಖಾಂತರ ಮಾತನಾಡಿ ಬಾವಿ ತೋಡಲು ಅನುಮತಿ ನೀಡುವಂತೆ ಕೇಳಿದರು. ಅನುಮತಿ ಸಿಗುತ್ತಿದ್ದಂತೆ ಮುಚ್ಚಿದ್ದ ಬಾವಿ ತೆರೆದು, ಗೌರಿ ನಾಯ್ಕ ಅವರು ಬಾವಿಗಿಳಿದು ಸಂತಸಪಟ್ಟರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಂಸದ ಅನಂತಕುಮಾರ್ ಹೆಗಡೆ, ಗೌರಿ ನಾಯ್ಕ ಜತೆ ನಾವೆಲ್ಲರೂ ನಿಲ್ಲುತ್ತೇವೆ. ಅವರ ಕೈನಿಂದಲೇ ಬಾವಿ ಪೂರ್ಣಗೊಳಿಸುತ್ತೇವೆ. ಯಾರು ಅಡ್ಡಿ ಪಡಿಸುತ್ತಾರೋ ಅವರು ನನ್ನ ಎದುರಿಗೆ ಬರಲಿ. ಬಾವಿ ಅವರಿಂದ ಪೂರ್ಣಗೊಳಿಸಿ ಬಾವಿಗೆ ಅವರ ಹೆಸರು ಇಡುತ್ತೇವೆ. ಇದೊಂದು ಭಾವನಾತ್ಮಕ ಸಂಗತಿಯಾಗಿದೆ. ಹಿಂದೆ ಆಗಿರುವ ಬಗ್ಗೆ ಮಾತನಾಡುವುದು ಬೇಡ. ಈಗ ಕೆಲಸ ಆಗಲಿದೆ ಎಂದರು.