ಹಾಸನ (ಅರಸೀಕೆರೆ):ಆರ್ಕೆಸ್ಟ್ರಾ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಗೃಹಮಂಡಳಿ ಅಧ್ಯಕ್ಷ ಮತ್ತು ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರಿಗೆ ಗ್ರಾಮಸ್ಥರು ಘೇರಾವ್ ಹಾಕುವ ಮೂಲಕ ವೇದಿಕೆ ಮೇಲಿಂದ ಕೆಳಗಿಳಿಯುವಂತೆ ಮಾಡಿದ ಘಟನೆ ನಡೆದಿದೆ.
ಅರಸೀಕೆರೆಯ ಕೆಂಕೆರೆ ಗ್ರಾಮದಲ್ಲಿ ಭಾನುವಾರ ರಾತ್ರಿ ಗಣಪತಿ ನಿಮಜ್ಜನ ಅಂಗವಾಗಿ ಆರ್ಕೆಸ್ಟ್ರಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಬಂದಿದ್ದ ಶಾಸಕ ಕೆ.ಎಂ. ಶಿವಲಿಂಗೇಗೌಡ ವಿರುದ್ಧ ಗ್ರಾಮಸ್ಥರು ತಿರುಗಿಬಿದ್ದಿದ್ದಾರೆ. ಅವರ ವಿರುದ್ಧ ಘೋಷಣೆ ಕೂಗುವ ಮೂಲಕ ಶಾಸಕರನ್ನು ನಿಂದಿಸಿದ್ದು, ವೇದಿಕೆ ಮೇಲಿಂದ ಶಾಸಕ ತೆರಳುವಂತೆ ಅಪಮಾನ ಮಾಡಿದ್ದಾರೆ.
ವೇದಿಕೆ ಮೇಲೆ ಭಾಷಣ ಆರಂಭಿಸುತ್ತಿದ್ದಂತೆ ರೊಚ್ಚಿಗೆದ್ದ ಗ್ರಾಮಸ್ಥರು, ಕೆರೆಗೆ ನೀರು ತುಂಬಿಸುವ ಯೋಜನೆ ಏಕೆ ರದ್ದು ಮಾಡಿಸಿದ್ದೀರಿ ಎಂದು ಪ್ರಶ್ನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಶಾಸಕ ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದವಾಗಿದೆ. ಬಳಿಕ ಗ್ರಾಮಸ್ಥರು ಶಾಸಕರಿಗೆ ಘೇರಾವ್ ಹಾಕಿದರು.