ಹಾವೇರಿ:ನಾಡಹಬ್ಬದ ದಸರಾ ಸಂಭ್ರಮ ನಾಡಿನೆಲ್ಲಡೆ ಮನೆ ಮಾಡಿದೆ. ದಸರಾ ದಿನಗಳಲ್ಲಿ ಮಹಿಳೆಯರಿಗಂತೂ ಸಂಭ್ರಮವೇ ಸಂಭ್ರಮ. ಅದರಲ್ಲೂ ಗೊಂಬೆಗಳ ಪ್ರದರ್ಶನವೆಂದರೆ ಹೆಂಗಳೆಯರಿಗೆ ಅಚ್ಚುಮೆಚ್ಚು. ಕೆಲ ಮನೆಗಳಲ್ಲಿ ಸಹಸ್ರಾರು ಸಂಖ್ಯೆಯ ಗೊಂಬೆಗಳನ್ನು ಕೂಡಿಸುವುದು ಉಂಟು. ಮೈಸೂರು ಭಾಗದಲ್ಲಿ ದಸರಾ ಸಂದರ್ಭದಲ್ಲಿ ಗೊಂಬೆಗಳ ಪ್ರದರ್ಶನ ಏರ್ಪಡಿಸುವುದು ಸಂಪ್ರದಾಯ.
ಆದರೆ ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯಲ್ಲಿ ಗೃಹಿಣಿಯೊಬ್ಬರು ಮನೆಯಲ್ಲಿಯೇ ದಸರಾ ಗೊಂಬೆ ಕೂರಿಸುವ ಮೂಲಕ ದಸರಾ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾಂವ್ ತಾಲೂಕಿನ ಬಂಕಾಪುರದ ಪದ್ಮಾ ಹಿರೇಮಠ ತಮ್ಮ ಮನೆಯಲ್ಲಿ ಮೂರು ಸಾವಿರಕ್ಕೂ ಅಧಿಕ ಗೊಂಬೆಗಳನ್ನು ಕೂರಿಸಿದ್ದಾರೆ. ಅಲ್ಲದೆ ಪ್ರತಿನಿತ್ಯ ಮುತ್ತೈದೆಯರನ್ನು ಕರೆದು ಉಡಿ ತುಂಬಿ, ಕುಂಕುಮ ಅರಶಿನ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.
ಗೊಂಬೆಗಳ ಲೋಕ ಅನಾವರಣ: ವಿಷ್ಣುವಿನ ದಶಾವತಾರಗಳು, ರಾಮಾಯಣ, ಮಹಾಭಾರತ, ಸಂಗೀತೋಪಕರಣಗಳು, ವಿವಿಧ ಹಣ್ಣು, ತರಕಾರಿಗಳ ಗೊಂಬೆಗಳು ಗಮನ ಸೆಳೆಯುತ್ತವೆ. ಅದರಲ್ಲೂ ಹಲವು ಥರದ ಪಕ್ಷಿಗಳ ಗೊಂಬೆಗಳು ಪಕ್ಷಿಲೋಕವನ್ನೇ ಅನಾವರಣಗೊಳಿಸಿವೆ. ಸವದತ್ತಿ ಯಲ್ಲಮ್ಮ, ಯಡೆಯೂರು ಸಿದ್ದಲಿಂಗೇಶ, ಪಂಡಿತ ಪುಟ್ಟರಾಜ ಗವಾಯಿ ಸೇರಿದಂತೆ ವಿಭಿನ್ನ ಮೂರ್ತಿಗಳು ನೋಡುಗರಲ್ಲಿ ಭಕ್ತಿಭಾವ ಹುಟ್ಟಿಸುತ್ತವೆ. ಬ್ರಹ್ಮ, ವಿಷ್ಣು, ಶಿವ, ಗೌರಿ, ಪಾರ್ವತಿ, ಕೃಷ್ಣ ಸೇರಿದಂತೆ ವಿವಿಧ ದೇವಾನುದೇವತೆಗಳ ಮೂರ್ತಿಗಳು ಆಕರ್ಷಣೀಯವಾಗಿವೆ.
ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದ ಯೋಜನೆಗಳದ್ದೇ ಥೀಮ್ ಅನ್ನು ಪದ್ಮಾ ಹಿರೇಮಠ ಮಾಡಿದ್ದಾರೆ. ಉಜ್ವಲ ಗ್ಯಾಸ್, ಸ್ವಚ್ಛ ಭಾರತ, ಬಯಲು ಬಹಿರ್ದೆಸೆ ಮುಕ್ತ ಭಾರತ, ಚಂದ್ರಯಾನ, ಸೇನೆಯಲ್ಲಿ ಹೊಸ ಉಪಕರಣಗಳು, ಇತ್ತೀಚೆಗೆ ಜಾರಿಗೆ ತಂದ ವಂದೆ ಭಾರತ್ ರೈಲು ಯೋಜನೆಗಳನ್ನು ಗೊಂಬೆಗಳ ಮೂಲಕ ಪದ್ಮಾ ಅನಾವರಣಗೊಳಿಸಿದ್ದಾರೆ.