ಬೆಂಗಳೂರು: ಪ್ರತಿಪಕ್ಷಗಳ ವಿರೋಧದ ಮಧ್ಯೆ ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ ಹಾಗೂ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕೃತವಾಗಿವೆ.
ಸರ್ಕಾರದಿಂದ ನೆರವು ಪಡೆದಿರುವ ಸಹಕಾರ ಮತ್ತು ಸೌಹಾರ್ದ ಸಹಕಾರಿ ಸಂಘಗಳಿಗೆ ರಾಜ್ಯ ಸರ್ಕಾರದಿಂದ ಮೂರು ಮಂದಿ ಪ್ರತಿನಿಧಿಗಳನ್ನು ನಾಮ ನಿರ್ದೇಶನ ಮಾಡಲು ಹಾಗೂ ನಾಮ ನಿರ್ದೇಶನದಲ್ಲೂ ಮೀಸಲಾತಿ ಕಲ್ಪಿಸುವ ವಿಧೇಯಕ ಇದಾಗಿದೆ. ಈ ತಿದ್ದುಪಡಿ ಬಿಲ್‌ನಿಂದಾಗಿ ಇನ್ನು ಮುಂದೆ ಸಹಕಾರ ಸಂಘಗಳ ಸಾಮಾನ್ಯ ಸಭೆಯಲ್ಲಿ ಭಾಗವಹಿಸದವರು ಯಾವುದೇ ವಹಿವಾಟು ನಡೆಸದವರೂ ಸೇರಿದಂತೆ ಎಲ್ಲಾ ಸದಸ್ಯರಿಗೂ ಮತದಾನ ಮಾಡಲು ಅನುಮತಿ ನೀಡಲಾಗಿದೆ. ಜತೆಗೆ ಸಹಕಾರ ಸಂಘಗಳ ಚುನಾವಣೆಗೆ ಇದ್ದ ಚುನಾವಣಾ ಪ್ರಾಧಿಕಾರ ರದ್ದು ಮಾಡಿ, ರಿಜಿಸ್ಟ್ರಾರ್ ನಿಯಂತ್ರಣದ ಅಡಿಯಲ್ಲಿ ಸಹಕಾರ ಚುನಾವಣಾ ವಿಭಾಗವನ್ನು ಸೃಜಿಸಲಾಗಿದೆ.
ಈ ಬಿಲ್ ನಿಂದ ಸಹಕಾರ ಸಂಘಗಳ ಮೇಲೆ ಸರ್ಕಾರ ಹಸ್ತಕ್ಷೇಪ ಹೆಚ್ಚಾಗಲಿದೆ. ನಾಮನಿರ್ದೇಶಿತರು ಪದಾಧಿಕಾರಿಗಳ ಆಯ್ಕೆಯನ್ನು ನಿರ್ಧರಿಸುವಂತಾಗಲಿದೆ. ಇದು ಸಹಕಾರ ಸಂಘಗಳ ವ್ಯವಸ್ಥೆಯನ್ನೇ ಸರ್ವ ನಾಶ ಮಾಡುತ್ತದೆ ಎಂದು ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದವು.
ಇದರ ಹೊರತಾಗಿಯೂ ಬಿಲ್ ಸಮರ್ಥಿಸಿಕೊಂಡ ಕೆ.ಎನ್. ರಾಜಣ್ಣ, "ನಾಮನಿರ್ದೇಶಿತ ಸದಸ್ಯರಿಗೆ ಪದಾಧಿಕಾರಿ ಹುದ್ದೆಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ. ಜತೆಗೆ ಯಾವ ಸಮುದಾಯದ ಪ್ರಾತಿನಿಧ್ಯತೆ ಇರುವುದಿಲ್ಲವೋ ಅಂತಹ ಸಮುದಾಯದ ಪ್ರತಿನಿಧಿಯನ್ನು ಮಾತ್ರ ಆಯ್ಕೆ ಮಾಡಲಾಗುವುದು. ಇದರಿಂದ ಸಾಮಾಜಿಕ ನ್ಯಾಯದ ಕಲ್ಪನೆಗೆ ನ್ಯಾಯ ಒದಗಿಸಿದಂತಾಗುತ್ತದೆ. ಸಣ್ಣಪುಟ್ಟ ಲೋಪದೋಷ ಇದ್ದರೆ ಅದನ್ನು ಸರಿಪಡಿಸಲಾಗುವುದು ಎಂದು ಹೇಳಿದರು.
ಜೆಡಿಎಸ್‌ನ ಜಿ.ಟಿ. ದೇವೇಗೌಡ ಮಾತನಾಡಿ, ಸಹಕಾರ ವ್ಯವಸ್ಥೆ ಹಾಳು ಮಾಡಲು ಸಹಕಾರ ಸಚಿವರ ಮೇಲೆ ಒತ್ತಡ ಹಾಕಿ ಬಿಲ್ ತಂದಿದ್ದಾರೆ. ಸಿದ್ದರಾಮಯ್ಯ ಅವರಿಗೆ ಮೊದಲಿನಿಂದಲೂ ಸಹಕಾರ ಕ್ಷೇತ್ರ ಅಪಥ್ಯ. ಅವರು ಗದರಿ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಕೊಡಿಸಿದ ತಕ್ಷಣ ಇವರು ಸಹಿ ಹಾಕಿದ್ದಾರೆ. ಸಹಕಾರ ಕ್ಷೇತ್ರ ಸರ್ಕಾರಕ್ಕಿಂತ ದೊಡ್ಡದು. ನಾಮನಿರ್ದೇಶನ ಹಾಗೂ ಮೀಸಲಾತಿಯನ್ನು ನಿಲ್ಲಿಸಬೇಕು ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್, ಸಮಾನ ಮನಸ್ಕರು ಸೇರಿ ಸಂಘಗಳನ್ನು ಕಟ್ಟಿರುತ್ತೇವೆ. ನನ್ನ ಸಂಘ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದ್ದು 3,200 ಕೋಟಿ ರೂ. ಠೇವಣಿ ಇದೆ. ನಮ್ಮ ಮೇಲೆ ನಂಬಿಕೆಯಿಂದ ಠೇವಣಿ ಇಟ್ಟಿರುತ್ತಾರೆ. ಇದೀಗ ಅವುಗಳಲ್ಲಿ ಮೀಸಲಾತಿ ನೀಡಬೇಕು. ಯಾರೋ ಕಟ್ಟಿದ ಸಂಸ್ಥೆಗೆ ಯಾರನ್ನೋ ನಾಮ ನಿರ್ದೇಶನ ಮಾಡುವುದು ಎಂದರೆ ಹೇಗೆ? ಇದು ಒಕ್ಕಲಿಗರು ಹಾಗೂ ಲಿಂಗಾಯತರ ಮೇಲೆ ಸೇಡು ತೀರಿಸಿಕೊಳ್ಳುವಂತಹ ನಿರ್ಧಾರ ಎಂದು ಕಿಡಿಕಾರಿದರು.
ವಿಧೇಯಕಗಳ ಮಂಡನೆ:ವಿಧಾನಸಭೆಯಲ್ಲಿ ಕೆಲ ವಿಧೇಯಕಗಳ ಮಂಡನೆ ಮಾಡಲಾಯಿತು. 2024ನೇ ಸಾಲಿನ ಕರ್ನಾಟಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿದ್ದುಪಡಿ ವಿಧೇಯಕ, ಕರ್ನಾಟಕ ಕೆಲವು ಅಧಿನಿಯಮಗಳು ಮತ್ತು ಪ್ರಾದೇಶಕ ಕಾನೂನುಗಳನ್ನ ನಿರಸನಗೊಳಿಸುವ ವಿಧೇಯಕ, ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, ಸಾಲಿನ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯಿ ದತ್ತಿಗಳ ವಿಧೇಯಕ, ಸಾಲಿನ ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, ಸಾಲಿನ ಹುಲಿಗೆಮ್ಮ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, ಸಾಲಿನ ಕರ್ನಾಟಕ ವೃತ್ರಿಪರ ಸಿವಿಲ್ ಇಂಜಿನಿಯರ್ ಗಳ ವಿಧೇಯಕ ಮತ್ತು ಸಾಲಿನ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ವಿಧೇಯಕ ಮಂಡನೆ ಮಾಡಲಾಯಿತು.
ಇದನ್ನೂ ಓದಿ:ನಮ್ಮ ಸರ್ಕಾರ ಬಂದಾಗಿನಿಂದ ಕಾನೂನು ಸುವ್ಯವಸ್ಥೆ ಕುಸಿದಿಲ್ಲ; ಸಚಿವ ಜಿ.ಪರಮೇಶ್ವರ್